ಬೈಂದೂರು: ಹೊಳೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ನೀರು ಪಾಲು

Update: 2019-10-17 16:23 GMT

ಬೈಂದೂರು, ಅ.17: ತಾಲೂಕಿನ ಕಂಬದಕೋಣೆ ಗ್ರಾಪಂ ವ್ಯಾಪ್ತಿಯ ಎಡಮಾವಿನ ಹೊಳೆ ಬೊಬ್ಬರ್ಯ ಗುಂಡಿ ಎಂಬಲ್ಲಿ ಈಜಲೆಂದು ನದಿಗೆ ಇಳಿದ ನಾಲ್ವರು ವಿದ್ಯಾರ್ಥಿಗಳಲ್ಲಿ ಇಬ್ಬರು ಕೊಚ್ಚಿಕೊಂಡು ಹೋಗಿದ್ದು, ಇನ್ನಿಬ್ಬರು ವಿದ್ಯಾರ್ಥಿಗಳು ಬಚಾವಾಗಿ ಬಂದ ಘಟನೆ ಇಂದು ಅಪರಾಹ್ನ ಸಂಭವಿಸಿದೆ.

ಘಟನೆಯಲ್ಲಿ ಕಂಬದಕೋಣೆ ದೊಡ್ಮನೆ ಹಳಗೇರಿಯ ವೆಂಕಪ್ಪ ಶೆಟ್ಟಿ ಎಂಬವರ ಪುತ್ರ ವಂಶಿತ್ ಶೆಟ್ಟಿ (12) ಹಾಗೂ ಹಳಗೇರಿ ಪಠೇಲರ ಮನೆಯ ರತ್ನಾಕರ ಶೆಟ್ಟಿ ಎಂಬವರ ಪುತ್ರ ರಿತೇಶ್ ಶೆಟ್ಟಿ (12) ಹೊಳೆಯಲ್ಲಿ ಕೊಚ್ಚಿಕೊಂಡು ಹೋಗಿ ನಾಪತ್ತೆಯಾಗಿದ್ದರೆ, ಹಳಗೇರಿ ದೊಡ್ಮನೆಯ ದಿ. ಸದಾಶಿವ ಶೆಟ್ಟಿ ಎಂಬವರ ಪುತ್ರ ಪ್ರದ್ವಿತ್ ಶೆಟ್ಟಿ (16) ಹಾಗೂ ಹಳಗೇರಿ ಕಂಬಳಗದ್ದೆ ಮನೆಯ ಸುಧಾಕರ ಶೆಟ್ಟಿ ಎಂಬವರ ಪುತ್ರ ವಿಜಯೇಂದ್ರ ಶೆಟ್ಟಿ (16) ಅವರು ಬಚಾವಾಗಿ ಬಂದಿದ್ದಾರೆ.

ನಾಲ್ವರು ವಿದ್ಯಾರ್ಥಿಗಳೂ ಇಲ್ಲಿನ ಸಾಂದೀಪನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಿಯುತಿದ್ದಾರೆ. ನಾಪತ್ತೆಯಾದ ಇಬ್ಬರೂ ಏಳನೇ ತರಗತಿ ವಿದ್ಯಾರ್ಥಿಗಳಾದರೆ, ಬಚಾವಾಗಿ ಬಂದವರಿಬ್ಬರೂ ಎಸೆಸೆಲ್ಸಿಯ ವಿದ್ಯಾರ್ಥಿ ಗಳಾಗಿದ್ದಾರೆ. ದಸರಾ ಹಾಗೂ ನವರಾತ್ರಿ ರಜೆ ಇನ್ನು ಮುಗಿಯದ ಕಾರಣ ಗುರುವಾರ ಅಪರಾಹ್ನ 12 ಗಂಟೆ ಸುಮಾರಿಗೆ ನಾಲ್ವರು ವಿದ್ಯಾರ್ಥಿಗಳು ಹೊಳೆಯಲ್ಲಿ ಈಜಲೆಂದು ನೀರಿಗೆ ಇಳಿದಿದ್ದರು. ವಂಶಿತ್ ಮತ್ತು ರಿತೇಶ್ ಮುಂದೆ ಮುಂದೆ ಹೋಗಿ ನೀರಿನ ಸೆಳೆತಕ್ಕೆ ಕೊಚ್ಚಿ ಹೋದರೆ, ಉಳಿದವರಿಬ್ಬರು ಹಿಂದೆ ಉಳಿದು ಪಾರಾಗಿ ದಡಕ್ಕೆ ಬಂದರು.
ನಾಪತ್ತೆಯಾದವರಲ್ಲಿ ವಂಶಿತ್ ಶೆಟ್ಟಿ ಅವರ ಮೃತದೇಹ ಇಂದು ರಾತ್ರಿ ವೇಳೆ ಪತ್ತೆಯಾಗಿದ್ದು, ನಿತೀಶ್ ಗೆ ಹುಡುಕಾಟ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುದ್ದಿ ತಿಳಿದು ಭಾರೀ ಸಂಖ್ಯೆಯ ಗ್ರಾಮಸ್ಥರು ಸ್ಥಳದಲ್ಲಿ ನೆರೆದಿದ್ದರು. ಈಜು ತಜ್ಞರು ಹಾಗೂ ಪೊಲೀಸ್ ಇಲಾಖೆಯವರು ಶೋಧ ಕಾರ್ಯದಲ್ಲಿ ತೊಡಗಿದ್ದರು. ಸ್ಥಳಕ್ಕೆ ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ, ಸ್ಥಳೀಯ ಜನಪ್ರತಿನಿಧಿಗಳು, ಕುಂದಾಪುರ ಡಿವೈಎಸ್ಪಿ, ಬೈಂದೂರು ವೃತ್ತ ನಿರೀಕ್ಷಕರು ಭೇಟಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News