ರಿಕ್ಷಾ ಚಾಲಕನ ಮೇಲೆ ತಂಡದಿಂದ ತಲವಾರು ದಾಳಿ

Update: 2019-10-17 17:31 GMT

ಮಂಗಳೂರು, ಅ.17: ನೀರುಮಾರ್ಗದ ಪಡು ಬಿತ್ತ್‌ಪಾದೆ ಸಮೀಪ ರಿಕ್ಷಾ ಚಾಲಕನ ಮೇಲೆ ಇಬ್ಬರು ದುಷ್ಕರ್ಮಿಗಳು ತಲವಾರಿನಿಂದ ಹಲ್ಲೆ ನಡೆಸಿದ ಪರಾರಿಯಾದ ಘಟನೆ ಗುರುವಾರ ಬೆಳಗ್ಗೆ ನಡೆದಿದೆ.

ಕಾಪೆಟ್ಟು ಗುತ್ತಿಗೆ ನಿವಾಸಿ ಸಂತೋಷ್ (35) ಗಾಯಗೊಂಡ ಯುವಕ. ಫರಂಗಿಪೇಟೆ ನಿವಾಸಿ ನಿತಿನ್ ಮತ್ತು ಪ್ರಾಣೇಶ್ ಯುವಕ ಹಲ್ಲೆಗೈದ ದುಷ್ಕರ್ಮಿಗಳು. ಇವರಿಬ್ಬರೂ ಸಂಘಟನೆಯೊಂದರ ಕಾರ್ಯಕರ್ತರಾಗಿದ್ದಾರೆ.

ಘಟನೆ ವಿವರ: ಗುರುವಾರ ಸಂಕ್ರಮಣವಾದ ಕಾರಣ ಸಂತೋಷ್ ಅವರು ಬಿತ್ತ್‌ಪಾದೆಯ ಅಂಗಡಿಯೊಂದರಲ್ಲಿ ಎಳ್ಳೆಣ್ಣೆ ಖರೀದಿಸಿ ತನ್ನ ಮನೆ ಗುತ್ತಿಗೆಯತ್ತ ರಿಕ್ಷಾದಲ್ಲಿ ಹೋಗುತ್ತಿದ್ದರು. ಈ ಸಂದರ್ಭ ಆಕ್ಟೀವಾದಲ್ಲಿ ಬಂದ ಇಬ್ಬರು ಯುವಕರು ಸಂತೋಷ್‌ನನ್ನು ಅಡ್ಡಗಟ್ಟಿ ತಗಾದೆ ತೆಗೆದಿದ್ದಾರೆ. ಈ ಸಂದರ್ಭ ಮಾತಿಗೆ ಮಾತು ಬೆಳೆದಾಗ ತಾವು ತಂದಿದ್ದ ತಲವಾರಿನಿಂದ ಸಂತೋಷ್‌ಗೆ ಹಲ್ಲೆ ಮಾಡಿದ್ದಾರೆ. ಇದರಿಂದ ಸಂತೋಷ್ ಅವರ ಎರಡು ಕೈ ಹಾಗೂ ಎರಡು ಕಾಲುಗಳಿಗೆ ಗಂಭೀರ ಗಾಯವಾಗಿದೆ. ಘಟನೆಯ ಬಳಿಕ ದುಷ್ಕರ್ಮಿಗಳು ಪರಾರಿಯಾಗಿದ್ದು ಯುವಕ ರಕ್ತದ ಮಡುವಿನಲ್ಲಿ ಕುಸಿದು ಬಿದಿದ್ದ.

ಗಾಯಗೊಂಡ ರಿಕ್ಷಾ ಚಾಲಕನನ್ನು ಸ್ಥಳೀಯರು ಕೂಡಲೇ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಯುವಕನಿಗೆ ಗಂಭೀರ ಗಾಯವಾಗಿದ್ದರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆಗೆ ಕಾರಣವೇನು?: ಸಂತೋಷ್, ನಿತಿನ್, ಪ್ರಾಣೇಶ್ ಮೂವರು ಆತ್ಮೀಯರಾಗಿದ್ದು, ಒಂದೇ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದರು. ಆದರೆ ಎರಡು ವರ್ಷದ ಹಿಂದೆ ಸಂತೋಷ್ ಸಂಘಟನೆಯಿಂದ ದೂರ ಸರಿದು ತನ್ನ ಪಾಡಿಗೆ ತಾನಿದ್ದ. ಸಂಘಟನೆ ಬಿಟ್ಟ ಬಳಿಕ ಕೆಲವು ವಿಚಾರಗಳನ್ನು ಸಂತೋಷ್ ವಿರೋಧಿಸುತ್ತಿದ್ದ ಮತ್ತು ಈ ವಿಚಾರದಲ್ಲಿ ನಿತಿನ್ ಮತ್ತು ಸಂತೋಷ್ ಮಧ್ಯೆ ಹಲವು ಸಮಯದಿಂದ ವೈಮನಸ್ಸಿತ್ತು. ಗುರುವಾರ ಬೆಳಗ್ಗೆಯೂ ಇಬ್ಬರ ಮಧ್ಯೆ ವಾಗ್ವಾದ ನಡೆದಿದ್ದು, ಇದಾದ ಸ್ವಲ್ಪ ಹೊತ್ತಿನ ಬಳಿಕ ಸಂತೋಷ್‌ನ ಮೇಲೆ ದಾಳಿ ನಡೆದಿದೆ.

ಆರೋಪಿಗಳು ರೌಡಿಶೀಟರ್‌ಗಳು: ಕೊಲೆಯತ್ನ ನಡೆಸಿದ ಆರೋಪಿಗಳಾದ ನಿತಿನ್ ಮತ್ತು ಪ್ರಾಣೇಶ್ ಅವರ ಮೇಲೆ ನಗರದ ನಾನಾ ಠಾಣೆಗಳಲ್ಲಿ ಪ್ರಕರಣವಿದ್ದು, ರೌಡಿಶೀಟರ್‌ಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ಈ ಕುರಿತು ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News