ಅಕ್ರಮ ಬಿಪಿಎಲ್ ಕಾರ್ಡ್ ವಾಪಸಾತಿಗೆ ದ.ಕ. ಜಿಲ್ಲಾಧಿಕಾರಿ ಖಡಕ್ ಸೂಚನೆ

Update: 2019-10-17 15:09 GMT

ಮಂಗಳೂರು, ಅ.17: ಆರ್ಥಿಕವಾಗಿ ಹಿಂದುಳಿದ ಬಡ ಕುಟುಂಬಗಳಿಗೆ ವಿತರಿಸಲಾಗುತ್ತಿರುವ ಬಿಪಿಎಲ್ ಪಡಿತರ ಚೀಟಿಗಳನ್ನು ಶ್ರೀಮಂತರು ಸಹ ಇಲಾಖೆಗೆ ಸುಳ್ಳು ಮಾಹಿತಿ ನೀಡಿ ಸರಕಾರಕ್ಕೆ ವಂಚನೆ ಮಾಡಿರುವುದು ಕಂಡು ಬಂದಿದೆ. ಅನರ್ಹರು ಪಡೆದುಕೊಂಡಿರುವ ಬಿಪಿಎಲ್ ಪಡಿತರ ಚೀಟಿಗಳನ್ನು ತಾವಾಗಿಯೇ ಇಲಾಖೆಗೆ ಹಿಂದಿರುಗಿಸಬೇಕು ಎಂದು ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ತಿಳಿಸಿದ್ದಾರೆ.

ಸರಕಾರಕ್ಕೆ ವಂಚಿಸಿ ಪಡೆದುಕೊಂಡಿರುವ ಬಿಪಿಎಲ್ ಪಡಿತರ ಚೀಟಿಗಳನ್ನು ಹಿಂದಿರುಗಿಸಲು ಸೆ.30ರ ಗಡುವು ನೀಡಲಾಗಿತ್ತು. ಆದರೆ ಮತ್ತೊಮ್ಮೆ ಅವಕಾಶ ನೀಡಲಾಗುತ್ತಿದ್ದು, ಸಂಬಂಧಪಟ್ಟ ಕಚೇರಿಗೆ ಹಿಂದಿರುಗಿಸಬೇಕು. ಹಿಂದಿರುಗಿಸದೇ ಇದ್ದಲ್ಲಿ ಅಂತಹ ಕುಟುಂಬಗಳನ್ನು ಪತ್ತೆ ಮಾಡಿ ನಿಯಮಾನುಸಾರ ಕ್ರಿಮಿನಲ್ ಮೊಕದ್ದಮೆ ಹೂಡಲಾಗುತ್ತದೆ. ಮುಕ್ತ ಮಾರುಕಟ್ಟೆ ದರದಲ್ಲಿ ಪಡಿತರ ಸಾಮಗ್ರಿಯ ದರವನ್ನು ವಸೂಲಿ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಯಾರು ಅನರ್ಹರು ?

ಆದಾಯ ತೆರಿಗೆ ಪಾವತಿಸುತ್ತಿರುವ ಮತ್ತು 1000 ಚದರ ಅಡಿಗಿಂತ ದೊಡ್ಡದಾದ ಮನೆಯನ್ನು ಹೊಂದಿರುವವರು, ಕೇಂದ್ರ ಹಾಗೂ ರಾಜ್ಯ ಸರಕಾರಿ ನೌಕರರು, ಸಹಕಾರ ಸಂಘಗಳು, ಸ್ವಾಯತ್ತ ಸಂಸ್ಥೆ, ಮಂಡಳಿ, ಆಸ್ಪತ್ರೆ ನೌಕರರು, ವಕೀಲರು, ಆಡಿಟರ್‌ಗಳು, ದೊಡ್ಡ ಅಂಗಡಿ, ಹೊಟೇಲ್ ವರ್ತಕರು, ಕಾರು, ಲಾರಿ, ಜೆಸಿಬಿ ವಾಹನ ಹೊಂದಿರುವವರು, ಅನುದಾನಿತ ಶಾಲಾ-ಕಾಲೇಜುಗಳ ನೌಕರರು, ಮನೆ, ಮಳಿಗೆ ಕಟ್ಟಡಗಳನ್ನು ಬಾಡಿಗೆಗೆ ನೀಡಿ ಆದಾಯ ಪಡೆಯುತ್ತಿರುವವರು, ಬಹು ರಾಷ್ಟ್ರೀಯ ಕಂಪೆನಿ ಉದ್ದಿಮೆದಾರರು ಬಿಪಿಎಲ್ ಪಡಿತರ ಚೀಟಿ ಪಡೆಯಲು ಅನರ್ಹರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News