ಪ್ರಧಾನಿ ಕೈಯಲ್ಲಿದ್ದ ಆ್ಯಕ್ಯುಪ್ರೆಷರ್ ರೋಲರ್ ಎಂದರೇನು?
ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಚೆನ್ನೈ ಸಮೀಪದ ಮಹಾಬಲಿಪುರಂ ಬೀಚ್ ನಲ್ಲಿ ಮುಂಜಾನೆಯ ವಾಯುವಿಹಾರದಲ್ಲಿ ತೊಡಗಿದ್ದಾಗ ಕೈಯಲ್ಲೊಂದು ವಸ್ತುವನ್ನು ಹಿಡಿದುಕೊಂಡಿದ್ದು,ಅದು ಏನಿರಬಹುದೆಂಬ ಪ್ರಶ್ನೆ ಹಲವರಲ್ಲಿ ಮನೆ ಮಾಡಿತ್ತು. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಉತ್ತರಿಸಿದ್ದ ಮೋದಿ,ಅದು ಆ್ಯಕ್ಯುಪ್ರೆಷರ್ ರೋಲರ್ ಮತ್ತು ತಾನು ಅದನ್ನು ಆಗಾಗ್ಗೆ ಬಳಸುತ್ತಿರುತ್ತೇನೆ. ಅದು ತುಂಬ ಆರೋಗ್ಯಲಾಭಗಳನ್ನು ನೀಡುತ್ತದೆ ಎಂದು ತಿಳಿಸಿದ್ದರು. ಇಲ್ಲಿದೆ ನೋಡಿ ಆ್ಯಕ್ಯುಪ್ರೆಷರ್ ರೋಲರ್‌ನ ಕುರಿತು ಮಾಹಿತಿಗಳು......
ಆ್ಯಕ್ಯುಪ್ರೆಷರ್ ಪುರಾತನ ಮಸಾಜ್ ಚಿಕಿತ್ಸೆಯಾಗಿದ್ದು,ಇಲ್ಲಿ ಸ್ನಾಯು ಸೆಳೆತ, ನೋವು, ನಿದ್ರೆಯ ಸಮಸ್ಯೆ ಇತ್ಯಾದಿಗಳಿಗೆ ಚಿಕಿತ್ಸೆ ನೀಡಲು ಶರೀರದ ಕೆಲವು ಒತ್ತಡ ಬಿಂದುಗಳ ಮೇಲೆ ಒತ್ತಡವನ್ನು ಹಾಕಲಾಗುತ್ತದೆ. ಆ್ಯಕ್ಯುಪ್ರೆಷರ್ ರೋಲರ್ ನರಗಳನ್ನು ಪ್ರಚೋದಿಸುವ ಮತ್ತು ರಕ್ತ ಪರಿಚಲನೆಯನ್ನು ಉತ್ತಮಗೊಳಿಸುವ ಮೂಲಕ ಆ್ಯಕ್ಯುಪ್ರೆಷರ್ ಚಿಕಿತ್ಸೆಯಲ್ಲಿ ನೆರವಾಗುವ ಸಾಧನವಾಗಿದೆ. ಇದು ಮನಸ್ಸು ಮತ್ತು ಶರೀರಕ್ಕೆ ಸಂಬಂಧಿಸಿದ ಕಾಯಿಲೆಗಳಿಂದ ಮುಕ್ತಿ ಪಡೆಯಲು ನೆರವಾಗುತ್ತದೆ.
ಶರೀರದಲ್ಲಿಯ ಪ್ರತಿಫಲಿತ ಬಿಂದುಗಳ ಮೇಲೆ ಒತ್ತಡ ಹಾಕಿದಾಗ ಅವು ಕ್ರಿಯಾಶೀಲಗೊಳ್ಳುತ್ತವೆ ಮತ್ತು ರಕ್ತ ಸಂಚಲನವನ್ನು ಉತ್ತೇಜಿಸುತ್ತವೆ. ಇದನ್ನು ಮುಂದುವರಿಸುತ್ತಿದ್ದಂತೆ ನಿರಾಳತೆಯುಂಟಾಗುತ್ತದೆ.
ಆ್ಯಕ್ಯುಪ್ರೆಷರ್ ರೋಲರ್‌ನ ಕೆಲವು ಪ್ರಮುಖ ಆರೋಗ್ಯಲಾಭಗಳು
►ಸ್ನಾಯುಗಳ ಸೆಳೆತವನ್ನು ನಿವಾರಿಸುತ್ತದೆ
ಸ್ನಾಯುಗಳಲ್ಲಿ ನೋವು ಮತ್ತು ಸೆಳೆತವನ್ನು ನಿವಾರಿಸಲು ಆ್ಯಕ್ಯುಪ್ರೆಷರ್ ರೋಲರ್ ಅತ್ಯಂತ ಉಪಯೋಗಿಯಾಗಿದೆ. ಅದು ವಿವಿಧ ಅಂಗಾಂಗಗಳ ಕಾರ್ಯ ನಿರ್ವಹಣೆಯನ್ನು ಪ್ರಚೋದಿಸುತ್ತದೆ ಮತ್ತು ಇದೇ ವೇಳೆ ಮಾನಸಿಕ ಮತ್ತು ದೈಹಿಕ ಒತ್ತಡವನ್ನು ಕಡಿಮೆ ಮಾಡುವಲ್ಲಿ ನೆರವಾಗುತ್ತದೆ.
►ರಕ್ತದಲ್ಲಿ ಸಕ್ಕರೆ ಮಟ್ಟ ನಿಯಂತ್ರಣ
ಶರೀರದಲ್ಲಿ ಗ್ಲುಕೋಸ್ ಮಟ್ಟಗಳನ್ನು ನಿಯಂತ್ರಿಸುವಲ್ಲಿ ಆ್ಯಕ್ಯುಪ್ರೆಷರ್ ರೋಲರ್ ಸಹಕಾರಿಯಾಗಿದೆ. ನಮ್ಮ ಪಾದಗಳಲ್ಲಿರುವ ಕೆಲವು ಒತ್ತಡ ಬಿಂದುಗಳು ಮೇದೋಜ್ಜೀರಕ ಗ್ರಂಥಿಯೊಂದಿಗೆ ಸಂಪರ್ಕವನ್ನು ಹೊಂದಿವೆ. ಅವುಗಳಿಗೆ ಆ್ಯಕ್ಯುಪ್ರೆಷರ್ ರೋಲರ್‌ನ ಮೂಲಕ ವ್ಯಾಯಾಮ ನೀಡಿದಾಗ ಇನ್ಸುಲಿನ್ ಉತ್ಪಾದನೆ ಹೆಚ್ಚುತ್ತದೆ ಮತ್ತು ರಕ್ತದಲ್ಲಿಯ ಸಕ್ಕರೆ ಮಟ್ಟವು ನಿಯಂತ್ರಿಸಲ್ಪಡುತ್ತದೆ.
►ಹೊಟ್ಟೆಯ ಆರೋಗ್ಯ
ಆಗಾಗ್ಗೆ ಜೀರ್ಣಸಂಬಂಧಿ ಮತ್ತು ಗ್ಯಾಸ್ಟ್ರಿಕ್ ತೊಂದರೆಗಳಿಂದ ಬಳಲುವವರು ಖಂಡಿತವಾಗಿಯೂ ಆ್ಯಕ್ಯುಪ್ರೆಷರ್ ರೋಲರ್‌ನ್ನು ಉಪಯೋಗಿಸಬೇಕು. ಅದು ಜಠರದ ಸುತ್ತಲಿನ ಸ್ನಾಯುಗಳನ್ನು ಕ್ರಿಯಾಶೀಲಗೊಳಿಸುತ್ತದೆ ಮತ್ತು ಇದರಿಂದ ಜೀರ್ಣಕ್ರಿಯೆಯು ಉತ್ತಮಗೊಳ್ಳುತ್ತದೆ. ನಿಯಮಿತ ಆ್ಯಕ್ಯುಪ್ರೆಷರ್ ಜಠರದ ಸೋಂಕುಗಳಿಗೆ ಸುಲಭ ಮತ್ತು ಪರಿಣಾಮಕಾರಿ ಚಿಕಿತ್ಸೆಯನ್ನು ನೀಡುತ್ತದೆ.
►ಸುಖನಿದ್ರೆ
ಆ್ಯಕ್ಯುಪ್ರೆಷರ್ ನಿಮ್ಮೆಲ್ಲ ಒತ್ತಡಗಳನ್ನು ನಿವಾರಿಸುವ ಮೂಲಕ ನಿಮ್ಮನ್ನು ನಿರಾಳರನ್ನಾಗಿಸುತ್ತದೆ. ಇದರಿಂದಾಗಿ ರಾತ್ರಿ ಸುಖವಾಗಿ ನಿದ್ರಿಸಲು ಸಾಧ್ಯವಾಗುತ್ತದೆ. ಅದು ಒತ್ತಡವನ್ನು ತಗ್ಗಿಸುವುದು ಮಾತ್ರವಲ್ಲ,ಶರೀರವನ್ನು ನಂಜುಮುಕ್ತಗೊಳಿಸುವ ಮೂಲಕ ಅದರ ಒಟ್ಟಾರೆ ಕಾರ್ಯ ನಿರ್ವಹಣೆಯನ್ನು ಉತ್ತಮಗೊಳಿಸುತ್ತದೆ. ನಿಯಮಿತ ಆ್ಯಕ್ಯುಪ್ರೆಷರ್ ಯಾವುದೇ ಔಷಧಿಯ ಅಗತ್ಯವಿಲ್ಲದೆ ನಿದ್ರಾಹೀನತೆಗೆ ಚಿಕಿತ್ಸೆ ನೀಡುತ್ತದೆ.