ಅಖಿಲ ಭಾರತ ಅಂತರ ವಿವಿ ಮಹಿಳಾ ಸ್ವಾಶ್ ಚಾಂಪಿಯನ್‌ಷಿಪ್

Update: 2019-10-17 16:26 GMT

ಮಣಿಪಾಲ, ಅ.17: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ) ಆಶ್ರಯದಲ್ಲಿ ಮಣಿಪಾಲದ ಮೆರೆನಾ ಒಳಾಂಗಣ ಕ್ರೀಡಾ ಸಂಕೀರ್ಣದಲ್ಲಿ ಆಯೋಜಿಸಲಾಗಿರುವ 2019-20ನೇ ಸಾಲಿನ ಅಖಿಲ ಭಾರತ ಅಂತರ ವಿಶ್ವವಿದ್ಯಾನಿಲಯ ಮಹಿಳಾ ಸ್ಕ್ವಾಶ್ ರ್ಯಾಕೆಟ್ ಚಾಂಪಿಯನ್‌ಶಿಪ್‌ನಲ್ಲಿ ಪ್ರಶಸ್ತಿಗಾಗಿ ಕಳೆದ ಬಾರಿಯ ಪ್ರತಿಸ್ಪರ್ಧಿಗಳಾದ ಹಾಲಿ ಚಾಂಪಿಯನ್ ಮದರಾಸು ವಿವಿ ಹಾಗೂ ರನ್ನರ್ ಅಪ್ ಆತಿಥೇಯ ಮಾಹೆ ವಿವಿಗಳು ನಾಳೆ ಬೆಳಗ್ಗೆ ಸೆಣಸಾಡಲಿವೆ.

ಇಂದು ನಡೆದ ಸೆಮಿಫೈನಲ್ ಪಂದ್ಯಗಳಲ್ಲಿ ಮದರಾಸು ವಿವಿ ಪುಣೆಯ ಸಾವಿತ್ರಿಬಾಯಿ ಪುಲೆ ವಿವಿಯನ್ನು 3-0 ಅಂತರದಿಂದ ಏಕಪಕ್ಷೀಯವಾಗಿ ಸೋಲಿಸಿದರೆ, ಮಾಹೆ ಮಣಿಪಾಲ ತಂಡ, ರಾಯ್‌ಪುರದ ಪಂಡಿತ್ ರವಿಶಂಕರ್ ಶುಕ್ಲಾ ವಿವಿ ತಂಡವನ್ನು 3-1ರ ಅಂತರದಿಂದ ಪರಾಭವಗೊಳಿಸಿತು.

ಮದರಾಸು ವಿವಿಯ ಶಿವಾನಿ, ರತಿಕಾ ಹಾಗೂ ಕೃತಿಕಾ ಅವರು ತಮ್ಮ ಎದುರಾಳಿಗಳನ್ನು ನೇರ ಆಟಗಳಿಂದ ಹಿಮ್ಮೆಟ್ಟಿಸಿ ತಂಡಕ್ಕೆ ಮುನ್ನಡೆ ದೊರಕಿಸಿಕೊಟ್ಟರು. ಮಾಹೆ ತಂಡ ಆಯನ್, ಸುಕ್ರಿತಾ ಹಾಗೂ ಶುಚಿ ಅವರು ತಮ್ಮ ಎದುರಾಳಿಗಳನ್ನು ಹಿಮ್ಮೆಟ್ಟಿಸಿದರೆ, ಮುಸ್ಕಾನ್ ಅವರು ಮಾತ್ರ ನಾಲ್ಕು ಆಟಗಳಲ್ಲಿ ಸೋಲನನುಭವಿಸಿದರು.

ಇದಕ್ಕೆ ಮೊದಲು ನಡೆದ ಪಂದ್ಯಗಳಲ್ಲಿ ಮದರಾಸು ವಿವಿ, ಚಂಡೀಗಢದ ಪಂಜಾಬ್ ವಿವಿಯನ್ನು 3-1ರಿಂದ, ಮಾಹೆ ಮಣಿಪಾಲ ಉದಯಪುರದ ಮೋಹನಲಾಲ್ ಸುಖಾಡಿಯಾ ವಿವಿಯನ್ನು 3-1ರಿಂದ ಸೋಲಿಸಿದರೆ, ಸಾವಿತ್ರಿಬಾಯಿ ಫುಲೆ ವಿವಿ ದಿಲ್ಲಿ ವಿವಿಯಿಂದ ಹಾಗೂ ಪಂಡಿತ್ ರವಿ ಶಂಕರ್ ಶುಕ್ಲಾ ವಿವಿ ವಾಕ್‌ ಓವರ್ ಮೂಲಕ ನೇರವಾಗಿ ಸೆಮಿಫೈನಲ್ ಪ್ರವೇಶಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News