​ಮಂಗಳೂರು: ವಿದ್ಯಾರ್ಥಿನಿ ಅತ್ಯಾಚಾರ; ಅಪರಾಧಿಗೆ 10 ವರ್ಷ ಕಠಿಣ ಶಿಕ್ಷೆ

Update: 2019-10-17 14:30 GMT

ಮಂಗಳೂರು, ಅ.17: ಮದುವೆಯಾಗುವುದಾಗಿ ನಂಬಿಸಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ ಅಪರಾಧಿಗೆ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 10 ವರ್ಷ ಕಠಿಣ ಶಿಕ್ಷೆ ಹಾಗೂ 70 ಸಾವಿರ ರೂ. ದಂಡ ವಿಧಿಸಿ ಗುರುವಾರ ತೀರ್ಪು ನೀಡಿದೆ.

ಕೆಮ್ರಾಲ್ ಅತ್ತೂರು ಗ್ರಾಮ ಪಡುಬಳಿಕೆ ನಿವಾಸಿ ಅಜಿತ್ ಶೆಟ್ಟಿ (23) ಶಿಕ್ಷೆಗೊಳಗಾದ ಅಪರಾಧಿ.

ಐಪಿಸಿ ಸೆಕ್ಷನ್ 376 (2) ಎನ್ (ನಿರಂತರ ಅತ್ಯಾಚಾರ) ಎಸಗಿರುವುದಕ್ಕೆ 10 ವರ್ಷ ಕಠಿಣ ಶಿಕ್ಷೆ ಮತ್ತು 50 ಸಾವಿರ ರೂ. ದಂಡ, ತಪ್ಪಿದರೆ ಒಂದು ವರ್ಷ ಜೈಲು ಶಿಕ್ಷೆ ಅನುಭವಿಸಬೇಕು. ಐಪಿಸಿ ಸೆಕ್ಷನ್ 417 (ವಂಚನೆ) ಒಂದು ವರ್ಷ ಜೈಲು ಶಿಕ್ಷೆ ಹಾಗೂ 20 ಸಾವಿರ ರೂ. ದಂಡ, ತಪ್ಪಿದರೆ ಒಂದು ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕು. ದಂಡದ ಮೊತ್ತದಲ್ಲಿ 50 ಸಾವಿರ ರೂ. ಸಂತ್ರಸ್ತೆಗೆ ಹಾಗೂ ಹೆಚ್ಚುವರಿಯಾಗಿ ಒಂದು ಲಕ್ಷ ರೂ. ಮಗುವಿಗೆ ಪರಿಹಾರವಾಗಿ ನೀಡಬೇಕು ಎಂದು ನ್ಯಾಯಾಲಯ ತೀರ್ಪಿನಲ್ಲಿ ತಿಳಿಸಿದೆ.

ಪ್ರಕರಣ ಹಿನ್ನೆಲೆ: ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಯುವತಿಯೊಬ್ಬಳಿಗೆ ತನ್ನ ಸ್ನೇಹಿತೆಯ ಮುಖಾಂತರ ಹಿಟಾಚಿ ಚಾಲಕನಾಗಿದ್ದ ಅಜಿತ್ ಶೆಟ್ಟಿಯ ಪರಿಚಯವಾಗಿ ಪ್ರೀತಿಸಲಾರಂಭಿಸಿದ್ದರು. ಸುಮಾರು ಐದು ವರ್ಷಗಳ ಕಾಲ ಯುವತಿಯನ್ನು ಪ್ರೀತಿಸಿದ ಅಜಿತ್, ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿದ್ದ.

2014ರ ಸೆಷ್ಟಂಬರ್ 4ರಂದು ಯುವತಿಯ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಆಕೆಯನ್ನು ಅತ್ಯಾಚಾರಗೈದಿದ್ದ. ಇದೇ ರೀತಿ ಯುವತಿಯನ್ನು ಪುಸಲಾಯಿಸಿ ನಿರಂತರ ಅತ್ಯಾಚಾರವೆಸಗಿದ್ದ. ಇದರಿಂದ ಯುವತಿ ಗರ್ಭಿಣಿಯಾಗಿದ್ದು, 2015ರ ಮೇ 29ರಂದು ಮೂಡುಬಿದಿರೆ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಳು.

ಯುವತಿಗೆ ಹೆರಿಗೆಯಾದ ಬಳಿಕ ಅಜಿತ್ ಶೆಟ್ಟಿ ಆಸ್ಪತ್ರೆಗೂ ಹೋಗದೆ ನಾಪತ್ತೆಯಾಗಿದ್ದ. ಇದರಿಂದ ನೊಂದ ಯುವತಿ 2015ರ ಜು.22ರಂದು ಆತನ ವಿರುದ್ದ ಮತ್ತು ಮದುವೆ ಮಾಡಲು ನಿರಾಕರಣೆ ಮಾಡಿದ ಆತನ ತಂದೆ ಹರಿಶ್ಚಂದ್ರ, ಸಹೋದರ ಅಜಯ್ ಶೆಟ್ಟಿ ವಿರುದ್ಧ ಬಜ್ಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಬಜ್ಪೆ ಪೊಲೀಸರು ಆರೋಪಿಯನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಿದ್ದರು.
 ಪ್ರಕರಣದ ಸಮಗ್ರ ವಿಚಾರಣೆ ನಡೆಸಿದ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಸಯಿದುನ್ನೀಸಾ ವಾದ-ಪ್ರತಿವಾದ ಆಲಿಸಿ ತೀರ್ಪು ನೀಡಿದ್ದಾರೆ.

ಪ್ರಕರಣದಲ್ಲಿ ಮಗುವಿನ ಡಿಎನ್‌ಎ ವರದಿಯಲ್ಲಿ ಅಜಿತ್ ಶೆಟ್ಟಿ ‘ಜೈವಿಕ ತಂದೆ’ ಎಂದು ಸಾಬೀತಾಗಿದೆ. ಬಜ್ಪೆ ಠಾಣೆಯ ಅಂದಿನ ಇನ್‌ಸ್ಪೆಕ್ಟರ್ ಟಿ.ಡಿ. ನಾಗರಾಜ್ ಪ್ರಕರಣದ ತನಿಖೆ ನಡೆಸಿ, ಅಜಿತ್ ಶೆಟ್ಟಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಒಂಬತ್ತು ಮಂದಿಯ ಸಾಕ್ಷಿ ವಿಚಾರಣೆ ನಡೆಸಲಾಗಿದ್ದು, 11 ದಾಖಲೆಗಳನ್ನು ಪರಿಗಣಿಸಲಾಗಿತ್ತು. ಸರಕಾರದ ಪರವಾಗಿ ಸರಕಾರಿ ಅಭಿಯೋಜಕಿ ಜುಡಿತ್ ಒ.ಎಂ. ಕ್ರಾಸ್ತಾ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News