ಮಂಗಳೂರು : ಅಕ್ಷರದಾಸೋಹ ನೌಕರರಿಂದ ಪ್ರತಿಭಟನೆ

Update: 2019-10-17 12:07 GMT

ಮಂಗಳೂರು, ಅ.17: ಅಕ್ಷರದಾಸೋಹ ನೌಕರರಿಗೆ ಕೇಂದ್ರ ಸರಕಾರದ ಪ್ರಧಾನಮಂತ್ರಿ ಮಾನ್‌ಧನ್ ಪಿಂಚಣಿ ಯೋಜನೆಯನ್ನು ಅಳವಡಿಸದೆ ಈಗಾಗಲೇ ಇರುವಂತಹ ಎಲ್‌ಐಸಿಯ ಪಿಂಚಣಿ ಯೋಜನೆ ಜಾರಿಗೆ ಒತ್ತಾಯಿಸಿ ಸಿಐಟಿಯು ನೇತೃತ್ವದಲ್ಲಿ ರಾಜ್ಯ ಅಕ್ಷರದಾಸೋಹ ನೌಕರರ ಸಂಘದ ದ.ಕ.ಜಿಲ್ಲಾ ಸಮಿತಿಯು ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನಾ ಪ್ರದರ್ಶನ ನಡೆಸಿತು.

ಪ್ರತಿಭಟನಾ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಸಿಐಟಿಯು ಜಿಲ್ಲಾಧ್ಯಕ್ಷ ಜೆ.ಬಾಲಕೃಷ್ಣ ಶೆಟ್ಟಿ, ಕೇಂದ್ರ ಸರಕಾರದ ಮಾನ್‌ಧನ್ ಯೋಜನೆ ಯಲ್ಲಿ 18 ವರ್ಷ ತುಂಬಿದ ಫಲಾನುಭವಿಗಳು ತಮ್ಮ 40ನೇ ವಯಸ್ಸಿನವರೆಗೆ ಮಾಸಿಕ 55 ರೂ.ನ್ನು ನಿರ್ದಿಷ್ಟ ಖಾತೆಗೆ ಪಾವತಿಸುವುದು. ಗರಿಷ್ಟ 40 ವರ್ಷದ ವೇಳೆಗೆ 200 ರೂ. ನಂತೆ ಮೊತ್ತ ಪಾವತಿಸಬೇಕಾಗುತ್ತದೆ. ಇದು ಬಿಸಿಯೂಟ ನೌಕರರಿಗೆ ಹೆಚ್ಚುವರಿ ಹೊರೆಯಾಗುತ್ತಿದೆ ಎಂದು ತಿಳಿಸಿದರು.

ಅಕ್ಷರದಾಸೋಹ ನೌಕರರಿಗೆ ಈಗಾಗಲೇ ಎಲ್‌ಐಸಿ ಸಂಯೋಜಿತ ಪಿಂಚಣಿ ಯೋಜನೆ ಇದ್ದು ಇದೀಗ ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಮಾನ್‌ಧನ್ ಯೋಜನೆಯನ್ನು ಅಳವಡಿಸಲು ಸರಕಾರ ಸೂಚನೆ ಬಂದಿದ್ದು, ಅದು ಕಾರ್ಯರೂಪಕ್ಕೆ ಬಂದರೆ, ಅಕ್ಷರದಾಸೋಹ ನೌಕರರು ಹೆಚ್ಚುವರಿ ಶುಲ್ಕ ಪಾವತಿಸಬೇಕಾಗಿದೆ ಎಂದರು.

ಅಂತಿಮ ಪಿಂಚಣಿ ಲಭ್ಯತೆಯಲ್ಲಿ ಕೆಲವು ತೊಡಕುಗಳಿವೆ. ಪ್ರಧಾನಮಂತ್ರಿ ಮಾನ್‌ಧನ್ ಯೋಜನೆ ಜಾರಿಗೊಳಿಸದೇ, ಈಗಾಗಲೇ ಚಾಲ್ತಿಯಲ್ಲಿ ರುವ ಪಿಂಚಣಿ ಯೋಜನೆಯನ್ನು ಮುಂದುವರಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಮಾತನಾಡಿದ ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್, ಜಿಲ್ಲಾ ಮುಖಂಡರಾದ ಜಯಂತಿ ಬಿ. ಶೆಟ್ಟಿ, ಅಕ್ಷರದಾಸೋಹ ನೌಕರರ ಜಿಲ್ಲಾ ಸಮಿತಿ ಅಧ್ಯಕ್ಷೆ ಪದ್ಮಾವತಿ ಶೆಟ್ಟಿ ಮಾತನಾಡಿದರು.

ಸಿಐಟಿಯು ರಾಜ್ಯ ಉಪಾಧ್ಯಕ್ಷ ವಸಂತ ಆಚಾರಿ ಉಪಸ್ಥಿತರಿದ್ದರು. ಜಿಲ್ಲಾ ಸಮಿತಿ ಕಾರ್ಯದರ್ಶಿ ಗಿರಿಜಾ ಮೂಡುಬಿದಿರೆ ಸ್ವಾಗತಿಸಿದರು. ಖಜಾಂಚಿ ಭವ್ಯಾ ಮುಚ್ಚೂರು ವಂದಿಸಿದರು.

ಪ್ರತಿಭಟನೆಗೂ ಮೊದಲು ಮಂಗಳೂರು ಮಿನಿ ವಿಧಾನಸೌಧದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News