ಅ.21: ಸಿಪಿಎಂನಿಂದ ಧರಣಿ ಸತ್ಯಾಗ್ರಹ

Update: 2019-10-17 12:24 GMT

ಮಂಗಳೂರು, ಅ.17: ದ.ಕ.ಜಿಲ್ಲೆಯಲ್ಲಿ ಅಭಿವೃದ್ಧಿ ಕುಂಠಿತಗೊಳ್ಳುವುದನ್ನು ಖಂಡಿಸಿ ಮತ್ತು ಶೀಘ್ರ ಅಭಿವೃದ್ಧಿ ಕಾಮಗಾರಿ ಆರಂಭಿಸಿ ಕಾಲಮಿತಿಯೊಳಗೆ ಕೆಲಸ ಕಾರ್ಯ ಪೂರ್ತಿಗೊಳಿಸಬೇಕು ಎಂದು ಆಗ್ರಹಿಸಿ ಸಿಪಿಎಂ ಜಿಲ್ಲಾ ಸಮಿತಿಯ ವತಿಯಿಂದ ಅ.21ರಂದು ಅಪರಾಹ್ನ 3 ಗಂಟೆಗೆ ನಗರದಲ್ಲಿ ಧರಣಿ ಸತ್ಯಾಗ್ರಹ ನಡೆಯಲಿದೆ.

ರಾಜ್ಯ, ಕೇಂದ್ರ ಸರಕಾರಗಳಿಂದ ಅಭಿವೃದ್ಧಿಯ ಹಲವಾರು ಕಾಮಗಾರಿಗಳಿಗೆ ಸಂಬಂಧಿಸಿ ಪ್ರಸ್ತಾವನೆಗೊಂಡಿದ್ದರೂ ಮಂದಗತಿಯಲ್ಲಿವೆ. ಈ ಮಧ್ಯೆ ಜಿಲ್ಲೆಯ ಹಲವು ರಸ್ತೆ, ಸೇತುವೆಗಳು ಹಾಳಾಗಿದ್ದು, ನಾದುರಸ್ತಿ ಕಾರ್ಯವೂ ನಿಧಾನಗತಿಯಲ್ಲಿದೆ. ಇದರಿಂದ ಸಾರಿಗೆ ಸಂಚಾರ ವಿಳಂಬವಾಗುತ್ತಿದೆ. ಮಂಗಳೂರು-ಮೂಡುಬಿದಿರೆ ರಸ್ತೆ, ಬಿಸಿರೋಡ್-ಗುಂಡ್ಯಾ ರಸ್ತೆ ಹದಗೆಟ್ಟಿವೆ. ಮಂಗಳೂರು-ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲೂ ಹೊಂಡ ಕಾಣಿಸಿವೆ. ಗುರುಪುರ ಹೊಳೆಗೆ ಗುರುಪುರ ಮತ್ತು ಕೂಳೂರಿನಲ್ಲಿ ಹೊಸ ಸೇತುವೆ ಸರಕಾರ ಕೈಗೆತ್ತಿಕೊಂಡಿದೆ. ಅವು ಶೀಘ್ರ ಆಗಬೇಕಾಗಿದೆ. ಕುಸಿದುಬಿದ್ದ ಮೂಲಾರಪಟ್ನ ಸೇತುವೆಗೆ ಬದಲಿ ಸೇತುವೆಯೂ ಆಗಬೇಕಾಗಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಪಂಪ್‌ವೆಲ್, ನಂತೂರು ಮತ್ತಿತರ ಮೇಲ್ಸೇತುವೆಗಳ ಅಗತ್ಯ ಇದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸುರತ್ಕಲ್‌ನಲ್ಲಿ ಟೋಲ್‌ಗೇಟ್ ಅಗತ್ಯವಿಲ್ಲವೆಂದು ಆಡಳಿತಕ್ಕೆ ಜನಸಮೂಹ ಮನಗಾಣಿಸಿದ್ದರೂ ಟೋಲ್‌ಗೇಟನ್ನು ರದ್ದುಪಡಿಸಿಲ್ಲ. ಆಗಸ್ಟ್ ತಿಂಗಳಲ್ಲಿ ಸುರಿದ ಮಳೆಗೆ ಬೆಳ್ತಂಗಡಿ ತಾಲೂಕು ಮತ್ತು ಇತರೆಡೆ ಸೊತ್ತು, ಆಸ್ತಿ ನಾಶ ಹೊಂದಿದವರಿಗೆ ತುರ್ತಾಗಿ ಪರಿಹಾರ ವ್ಯವಸ್ಥೆ ಆಗಬೇಕು ಆಗ್ರಹಿಸಿ ಧರಣಿ ಸತ್ಯಾಗ್ರಹ ನಡೆಯಲಿದೆ ಎಂದು ಕಾರ್ಯದರ್ಶಿ ವಸಂತ ಆಚಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News