ಅಕಾಡಮಿ, ಪ್ರಾಧಿಕಾರಗಳಲ್ಲಿ ಕ್ರೈಸ್ತ ಕೊಂಕಣಿಗರಿಗೆ ಸಿಗದ ಪ್ರಾತಿನಿಧ್ಯ: ಐವನ್ ಡಿಸೋಜ ಆಕ್ರೋಶ

Update: 2019-10-17 12:17 GMT

ಮಂಗಳೂರು, ಅ.17: ರಾಜ್ಯದ 16 ಅಕಾಡಮಿಗಳು ಮತ್ತು ಪ್ರಾಧಿಕಾರಗಳಿಗೆ ರಾಜ್ಯ ಸರಕಾರ ನೇಮಕ ಮಾಡಿದ 250 ಸದಸ್ಯರಲ್ಲಿ ಕ್ರೈಸ್ತ ಕೊಂಕಣಿ ಭಾಷಿಕ ಸಮುದಾಯದ ಒಬ್ಬರಿಗೂ ಸದಸ್ಯ ಸ್ಥಾನ ನೀಡದೆ ಬಿಜೆಪಿ ಕ್ರೈಸ್ತ ಸಮುದಾಯಕ್ಕೆ ಅನ್ಯಾಯ ಮಾಡಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗುರುವಾರ ತನ್ನ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಕ್ರಿಶ್ಚಿಯನ್ ಸಮುದಾಯದವರಿಗೆ ರಾಜ್ಯ ಸರಕಾರ ಮಾಡಿದ ಅನ್ಯಾಯವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ. ರವಿ ಮುಂದಿನ 15 ದಿನದೊಳಗೆ ಸರಿಪಡಿಸಬೇಕು. ಇಲ್ಲದಿದ್ದರೆ ಸಮುದಾಯದ ಮುಖಂಡರು, ಸಾಹಿತಿಗಳೊಂದಿಗೆ ವಿಧಾನಸೌಧದ ಎದುರು ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿದರು.

ರಾಜ್ಯದ ಒಟ್ಟು ಜನಸಂಖ್ಯೆಯ ಶೇ.4ರಷ್ಟು ಕ್ರಿಶ್ಚಿಯನ್ ಸಮುದಾಯವರಿದ್ದರೂ ಒಂದೇ ಒಂದು ಸದಸ್ಯತ್ವ ನೀಡದಿರುವುದು ಕ್ರೈಸ್ತ ಕೊಂಕಣಿಗರನ್ನು ಮೂಲೆಗುಂಪು ಮಾಡುವ ವ್ಯವಸ್ಥಿತ ಸಂಚಾಗಿದೆ. ರಾಜ್ಯದಲ್ಲಿ ಕೊಂಕಣಿ ಭಾಷೆ ಮಾತನಾಡುವ 41 ಸಮುದಾಯಗಳ ಒಟ್ಟು ಜನಸಂಖ್ಯೆಯ ಶೇ.50ಕ್ಕೂ ಅಧಿಕ ಕ್ರಿಶ್ಚಿಯನ್ನರೇ ಇದ್ದಾರೆ. ರಾಜ್ಯದ 11 ಧರ್ಮಪ್ರಾಂತಗಳ ಪೈಕಿ 4 ಧರ್ಮಪ್ರಾಂತಗಳಲ್ಲಿ ಪೂಜೆಯಿಂದ ಹಿಡಿದು ಶಿಕ್ಷಣದವರೆಗೆ ಕೊಂಕಣಿಯೇ ಅಧಿಕೃತ ಭಾಷೆಯಾಗಿದೆ. ಕೊಂಕಣಿ ಸಾಹಿತ್ಯಕ್ಕೆ ಸಮುದಾಯದ ಕೊಡುಗೆ ಮಹತ್ವದ್ದಾಗಿದೆ. ಹಾಗಿದ್ದರೂ ಕಡೇ ಪಕ್ಷ ಕೊಂಕಣಿ ಸಾಹಿತ್ಯ ಅಕಾಡಮಿಯಲ್ಲೂ ಕ್ರೈಸ್ತ ಸಮುದಾಯಕ್ಕೆ ಸ್ಥಾನ ನೀಡದಿರುವುದು ಅಚ್ಚರಿ ಮೂಡಿಸಿದೆ ಎಂದು ಐವನ್ ಡಿಸೋಜ ಹೇಳಿದರು.

ಕೊಂಕಣಿಯಲ್ಲಿ ಅತಿ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದು ಕ್ರೈಸ್ತ ಕೊಂಕಣಿಗರು. ಎಲ್ಲೆಡೆ ಕ್ರೈಸ್ತ ಕೊಂಕಣಿ ಸಾಹಿತಿಗಳು ಇರುವಾಗ ರಾಜ್ಯ ಸರಕಾರಕ್ಕೆ ಈ ಒಬ್ಬರೂ ಕಾಣಿಸಲಿಲ್ಲವೇಕೆ? ಸಾಹಿತ್ಯದ ವಿಚಾರದಲ್ಲೂ ರಾಜಕೀಯ ಬೆರೆಸುವುದು ಸರಿಯಲ್ಲ. ಸ್ವತಃ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ. ರವಿ ತವರು ಜಿಲ್ಲೆ ಚಿಕ್ಕಮಗಳೂರಿನಲ್ಲೂ ಕ್ರೈಸ್ತ ಕೊಂಕಣಿಗರಿದ್ದಾರೆ ಎನ್ನುವುದನ್ನು ಮರೆಯದಿರಲಿ. 1994ರಲ್ಲಿ ಆರಂಭವಾದ ಕೊಂಕಣಿ ಅಕಾಡಮಿಯಲ್ಲಿ ಈವರೆಗಿನ 9 ಅಧ್ಯಕ್ಷರ ಪೈಕಿ ನಾಲ್ವರು ಕ್ರಿಶ್ಚಿಯನ್ ಕೊಂಕಣಿ ಸಮುದಾಯದವರೇ ಆಗಿದ್ದಾರೆ. ಆದರೆ ಈ ಬಾರಿ ಯಾರೂ ಸಿಕ್ಕಿಲ್ಲವೇ ಎಂದು ಐವನ್ ಪ್ರಶ್ನಿಸಿದರು.

ನನ್ನ ಪ್ರತಿಭಟನೆ, ಆಕ್ರೋಶ ರಾಜ್ಯ ಸರಕಾರದ ವಿರುದ್ಧವೇ ಹೊರತು ಈಗ ನೇಮಕಗೊಂಡ ಅಧ್ಯಕ್ಷರು, ಸದಸ್ಯರ ವಿರುದ್ಧ ಅಲ್ಲ. ಸರಕಾರ ಪರಿಶೀಲನೆ ನಡೆಸಿ ಅನ್ಯಾಯ ಸರಿಪಡಿಸದಿದ್ದರೆ ಹೋರಾಟ ನಿಶ್ಚಿತ ಎಂದು ಐವನ್ ಹೇಳಿದರು.

ಮಾಜಿ ಕಾರ್ಪೊರೇಟರ್ ನಾಗೇಂದ್ರ ಕುಮಾರ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News