×
Ad

ಡೆನ್ಮಾರ್ಕ್ ಓಪನ್: ಸಿಂಧು, ಸಾಯಿ ಪ್ರಣೀತ್ ಶುಭಾರಂಭ

Update: 2019-10-15 23:48 IST

ಒಡೆನ್ಸ್(ಡೆನ್ಮಾರ್ಕ್), ಅ.15: ವಿಶ್ವ ಚಾಂಪಿಯನ್ ಪಿ.ವಿ.ಸಿಂಧು ಮಹಿಳೆಯರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಇಂಡೋನೇಶ್ಯದ ಜಾರ್ಜಿಯಾ ಮರಿಸ್ಕಾ ಟುನ್‌ಜುಂಗ್ ವಿರುದ್ಧ ನೇರ ಗೇಮ್‌ಗಳ ಅಂತರದಿಂದ ಜಯ ಸಾಧಿಸುವುದರೊಂದಿಗೆ ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ.

ಇಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಐದನೇ ಶ್ರೇಯಾಂಕದ ಸಿಂಧು ಮಾಜಿ ವಿಶ್ವ ಜೂನಿಯರ್ ಚಾಂಪಿಯನ್ ಗ್ರೆಗೊರಿಯಾ ವಿರುದ್ಧ ಕೇವಲ 38 ನಿಮಿಷಗಳ ಹೋರಾಟದಲ್ಲಿ 22-20, 21-18 ಗೇಮ್‌ಗಳ ಅಂತರದಿಂದ ಜಯ ಸಾಧಿಸಿದರು. ಈ ಮೂಲಕ ಜಾರ್ಜಿಯಾ ವಿರುದ್ಧ ಆಡಿರುವ ಎಲ್ಲ ಐದೂ ಪಂದ್ಯಗಳಲ್ಲಿ ಜಯ ದಾಖಲಿಸಿದರು.

ಚೀನಾ ಹಾಗೂ ಕೊರಿಯಾ ಓಪನ್‌ನಲ್ಲಿ ಬೇಗನೆ ಸೋತು ನಿರ್ಗಮಿಸಿರುವ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಜಯಿಸಿರುವ ಸಿಂಧು ಮುಂದಿನ ಸುತ್ತಿನಲ್ಲಿ ಕೊರಿಯಾದ ಅನ್ ಸೆ ಯಂಗ್‌ರನ್ನು ಮುಖಾಮುಖಿಯಾಗಲಿದ್ದಾರೆ.

  ಇದೇ ವೇಳೆ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಜಯಿಸಿರುವ ಬಿ.ಸಾಯಿ ಪ್ರಣೀತ್ ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ 36 ನಿಮಿಷಗಳ ಕಾಲ ನಡೆದ ಹೋರಾಟದಲ್ಲಿ ಲೆಜೆಂಡರ್ ಲಿನ್ ಡಾನ್‌ರನ್ನು 21-14, 21-17 ಗೇಮ್‌ಗಳ ಅಂತರದಿಂದ ಸೋಲಿಸಿದರು.

ಹೈದರಾಬಾದ್‌ನ ಶಟ್ಲರ್ ಎರಡನೇ ಸುತ್ತಿನಲ್ಲಿ ವಿಶ್ವದ ನಂ.1 ಹಾಗೂ 2 ಬಾರಿಯ ವಿಶ್ವ ಚಾಂಪಿಯನ್ ಜಪಾನ್‌ನ ಕೆಂಟೊ ಮೊಮೊಟಾ ಸವಾಲು ಎದುರಿಸಲಿದ್ದಾರೆ. ಪ್ರಣೀತ್ ಸ್ವಿಟ್ಝರ್ಲೆಂಡ್‌ನ ಬಾಸೆಲ್‌ನಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಮೊಮೊಟಾಗೆ ಸೋತಿದ್ದರು.

ಥಾಯ್ಲೆಂಡ್ ಓಪನ್ ಚಾಂಪಿಯನ್‌ಗಳಾದ ಸಾತ್ವಿಕ್‌ಸಾಯಿರಾಜ್ ಹಾಗೂ ಚಿರಾಗ್ ಶೆಟ್ಟಿ ಪುರುಷರ ಡಬಲ್ಸ್‌ನಲ್ಲಿ ಶುಭಾರಂಭ ಮಾಡಿದ್ದಾರೆ. ಸಾತ್ವಿಕ್-ಚಿರಾಗ್ ಜೋಡಿ 39 ನಿಮಿಷಗಳ ಹೋರಾಟದಲ್ಲಿ ಕೊರಿಯಾದ ಕಿಮ್ ಜಿ ಜುಂಗ್ ಹಾಗೂ ಲೀ ಯಾಂಗ್ ಡಾ ವಿರುದ್ಧ 24-22, 21-11 ಗೇಮ್‌ಗಳ ಅಂತರದಿಂದ ಗೆಲುವು ದಾಖಲಿಸಿದರು.

ಮಾಜಿ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್, ಕೊರಿಯಾ ಓಪನ್‌ನಲ್ಲಿ ಸೆಮಿ ಫೈನಲ್ ತಲುಪಿದ್ದ ಪಾರುಪಲ್ಲಿ ಕಶ್ಯಪ್ ಮೊದಲ ಸುತ್ತಿನಲ್ಲಿ ಮುಗ್ಗರಿಸಿದರು. ಪುರುಷರ ಸಿಂಗಲ್ಸ್ ನಲ್ಲಿ ಥಾಯ್ಲೆಂಡ್‌ನ ಸಿಥಿಕೋಮ್ ಥಮ್ಮಸಿನ್ ವಿರುದ್ಧ 13-21, 12-21 ಅಂತರದಿಂದ ಶರಣಾದರು.

ಈ ವರ್ಷ ಹೈದರಾಬಾದ್ ಓಪನ್ ಹಾಗೂ ವಿಯೆಟ್ನಾ ಓಪನ್‌ನಲ್ಲಿ ಚಾಂಪಿಯನ್ ಆಗಿದ್ದ ರಾಷ್ಟ್ರೀಯ ಚಾಂಪಿಯನ್ ಸೌರಭ್ ವರ್ಮಾ ಮೊದಲ ಸುತ್ತಿನಲ್ಲಿ ನೆದರ್‌ಲ್ಯಾಂಡ್‌ನ ಮಾರ್ಕ್ ಕಾಲ್‌ಜೌ ವಿರುದ್ಧ 21-19, 11-21, 17-21 ಗೇಮ್‌ಗಳ ಅಂತರದಿಂದ ಸೋಲನುಭವಿಸಿ ಟೂರ್ನಿಯಿಂದ ನಿರ್ಗಮಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News