ಶಿಕ್ಷಕರ ಕಡ್ಡಾಯ ವರ್ಗಾವಣೆ ಖಂಡಿಸಿ ವಿದ್ಯಾರ್ಥಿಗಳಿಂದ ತರಗತಿ ಬಹಿಷ್ಕಾರ

Update: 2019-10-16 05:49 GMT

ಮಂಗಳೂರು, ಅ.16: ಶಿಕ್ಷಕರ ಕಡ್ಡಾಯ ವರ್ಗಾವಣೆಯನ್ನು ಖಂಡಿಸಿ ಕಸಬಾ ಬೆಂಗರೆಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವಂತೆ ಪಟ್ಟು ಹಿಡಿದ ಘಟನೆ ಬುಧವಾರ ನಡೆದಿದೆ.

ಕಸಬಾ ಬೆಂಗರೆಯ ಶಾಲೆಯಲ್ಲಿ 11 ಶಿಕ್ಷಕರಿದ್ದರು. ಆ ಪೈಕಿ ಒಬ್ಬ ಶಿಕ್ಷಕಿ ಇತ್ತೀಚೆಗೆ ನಿವೃತ್ತರಾಗಿದ್ದಾರೆ. ಉಳಿದಂತೆ ಐವರು ಖಾಯಂ ಶಿಕ್ಷಕರನ್ನು ಕಡ್ಡಾಯವಾಗಿ ವರ್ಗಾವಣೆಗೊಳಿಸಲಾಗಿದೆ. ಆ ಹುದ್ದೆಗೆ ಬೇರೆ ಯಾರ ನೇಮಕಾತಿಯೂ ನಡೆದಿಲ್ಲ. ದಸರಾ ರಜೆ ಮುಗಿದು ಬುಧವಾರ ತರಗತಿ ಆರಂಭಗೊಳ್ಳುತ್ತಲೇ ಶಿಕ್ಷಕರು ಇಲ್ಲದ್ದನ್ನು ಕಂಡ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ, ಶಿಕ್ಷಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬರಬೇಕು ಎಂದು ಪಟ್ಟು ಹಿಡಿದಿದ್ದಾರೆ. ವಿದ್ಯಾರ್ಥಿಗಳ ಈ ಹೋರಾಟಕ್ಕೆ ಶಾಲಾಭಿವೃದ್ಧಿ ಸಮಿತಿಯಲ್ಲದೆ, ಡಿವೈಎಫ್‌ಐ ಸ್ಥಳೀಯ ಘಟಕ ಕೂಡ ಬೆಂಬಲ ನೀಡಿವೆ.

ಈ ಸಂದರ್ಭ ಮಾತನಾಡಿದ ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್, ಎಲ್‌ಕೆಜಿಯಿಂದ 7ನೆ ತರಗತಿಯವರೆಗೆ ಇಲ್ಲಿ 549 ವಿದ್ಯಾರ್ಥಿಗಳಿದ್ದಾರೆ. ಇಲ್ಲಿನ ಖಾಯಂ ಶಿಕ್ಷಕರನ್ನು ವರ್ಗಾಯಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಪಾಠ ಮಾಡುವವರು ಇಲ್ಲವಾಗಿದೆ. ಈ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿಯರನ್ನೂ ವರ್ಗಾಯಿಸಲಾಗಿದೆ. ಶಿಕ್ಷಣ ಇಲಾಖೆಯು ಮೂವರು ಅತಿಥಿ ಶಿಕ್ಷಕರನ್ನು ನೇಮಿಸಿದೆ. ಆ ಪೈಕಿ ಇಬ್ಬರು ಇನ್ನೂ ಬಂದಿಲ್ಲ. ಒಬ್ಬರು ಬಂದಿದ್ದು, ಅವರು 549 ವಿದ್ಯಾರ್ಥಿಗಳಿಗೆ ಹೇಗೆ ಪಾಠ ಮಾಡಲು ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News