ಅ.19ರಿಂದ ಬ್ರಹ್ಮಾವರದಲ್ಲಿ ಕೃಷಿ ಮೇಳ-2019: ಸಹ್ಯಾದ್ರಿ ಪಂಚಮುಖಿ ಹೊಸ ಭತ್ತದ ತಳಿ ಬಿಡುಗಡೆ

Update: 2019-10-17 14:32 GMT

 ಉಡುಪಿ, ಅ.17: ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕಾ ವಿವಿಯ ಅಂಗಸಂಸ್ಥೆಯಾದ ಬ್ರಹ್ಮಾವರ ಮತ್ತು ಉಳ್ಳಾಲದ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ, ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ ಮತ್ತು ಮಂಗಳೂರು, ಕೃಷಿ ಡಿಪ್ಲೋಮಾ ಮಹಾವಿದ್ಯಾಲಯ ಬ್ರಹ್ಮಾವರ, ಕೃಷಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು,ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉಡುಪಿ, ಜಿಲ್ಲಾ ಕೃಷಿಕ ಸಮಾಜ ಉಡುಪಿ ಮತ್ತು ಮಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಎರಡು ದಿನಗಳ ಕೃಷಿ ಮೇಳ-2019 ಅ.19 ಮತ್ತು 20ರಂದು ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆಯಲಿದೆ.

ಬ್ರಹ್ಮಾವರದ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕರಾದ ಡಾ.ಎಸ್.ಯು.ಪಾಟೀಲ್ ಅವರು ಗುರುವಾರ ಇಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ನೂತನ ಕೃಷಿ ತಂತ್ರಜ್ಞಾನಗಳ ಕುರಿತು ರೈತರಿಗೆ ಮಾಹಿತಿ ನೀಡುವುದು, ಚರ್ಚಾಗೋಷ್ಠಿಗಳ ಮುಖಾಂತರ ಸಮಸ್ಯೆಗಳನ್ನು ಬಗೆಹರಿಸಿಕೊ ಳ್ಳುವುದು, ಕ್ಷೇತ್ರ ಭೇಟಿಗಳ ಮುಖಾಂತರ ಬೆಳೆ ಪ್ರಾತ್ಯಕ್ಷಿಕೆಗಳನ್ನು ನೋಡಿ ಅಲ್ಲಿಯ ತಜ್ಞರೊಂದಿಗೆ ಸಮಾಲೋಚನೆ ನಡೆಸುವುದು, ವಸ್ತು ಪ್ರದರ್ಶನದಲ್ಲಿ ಭಾಗವಹಿಸುವ ವಿವಿಧ ಸಂಸ್ಥೆಗಳು ಅಭಿವೃದ್ಧಿ ಪಡಿಸಿದ ತಂತ್ರಜ್ಞಾನ ಹಾಗೂ ಉಪಕರಣಗಳ ಕುರಿತು ಸಂಪೂರ್ಣ ಮಾಹಿತಿ ಪಡೆಯುವುದು ಕೃಷಿ ಮೇಳದ ಮುಖ್ಯ ಉದ್ದೇಶವಾಗಿದೆ. ಒಟ್ಟಾರೆ ಕೃಷಿ ಮೇಳ ಕೃಷಿಕರ ಹಬ್ಬವಾಗಿದ್ದು, ಅನ್ನದಾತನ ಕೃಷಿಗೆ ಸಂಬಂಧಿತ ಎಲ್ಲಾ ಮಾಹಿತಿ-ಪರಿಹಾರಗಳು ಒಂದೇ ವೇದಿಕೆಯಲ್ಲಿ ದೊರೆಯಲಿದೆ ಎಂದರು.

ಕೃಷಿಮೇಳವನ್ನು ರಾಜ್ಯ ಉಪ ಮುಖ್ಯಮಂತ್ರಿ ಹಾಗೂ ಕೃಷಿ ಸಚಿವ ಲಕ್ಷ್ಮಣ ಸವದಿ ಉದ್ಘಾಟಿಸಲಿದ್ದು, ವಸ್ತು ಪ್ರದರ್ಶನವನ್ನು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ್ ಬೊಮ್ಮಾಯಿ ಉದ್ಘಾಟಿಸುವರು. ಮೀನುಗಾರಿಕೆ, ಬಂದರು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೊಸ ಭತ್ತದ ತಳಿಯನ್ನು ಬಿಡುಗಡೆಗೊಳಿಸುವರು. ಶಾಸಕ ರಘುಪತಿ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿವಿಯ ಕುಲಪತಿಗಳಾದ ಡಾ. ಎಂ.ಕೆ. ನಾಯ್ಕ, ಸಂಸದೆ ಶೋಭಾ ಕರಂದ್ಲಾಜೆ, ಜಿಪಂ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಜಿಲ್ಲೆಯ ವಿವಿಧ ಜನಪ್ರತಿನಿಧಿಗಳು, ವಿವಿಯ ಹಿರಿಯ ಅಧಿಕಾರಿಗಳು, ಕೃಷಿ ತಜ್ಞರು, ಗಣ್ಯರು ಅ.19ರ ಬೆಳಗ್ಗೆ 10:30ಕ್ಕೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ಮೇಳದ ಮೊದಲ ದಿನ ಗೇರು ಮತ್ತು ಇತರ ತೋಟಗಾರಿಕೆ ಬೆಳೆಗಳ ಕುರಿತು ಮತ್ತು ಎರಡನೇ ದಿನದಂದು ಲಾಭದಾಯಕ ಸಮಗ್ರ ಕೃಷಿ ಪದ್ಧತಿಗಳು, ನೆಲ ಜಲ ಸಂರಕ್ಷಣೆ ಮತ್ತು ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಮತ್ತು ಹೈ-ಟೆಕ್ ತೋಟಗಾರಿಕೆ ಕುರಿತು ವಿಚಾರ ಸಂಕಿರಣ ಗಳನ್ನು ಏರ್ಪಡಿಸಲಾಗಿದೆ. ಇದರಲ್ಲಿ ಇಲಾಖಾ ಮುಖ್ಯಸ್ಥರು, ಹೆಸರಾಂತ ಹಿರಿಯ ವಿಜ್ಞಾನಿಗಳು, ಕೃಷಿ ಮತ್ತು ತೋಟಗಾರಿಕಾ ವಿವಿಯ ತಜ್ಞರು ಮತ್ತು ಪ್ರಗತಿಪರ ಕೃಷಿಕರು ಭಾಗವಹಿಸಿ ಮಾಹಿತಿಯನ್ನು ನೀಡಲಿದ್ದಾರೆ.

200ಕ್ಕೂ ಅಧಿಕ ಮಳಿಗೆ: ಈ ಬಾರಿಯ ಕೃಷಿಮೇಳದಲ್ಲಿ ಸುಮಾರು 200 ಕ್ಕೂ ಅಧಿಕ ಮಳಿಗೆಗಳಲ್ಲಿ ವಿವಿಧ ಇಲಾಖೆ, ಸರಕಾರಿ ಮತ್ತು ಖಾಸಗಿ ಸಂಸ್ಥೆಗಳಿಂದ ಅಭಿವೃದ್ಧಿ ಪಡಿಸಿರುವ ಕೃಷಿ ತಂತ್ರಜ್ಞಾನಗಳ ಮತ್ತುಕೃಷಿ ಪರಿಕರಗಳ ಪ್ರದರ್ಶನವನ್ನು ಏರ್ಪಡಿಸಲಾಗಿದೆ ಎಂದು ಅವರು ನುಡಿದರು.

ಪತ್ರಿಕಾಗೋಷ್ಠಿಯಲ್ಲಿ ಬ್ರಹ್ಮಾವರ ಡಿಪ್ಲೋಮ ಕೃಷಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ವಿ.ಸುಧೀರ್ ಕಾಮತ್, ಕೆವಿಕೆ ಬ್ರಹ್ಮಾವರದ ಹಿರಿಯ ವಿಜ್ಞಾನಿ ಡಾ.ಧನಂಜಯ ಬಿ., ಕೇಂದ್ರದ ಹಿರಿಯ ಕ್ಷೇತ್ರಾಧೀಕ್ಷಕ ಡಾ.ಶಂಕರ್ ಎಂ. ಉಪಸ್ಥಿತರಿದ್ದರು.

ಹೊಸ ಭತ್ತದ ತಳಿ ಬಿಡುಗಡೆ

ಈ ಬಾರಿ ಕೃಷಿ ಮೇಳದಲ್ಲಿ ಬ್ರಹ್ಮಾವರದ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದಲ್ಲಿ ಅಭಿವೃದ್ಧಿ ಪಡಿಸಿದ ಹೊಸ ಭತ್ತದ ತಳಿ ‘ಸಹ್ಯಾದ್ರಿ ಪಂಚಮುಖಿ’ಯನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾ ಗುವುದು ಎಂದು ಡಾ.ಎಸ್.ಯು.ಪಾಟೀಲ್ ತಿಳಿಸಿದರು.

ಕರಾವಳಿಯಲ್ಲಿ ಮಳೆಗಾಲದಲ್ಲಿ ಬರುವ ನೆರೆಗೆ ಈ ತಳಿ ಉಪಯುಕ್ತವಾ ಗಿದ್ದು, ಉತ್ತಮ ಇಳುವರಿಯನ್ನು ನೀಡುತ್ತದೆ. ಹೀಗಾಗಿ ನೆರೆ ಬರುವಲ್ಲಿ ಹಾಗೂ ನೀರು ನಿಲ್ಲುವ ಬಯಲು ಪ್ರದೇಶದಲ್ಲಿ ಈ ತಳಿ ಉಪಯುಕ್ತ. ಅಲ್ಲದೇ ಇದರ ಹುಲ್ಲು ಜಾನುವಾರುಗಳಿಗೆ ಪೌಷ್ಠಿಕವಾದ ಆಹಾರವೂ ಆಗಿರುತ್ತದೆ ಎಂದವರು ಹೇಳಿದರು.

ಕೃಷಿ ಮೇಳದ ವಿಶೇಷ ಆಕರ್ಷಣೆಗಳು

ಈ ಬಾರಿಯ ಕೃಷಿ ಮೇಳದಲ್ಲಿ ವಿವಿಧ ಭತ್ತದ ತಳಿಗಳು ಹಾಗೂ ಬೀಜೋತ್ಪಾದನೆ, ಭತ್ತದ ಚಾಪೆ ನೇಜಿ ತಯಾರಿ ಹಾಗೂ ಶ್ರೀಪದ್ಧತಿ ಬೇಸಾಯ, ತೆಂಗಿನಲ್ಲಿ ಬಹುಬೆಳೆ ಯೋಜನೆ ಹಾಗೂ ಪೋಷಕಾಂಶಗಳ ನಿರ್ವಹಣೆ, ತೋಟಗಾರಿಕಾ ಬೆಳೆಗಳಲ್ಲಿ ಕಸಿ ಕಟ್ಟುವಿಕೆ, ಛಾವಣೆ ಕೈತೋಟಗಳ ಪ್ರಾತ್ಯಕ್ಷಿಕೆ ಇರಲಿದೆ.

ಅಲ್ಲದೇ ಸಾವಯವ ಗೊಬ್ಬರ, ಕಾಂಪೋಸ್ಟ್, ಎರೆಗೊಬ್ಬರ, ಅಜೋಲ್ಲಾ ಗೊಬ್ಬರ ತಯಾರಿಕೆ ಪ್ರಾತ್ಯಕ್ಷಿಕೆ, ಹೈನುಗಾರಿಕೆ, ಮೀನುಗಾರಿಕೆ, ಆಡು, ಮೊಲ, ಕೋಳಿ, ಹಂದಿ, ಬಾತುಕೋಳಿ ಸಾಕಾಣಿಕೆಯ ಪ್ರಾತ್ಯಕ್ಷಿಕೆ, ಹೈಡ್ರೋಫೋನಿಕ್ಸ್ ವಿಧಾನದಲ್ಲಿ ಮೇವಿನ ಬೆಳೆ ಉತ್ಪಾದನೆ, ಸಿಓ-4 ಮತ್ತು 5 ಮೇವಿನ ಬೆಳೆ ಪ್ರಾತ್ಯಕ್ಷಿಕೆ ಹಾಗೂ ಕೃಷಿ ಯಂತ್ರೋಕರಣಗಳ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆ ಇರಲಿದೆ ಎಂದು ಡಾ.ಧನಂಜಯ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News