ಪೋರ್ಚುಗಲ್ ಮಣಿಸಿದ ಉಕ್ರೇನ್ ಯುರೋ ಟೂರ್ನಿಗೆ ಅರ್ಹತೆ

Update: 2019-10-15 18:22 GMT

ಕೀವ್, ಅ.15: ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ವೃತ್ತಿಜೀವನದ 700ನೇ ಗೋಲು ಗಳಿಸಿದ ಹೊರತಾಗಿಯೂ ಉಕ್ರೇನ್ ತಂಡ ಯುಇಎಫ್‌ಎ ಕ್ವಾಲಿಫೈಯರ್ ಪಂದ್ಯದಲ್ಲಿ ಪೋರ್ಚುಗಲ್‌ತಂಡವನ್ನು 2-1 ಗೋಲುಗಳ ಅಂತರದಿಂದ ಸೋಲಿಸಿ ಯುರೋ-2020ರಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ.

ಮೊದಲ 27 ನಿಮಿಷದೊಳಗೆ ರೊಮನ್ ಯರೆಂಚುಕ್ ಹಾಗೂ ಆ್ಯಂಡ್ರಿಯಾ ಯರ್ಮೊಲೆಂಕೊ ತಲಾ ಒಂದು ಗೋಲುಗಳಿಸಿ ಉಕ್ರೇನ್‌ಗೆ ಮೇಲುಗೈ ಒದಗಿಸಿದರು. ರೊಮನ್ ಆರನೇ ನಿಮಿಷದಲ್ಲಿ ಗೋಲು ಗಳಿಸಿ ಉಕ್ರೇನ್‌ಗೆ 1-0 ಮುನ್ನಡೆ ಒದಗಿಸಿದರು.ಯರ್ಮೊಲೆಂಕೊ 27ನೇ ನಿಮಿಷದಲ್ಲಿ ಗೋಲುಗಳಿಸಿ ತಂಡದ ಮುನ್ನಡೆ 2-0ಗೆ ವಿಸ್ತರಿಸಿದರು.

ರೊನಾಲ್ಡೊ 72ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ನಲ್ಲಿ ಗೋಲು ಗಳಿಸಿದರೂ ಉಕ್ರೇನ್ ‘ಬಿ’ ಗುಂಪಿನಲ್ಲಿ ಮೊದಲ ಸ್ಥಾನ ಪಡೆಯಲು ಯಶಸ್ವಿಯಾಯಿತು.

ಉಕ್ರೇನ್ ಈ ಗೆಲುವಿನ ಮೂಲಕ ಮುಂದಿನ ಬೇಸಿಗೆಯಲ್ಲಿ ನಡೆಯುವ ಯುರೋ ಕಪ್ ಟೂರ್ನಿಯಲ್ಲಿ ಈಗಾಗಲೇ ಅರ್ಹತೆ ಪಡೆದಿರುವ ಪೊಲ್ಯಾಂಡ್, ರಶ್ಯ, ಇಟಲಿ ಹಾಗೂ ಬೆಲ್ಜಿಯಂ ತಂಡಗಳೊಂದಿಗೆ ಸೇರಿಕೊಂಡಿದೆ. 8 ಅಂಕ ಗಳಿಸಿ ಉಕ್ರೇನ್ ಬಳಿಕದ ಸ್ಥಾನದಲ್ಲಿರುವ ಪೋರ್ಚುಗಲ್‌ಗೆ ಇನ್ನು ಎರಡು ಪಂದ್ಯ ಆಡಲು ಬಾಕಿ ಉಳಿದಿದ್ದು, ಸರ್ಬಿಯಕಿಂತ ಒಂದು ಅಂಕ ಹಿಂದಿದ್ದಾರೆ.

‘‘ಚೆಂಡು ನಾವು ಬಯಸಿದಂತೆ ಹೋಗದಿದ್ದರೆ ಇಂತಹ ದಿನಗಳು ಬರುತ್ತವೆ. ನಮಗೆ ಈಗ ಗಣಿತದ ಅಗತ್ಯವಿಲ್ಲ. ಯುರೋ 2020ಕ್ಕೆ ಅರ್ಹತೆ ಪಡೆಯಲು ಮುಂದಿನ ಎರಡು ಪಂದ್ಯಗಳಲ್ಲಿ ನಾವು ಗೆಲ್ಲಲೇಬೇಕಾಗಿದೆ’’ಎಂದು ಪೋರ್ಚುಗಲ್‌ನ ಮಿಡ್‌ಫೀಲ್ಡರ್ ಡ್ಯಾನಿಲೊ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News