ಉಪ್ಪಿನಂಗಡಿ ಸರಕಾರಿ ಹಿ.ಪ್ರಾ. ಶಾಲೆಯಲ್ಲಿ ಶಿಕ್ಷಕರ ಕೊರತೆ: ಪ್ರತಿಭಟನೆ

Update: 2019-10-17 16:00 GMT

ಉಪ್ಪಿನಂಗಡಿ: ಶಿಕ್ಷಕರ ಕೊರತೆಯನ್ನು ನೀಗಿಸುವಂತೆ ಆಗ್ರಹಿಸಿ ಇಲ್ಲಿನ ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿ ಗಳು ಎಸ್‍ಡಿಎಂಸಿ, ಪೋಷಕರು ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ಬೆಂಬಲದೊಂದಿಗೆ ಗುರುವಾರ ಪ್ರತಿಭಟನೆ ಆರಂಭಿಸಿದ್ದು, ಶಿಕ್ಷಕರ ಕೊರತೆಯನ್ನು ನೀಗಿಸುವವರೆಗೆ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಪೋಷಕರು ಪಟ್ಟು ಹಿಡಿದ್ದಾರೆ.

ಗುರುವಾರ ಶಾಲೆಗೆ ಬಂದ ವಿದ್ಯಾರ್ಥಿಗಳು ತರಗತಿ ಕೊಠಡಿಗಳನ್ನು ಬಹಿಷ್ಕರಿಸಿ, ಪೋಷಕರೊಂದಿಗೆ ಶಾಲಾ ಪ್ರಧಾನ ಗೇಟಿನ ಮುಂದುಗಡೆ ಪ್ರತಿಭಟನೆ ನಡೆಸಿದರು. ಈ ಸಂದರ್ಭ ಮಾತನಾಡಿದ ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ಮೊಯ್ದೀನ್ ಕುಟ್ಟಿ, 2016-17 ಶಾಲಾ ಮಕ್ಕಳ ಮಕ್ಕಳ ಸಂಖ್ಯೆಯಲ್ಲಿ ಇಳಿಮುಖವಾದ ಹಿನ್ನೆಲೆಯಲ್ಲಿ ನಾಲ್ಕು ಶಿಕ್ಷಕರನ್ನು ಇಲ್ಲಿಂದ ಬೇರೆಡೆ ವರ್ಗಾವಣೆಗೊಳಿಸಿ, 11 ಶಿಕ್ಷಕರನ್ನು ಹುದ್ದೆಗಳನ್ನು ನೀಡಲಾಗಿತ್ತು. 2019-20ನೇ ಸಾಲಿನಲ್ಲಿ 2016-17ನೇ ಸಾಲಿನಲ್ಲಿದ್ದ ಮಕ್ಕಳ ಸಂಖ್ಯೆಗಿಂತ 90 ಮಕ್ಕಳು ಹೆಚ್ಚು ಸೇರ್ಪಡೆಗೊಂಡಿದ್ದಾರೆ. ಈ ಬಾರಿ ಒಂದನೇ ತರಗತಿಗೆ ಆಂಗ್ಲ ಮಾಧ್ಯಮ ಶಿಕ್ಷಣವನ್ನು ಆರಂಭಿಸಲಾಗಿದ್ದು, 53 ಮಕ್ಕಳು ಒಂದನೇ ತರಗತಿಗೆ ಸೇರ್ಪಡೆಗೊಂಡಿದ್ದಾರೆ. ಈ ಶಾಲೆಯಲ್ಲಿ ಒಟ್ಟು 360 ಮಕ್ಕಳಿದ್ದು, ಆಂಗ್ಲಮಾಧ್ಯಮ, ನಲಿಕಲಿ ಸೇರಿದಂತೆ ಒಟ್ಟು 13 ತರಗತಿಗಳು ನಡೆಯುತ್ತಿವೆ. ಆದರೆ ಈಗ ಇಲ್ಲಿದ್ದ 11 ಶಿಕ್ಷಕರಲ್ಲಿ ಇಬ್ಬರನ್ನು ವರ್ಗಾವಣೆಗೊಳಿಸಲಾಗಿದ್ದು, ಓರ್ವರು ಹೆರಿಗೆ ರಜೆಯಲ್ಲಿ ತೊಡಗಿದ್ದಾರೆ. ವರ್ಗಾವಣೆಗೊಂಡಿರುವ ಇಬ್ಬರು ಶಿಕ್ಷಕರು ಕೂಡಾ ಒಂದನೇ ತರಗತಿಯ ಆಂಗ್ಲ ಮಾಧ್ಯಮ ತರಗತಿಗೆ ಪ್ರಸಕ್ತ ವರ್ಷ ತರಬೇತಿಯನ್ನು ಪಡೆದವರು. ಇದರಿಂದಾಗಿ ಇಲ್ಲಿ ಈಗ ಮುಖ್ಯೋಪಾಧ್ಯಾಯಿನಿ, ದೈಹಿಕ ಶಿಕ್ಷಣ ಶಿಕ್ಷಕಿ ಸೇರಿದಂತೆ ಒಟ್ಟು 8 ಮಂದಿ ಶಿಕ್ಷಕರು ಮಾತ್ರ ಇದ್ದಾರೆ. ಆದ್ದರಿಂದ ನಮಗೆ ಇಲಾಖೆ ತರಬೇತಿ ಪಡೆದ ಮೂವರು ಶಿಕ್ಷಕರನ್ನು ಹಾಗೂ ಇಬ್ಬರು ಅತಿಥಿ ಶಿಕ್ಷಕರನ್ನು ಇಲ್ಲಿಗೆ ನೀಡಬೇಕು. ಇದಕ್ಕೆ ಆಗ್ರಹಿಸಿ ನಾವು ಎರಡು ದಿನಗಳ ಕಾಲ ಮಕ್ಕಳನ್ನು ಶಾಲೆಗೆ ಕಳುಹಿಸದಿರಲು ತೀರ್ಮಾನಿಸಿದ್ದೇವೆ. ಮತ್ತೂ ಕೂಡಾ ಇಲಾಖೆಯಿಂದ ಸ್ಪಂದನೆ ದೊರಕದಿದ್ದರೆ, ಅ.21ರಂದು ಮಕ್ಕಳ ಸಹಿತ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ತೆರಳಿ ಪ್ರತಿಭಟನೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಕೆಮ್ಮಾರ ಶಾಲಾ ಎಸ್‍ಡಿಎಂಸಿ ಅಧ್ಯಕ್ಷೆ ಸಲೀಕತ್ ಖಾನ್, ಉಪ್ಪಿನಂಗಡಿ ಹಿರಿಯ ಪ್ರಾಥಮಿಕ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿಜಯಕುಮಾರ್ ಕಲ್ಲಳಿಕೆ, ಕಾರ್ಯದರ್ಶಿ ಝಕಾರಿಯಾ ಕೊಡಿಪ್ಪಾಡಿ, ಸದಸ್ಯರಾದ ಮಜೀದ್, ಮುಸ್ತಾಫ ಜಿ.ಎಂ., ಇಬ್ರಾಹೀಂ, ಕಿಶೋರ್ ನೆಕ್ಕಿಲಾಡಿ, ಹರೀಶ್ ಪೆದಮಲೆ, ಸುಲೈಮಾನ್, ಫಾತಿಮತ್ ಝೋಹಾರ, ಪುಷ್ಪಲತಾ, ವನಜಾಕ್ಷಿ, ಶೀಲಾವತಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News