ಸಮುದ್ರದಲ್ಲಿ ಪ್ರತಿಕೂಲ ಹವಾಮಾನ: ಅ.19ರವರೆಗೆ ಮೀನುಗಾರಿಕೆಗೆ ತೆರಳದಂತೆ ಸೂಚನೆ

Update: 2019-10-17 15:53 GMT

ಮಂಗಳೂರು, ಅ.17: ರಾಜ್ಯದ ಕರಾವಳಿ ಪ್ರದೇಶ ಸಮುದ್ರದಲ್ಲಿ ಪ್ರತಿಕೂಲ ಹವಾಮಾನವಿದ್ದು, ದ.ಕ. ಜಿಲ್ಲೆಯಲ್ಲಿ ಅ.19ರವರೆಗೆ ಮೀನುಗಾರರಿಗೆ ತೆರಳದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

ಅ.17 ಮತ್ತು 18ರಂದು ಅರಬ್ಬಿ ಸಮುದ್ರದ ಆಗ್ನೇಯ ದಿಕ್ಕಿನಿಂದ ಕೇರಳದ ಕರಾವಳಿ ಹಾಗೂ ಲಕ್ಷದ್ವೀಪದ ಕಡೆಗೆ ಗಂಟೆಗೆ 45ರಿಂದ 55 ಕಿ.ಮೀ. ವೇಗದಲ್ಲಿ ಬಿರುಗಾಳಿಯು ಬೀಸಲಿದೆ. ಗಂಟೆಗೆ 65 ಕಿ.ಮೀ.ಗೂ ತನ್ನ ವೇಗವನ್ನು ಹೆಚ್ಚಿಕೊಳ್ಳಲಿದೆ. ಅ.19ರಂದು ದೊಡ್ಡ ಪ್ರಮಾಣದಲ್ಲಿ ಬಿರುಗಾಳಿ ಬೀಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಅರಬ್ಬಿ ಸಮುದ್ರದಲ್ಲಿ ಉಂಟಾದ ಪ್ರತಿಕೂಲದಿಂದಾಗಿ ಕರಾವಳಿ ಪ್ರದೇಶದಲ್ಲಿ ನಿರಂತರವಾಗಿ ಮಳೆ ಆರ್ಭಟಿಸುತ್ತಿದೆ. ಮಂಗಳೂರು ನಗರದಲ್ಲಿ ಮಧ್ಯಾಹ್ನದಿಂದಲೇ ಮಳೆ ಸುರಿಯುತ್ತಿದೆ. ಉಳ್ಳಾಲ ಸಮೀಪದ ಪೆರ್ಮನ್ನೂರು ಗ್ರಾಮದ ಮನೆಯೊಂದು ಮಳೆಗೆ ಬಹುತೇಕ ಜಖಂಗೊಂಡಿದೆ. ಘಟನೆಯಲ್ಲಿ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಉಳ್ಳಾಲಬೆಟ್ಟು ಗ್ರಾಮದ ಮನೆಯೊಂದಕ್ಕೆ ನುಗ್ಗಿದ ಮಳೆ ನೀರು ಮೊಣಕಾಲುವರೆಗೆ ನಿಂತಿದೆ. ಅಪಾರ ಪ್ರಮಾಣದ ಸೊತ್ತು ಹಾನಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News