ಮಂಗಳೂರು: ಪತ್ನಿಯನ್ನು ಕಡಿದು ಕೊಲೆಗೈದ ಪತಿಗೆ ಜೀವಾವಧಿ ಶಿಕ್ಷೆ

Update: 2019-10-17 14:07 GMT

ಮಂಗಳೂರು, ಅ.17: ಪತ್ನಿಯನ್ನು ಕತ್ತಿಯಿಂದ ಕಡಿದು ಕೊಲೆಗೈದ ಪತಿಗೆ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಿ ಗುರುವಾರ ತೀರ್ಪು ನೀಡಿದೆ.

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕು ಬೆಟ್ಟದಕಾಡು ನಿವಾಸಿ ವಿಲಿಯಂ ಲೋಬೊ (37) ಶಿಕ್ಷೆಗೊಳಗಾದ ಅಪರಾಧಿ. ಪತ್ನಿ ಬ್ಲೋಸೆಂ ಲೋಬೊ (30) ಕೊಲೆಯಾದವರು.

ಅಪರಾಧಿ ದಂಡ ಪಾವತಿಸಲು ವಿಫಲವಾದರೆ ಮತ್ತೆ ಒಂದು ವರ್ಷ ಜೈಲು ಶಿಕ್ಷೆ ಅನುಭವಿಸಬೇಕು. ಈ ದಂಪತಿಗೆ ಗಂಡು ಮಗುವಿದ್ದು, ಪರಿಹಾರ ಕಲ್ಪಿಸಿಕೊಡಲು ಜಿಲ್ಲಾ ಕಾನೂನು ಸೇವಾ ಪ್ರಧಿಕಾರಕ್ಕೆ ನ್ಯಾಯಾಲಯ ಶಿಫಾರಸು ಮಾಡಿದೆ.

ಪ್ರಕರಣ ಹಿನ್ನೆಲೆ: ವಿಲಿಯಂ ಲೋಬೊ ಹಾಗೂ ಬ್ಲೋಸೆಂ ದಂಪತಿ ಮದುವೆಯಾದ ಬಳಿಕ ಮಂಗಳೂರಿನ ಕೋಡಿಕಲ್‌ನ ಪಾಲ್ದಡಿ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ವಿಲಿಯಂ ಲೋಬೊ ಬೆಂಗಳೂರಿನಲ್ಲಿ ಚಾಲಕ ವೃತ್ತಿ ಮಾಡುತ್ತಿದ್ದ. ಬ್ಲೋಸೆಂ ಮಂಗಳೂರಿನಲ್ಲಿ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಯಾವುದೋ ಕಾರಣಕ್ಕೆ ದಂಪತಿ ನಡುವೆ ಮನಸ್ತಾಪ ಉಂಟಾಗಿತ್ತು. ಇದೇ ಕಾರಣದಿಂದ ಕೊಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿತ್ತು.

2017ರ ಆಗಸ್ಟ್ 8ರಂದು ರಾತ್ರಿ 9:30ರ ಸುಮಾರಿಗೆ ಆಟೊರಿಕ್ಷಾದಲ್ಲಿ ವಿಲಿಯಂ ಲೋಬೊ ಮನೆಗೆ ಬಂದಿದ್ದ. ಆಟೊರಿಕ್ಷಾ ಚಾಲಕನಿಗೆ ಮನೆಯಿಂದ ಸ್ವಲ್ಪ ದೂರದಲ್ಲಿ ನಿಲ್ಲಲು ಹೇಳಿದ್ದ. ಪೂರ್ವ ನಿರ್ಧರಿತವಾಗಿ ಪತ್ನಿಯನ್ನು ಕೊಲೆ ಮಾಡಲೆಂದು ಕತ್ತಿಯೊಂದಿಗೆ ಬಂದಿದ್ದ ಆರೋಪಿಯು ಮನೆಯೊಳಗೆ ನುಗ್ಗಿ ಎದುರಿನ ಬಾಗಿಲಿಗೆ ಲಾಕ್ ಮಾಡಿ ಪತ್ನಿಗೆ ಕತ್ತಿಯಿಂದ ಕಡಿದಿದ್ದ.

ಕಿರುಚಾಟ ಕೇಳಿ ಮನೆಯ ಮಾಲಕ ಹಾಗೂ ಸ್ಥಳೀಯ ಮನೆಯವರು ಬಂದು ಕಿಟಕಿ ಮೂಲಕ ನೋಡಿದಾಗ ಬ್ಲೋಸೆಂ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಪೊಲೀಸರಿಗೆ ವಿಷಯ ತಿಳಿಸಿದ್ದರು. ಕೃತ್ಯ ಎಸಗಿದ ಬಳಿಕ ವಿಲಿಯಂ ಲೋಬೊ ಹಿಂಬದಿ ಬಾಗಿಲಿನಿಂದ ತೆರಳಿ ಆಟೊರಿಕ್ಷಾದಲ್ಲಿ ಪರಾರಿಯಾಗಿದ್ದ. ಬಳಿಕ ನಗರದ ವಿವಿಧೆಡೆ ಸುತ್ತಾಡಿ ಕೊನೆಗೆ ಉರ್ವ ಪೊಲೀಸ್ ಠಾಣೆಗೆ ಹೋಗಿದ್ದ. ಅಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದರು.

ಉರ್ವ ಪೊಲೀಸ್ ಠಾಣೆಯ ಅಂದಿನ ಇನ್‌ಸ್ಪೆಕ್ಟರ್ ರವೀಶ್ ನಾಯಕ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. 26 ಪ್ರತ್ಯಕ್ಷ ಸಾಕ್ಷಿಗಳನ್ನು ವಿಚಾರಣೆಗೊಳಪಡಿಸಲಾಗಿದೆ. ಸಾಂದರ್ಭಿಕ ಸಾಕ್ಷಿಗಳು ಆರೋಪ ಸಾಬೀತಾಗಲು ಪ್ರಮುಖ ಕಾರಣವಾಗಿದೆ.
ನ್ಯಾಯಾಧೀಶೆ ಶಾರದಾ ಬಿ. ಪ್ರಕರಣದ ವಿಚಾರಣೆ ನಡೆಸಿ ವಾದ-ಪ್ರತಿವಾದ ಆಲಿಸಿ ತೀರ್ಪು ಪ್ರಕಟಿಸಿದ್ದಾರೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ರಾಜು ಪೂಜಾರಿ ಬನ್ನಾಡಿ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News