ಎಂ.ಕೆ. ಮಠರಿಗೆ ಕರ್ನಾಟಕ ನಾಟಕ ಅಕಾಡಮಿಯ ಸದಸ್ಯತ್ವ

Update: 2019-10-16 06:00 GMT

ಉಪ್ಪಿನಂಗಡಿ: ಕರ್ನಾಟಕ ನಾಟಕ ಅಕಾಡಮಿ ಸದಸ್ಯರಾಗಿ ಚಲನಚಿತ್ರ ನಟ ಉಪ್ಪಿನಂಗಡಿಯ ಎಂ.ಕೆ. ಮಠರವರು ನೇಮಕಗೊಂಡಿದ್ದಾರೆ.

ಮೂಲತಃ ಉಪ್ಪಿನಂಗಡಿ ಗ್ರಾಮದ ಮಠ ಕೊಪ್ಪಳ ನಿವಾಸಿಯಾಗಿರುವ ಇವರು ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಉಪ್ಪಿನಂಗಡಿ ಸಂತ ಫಿಲೋಮಿನಾ ಶಾಲೆಯಲ್ಲಿ ಪೂರೈಸಿದರು. ಮುಂದಿನ ವಿದ್ಯಾಭ್ಯಾಸವನ್ನು ಸಕಲೇಶಪುರದಲ್ಲಿ ಪೂರೈಸುತ್ತಿದ್ದಾಗಲೇ, ಸಾಹಿತ್ಯ, ಬರವಣಿಗೆಯತ್ತ ಒಲವು ಹೆಚ್ಚಾಗಿದ್ದರಿಂದ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ ಬರವಣಿಗೆಯತ್ತ ಮುಖ ಮಾಡಿದ್ದ ಇವರು ಪ್ರಾರಂಭದಲ್ಲಿ `ನ್ಯಾಯಕ್ಕೆ ಬೆಲೆಯಿಲ್ಲ', `ಎಲ್ಲಾ ಹಣಕ್ಕಾಗಿ' ಎಂಬ ನಾಟಕಗಳನ್ನು ಬರೆದರು. ಬಳಿಕ ಕಾಸರಗೋಡಿನ ಅಪೂರ್ವ ಕಲಾವಿದರು ತಂಡದೊಂದಿಗೆ ಸೇರಿಕೊಂಡು `ಜನರಿರುವಲ್ಲಿಗೆ ನಾಟಕ' ಎಂಬ ವಿಶಿಷ್ಟ ಪ್ರಯೋಗದಲ್ಲಿ ಲಾರಿಯ ಮೇಲೆಯೇ ವಿವಿಧ ಪ್ರದೇಶದಲ್ಲಿ ಪ್ರಯೋಗಿಸಲ್ಪಟ್ಟ `ನಾಯಿ ಬಾಲ' ನಾಟಕದಲ್ಲಿ `ಚೂರಿ ಚಿಕ್ಕಣ್ಣ' ಎಂಬ ಖಳ ನಾಯಕನ ಪಾತ್ರ ಇವರಿಗೆ ಜನಮನ್ನಣೆಯನ್ನು ದೊರಕಿಸಿಕೊಟ್ಟಿತು. ಬಳಿಕ ಕನ್ನಡದ ಹೆಸರಾಂತ ನಿರ್ದೇಶಕ ಟಿ.ಎಸ್. ನಾಗಾಭರಣರ ತಂಡಕ್ಕೆ ಸೇರಿ ಅಲ್ಲಿ 11 ವರ್ಷಗಳ ಕಾಲ ದುಡಿದು ನಾಗಾಭರಣರ ಎಲ್ಲಾ ಸಾಹಸಗಳಲ್ಲಿ ಭಾಗಿಯಾದರು.

`ಗಗ್ಗರ' ಚಿತ್ರದ ನಟನೆಗಾಗಿ 2008-2009ನೇ ಸಾಲಿನಲ್ಲಿ ಅತ್ಯುತ್ತಮ ಪೋಷಕ ನಟ ರಾಜ್ಯ ಪ್ರಶಸ್ತಿಯ ಗೌರವವೂ ಇವರಿಗೆ ಲಭಿಸಿದೆ. ಇವರು ಬರೆದ `ಒಬ್ಬ ದೇಶ ಪ್ರೇಮಿಯ ಹಸಿವು' ಎಂಬ ನಾಟಕವು 1998ರಲ್ಲಿ ರಾಜ್ಯ ಮಟ್ಟದ ನಾಟಕ ಸ್ಪರ್ಧೆಯಲ್ಲಿ ಪ್ರಶಸ್ತಿಯನ್ನು ಪಡೆದಿದೆ. ``ಎಲ್ಲಾ ಮರ್ತಿದ್ದೀಯಾ'', ``ಮಾನವಿ'' ಎಂಬ ಎರಡು ಕಥಾಸಂಕಲನಗಳು ಈಗಾಗಲೇ ಪ್ರಕಟವಾಗಿವೆ. ಹೀಗೆ ನಾಟಕಕಾರನಾಗಿ, ಬರಹಗಾರನಾಗಿರುವ ಇವರು ಈಗ ಚಲನ ಚಿತ್ರ ನಟನಾಗಿ ಸಕ್ರೀಯವಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News