'ನಮ್ಮನ್ನು ಲಘುವಾಗಿ ಪರಿಗಣಿಸಬೇಡಿ': ಕಾಶ್ಮೀರ ವಿಚಾರದಲ್ಲಿ ಪ್ರತಿಕ್ರಿಯಿಸದ ಕೇಂದ್ರದ ವಿರುದ್ಧ ಸುಪ್ರೀಂ ಆಕ್ರೋಶ

Update: 2019-10-16 16:08 GMT

ಹೊಸದಿಲ್ಲಿ, ಅ. 16: ಜಮ್ಮುಕಾಶ್ಮೀರದಲ್ಲಿ ನಿರ್ಬಂಧ ಹೇರಿಕೆ ಹಾಗೂ ನಾಗರಿಕ ಸ್ವಾತಂತ್ರ್ಯ ಮೊಟಕುಗೊಳಿಸಿರುವುದಕ್ಕೆ ಸಂಬಂಧಿಸಿದ ವಿಷಯಗಳಿಗೆ ಪ್ರತಿಕ್ರಿಯೆ ಸಲ್ಲಿಸಲು ವಿಫಲವಾಗಿರುವುದು ಏಕೆ ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರಕಾರ ಹಾಗೂ ಜಮ್ಮುಕಾಶ್ಮೀರ ಆಡಳಿತವನ್ನು ಬುಧವಾರ ಪ್ರಶ್ನಿಸಿದೆ.

ತನ್ನ ಅನಿವಾಸಿ ಭಾರತೀಯ ಪತಿಯನ್ನು ವಶದಲ್ಲಿ ಇರಿಸಿರುವುದನ್ನು ಪ್ರಶ್ನಿಸಿ ಪತ್ನಿ ಆಸೀಫಾ ಮುಬೀನ್ ಸಲ್ಲಿಸಿದ ಮನವಿಗೆ ಅಫಿಡವಿಟ್ ಸಲ್ಲಿಸಲು ವಿಫಲವಾಗಿರುವುದು ಏಕೆ ಎಂದು ಮನವಿಗಳ ಗುಚ್ಛದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಕೇಂದ್ರ ಸರಕಾರ ಹಾಗೂ ಜಮ್ಮಕಾಶ್ಮೀರ ಆಡಳಿತವನ್ನು ಪ್ರಶ್ನಿಸಿತು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಜಮ್ಮು ಹಾಗೂ ಕಾಶ್ಮೀರ ಸರಕಾರ, ಐದು ನಿಮಿಷಗಳ ಒಳಗಡೆ ಅಫಿಡವಿಟ್ ಸಲ್ಲಿಸಲಾಗುವುದು ಎಂದಿತು. ಮಧ್ಯಪ್ರವೇಶ ಮಾಡುವವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದುದರಿಂದ ಈ ವಿಷಯಕ್ಕೆ ಸಂಬಂಧಿಸಿದ ಅಫಿದಾವಿತ್ ಸಲ್ಲಿಸಲು ವಿಳಂಬವಾಯಿತು ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನ್ಯಾಯಾಲಯಕ್ಕೆ ತಿಳಿಸಿದರು.

ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್, ಕಾಶ್ಮೀರದಲ್ಲಿ ಬಂಧನದಲ್ಲಿ ಇರಿಸಿರುವುದರ ಬಗ್ಗೆ ಜಾರಿ ಮಾಡಲಾದ ಆದೇಶ ಅನುಸರಣೆ ಮಾಡುವಲ್ಲಿ ವಿಫಲವಾಗಿರುವುದು ಏಕೆ ಎಂದು ಪ್ರಶ್ನಿಸಿತು.

ನೀವು ನಮ್ಮನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿದ ಸುಪ್ರೀಂ ಕೋರ್ಟ್, ಜಮ್ಮು ಕಾಶ್ಮೀರ ಆಡಳಿತ ಹಾಗೂ ಕೇಂದ್ರ ಸರಕಾರ ಅಫಿಡವಿಟ್ ಸಲ್ಲಿಸಲು ವಿಳಂಬ ಮಾಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿತು.

   ದೂರುದಾರರ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಹುಝೇಫಾ ಅಹ್ಮದಿ, ಸರಕಾರ ದೂರುದಾರರಿಗೆ ಆದೇಶ ತೋರಿಸಲು ಬಯಸದೇ ಇದ್ದರೆ, ಕನಿಷ್ಠ ನ್ಯಾಯಾಲಯಕ್ಕಾದರೂ ತೋರಿಸಬೇಕು. ಕಾಶ್ಮೀರದಲ್ಲಿ ಮಾಡಿದ ಪ್ರತಿಯೊಂದು ಬಂಧನಕ್ಕೆ ಅವರು ಸಮರ್ಥನೆ ನೀಡಬೇಕು ಎಂದರು.

 ಕಾಶ್ಮೀರದಲ್ಲಿ ಜನರನ್ನು ಬಂಧನದಲ್ಲಿ ಇರಿಸಲು ಆಧಾರವಾಗಿರುವ ಆದೇಶ ಎಲ್ಲಿದೆ ಎಂದು ನ್ಯಾಯಾಲಯ ಸ್ಪಷ್ಟವಾಗಿ ಸಾಲಿಸಿಟರ್ ಜನರಲ್ ಅವರಲ್ಲಿ ಪ್ರಶ್ನಿಸಿತು. ಎಲ್ಲ ಬಂಧನ ಆದೇಶಗಳ ಪ್ರತಿಯೊಂದಿಗೆ ತಮ್ಮ ಪ್ರತಿಕ್ರಿಯೆ ಸಲ್ಲಿಸುವಂತೆ ನ್ಯಾಯಾಲಯ ಎರಡೂ ಆಡಳಿತಕ್ಕೆ ನಿರ್ದೇಶಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News