'8ನೇ ಪರಿಚ್ಛೇದಕ್ಕೆ ತುಳು ಭಾಷೆ ಸೇರಿಸುವ ಜವಾಬ್ದಾರಿ ನನ್ನದು'

Update: 2019-10-17 16:29 GMT

ಮಂಗಳೂರು, ಅ.17: ತುಳು ಭಾಷೆ ರಾಜ್ಯದ ಅಧಿಕೃತ ಭಾಷೆಯಾಗಬೇಕು. ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವ ಜವಾಬ್ದಾರಿ ನನ್ನ ಮೇಲಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ನೂತನ ಅಧ್ಯಕ್ಷ ದಯಾನಂದ ಕತ್ತಲ್‌ ಸಾರ್ ತಿಳಿಸಿದ್ದಾರೆ.

ನಗರದ ಉರ್ವಸ್ಟೋರ್ ಸಮೀಪದ ತುಳುಭವನದಲ್ಲಿ ಗುರುವಾರ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ತುಳು ಭಾಷೆಯು ಪಠ್ಯವಾಗಿ ಪ್ರಾಥಮಿಕ, ಪ್ರೌಢಶಾಲೆ, ಕಾಲೇಜು ಹಂತದವರೆಗೂ ಆಯೋಜನೆಯಾಗಬೇಕು. ಅಲ್ಲದೆ, ತುಳು ಲಿಪಿಯ ಕಲಿಕೆ ಪ್ರಾಥಮಿಕ ಶಾಲೆಯಿಂದಲೇ ಆಗಬೇಕೆಂಬ ಬಯಕೆ ಇದೆ. ಈ ಯೋಜನೆಗಳನ್ನು ಕಾರ್ಯಗತಗೊಳಿಸಲು ನನ್ನ ಅಧಿಕಾರಾವಧಿಯಲ್ಲಿ ಅವಿರತ ಶ್ರಮಿಸುವುದಾಗಿ ತಿಳಿಸಿದರು.

ತುಳುನಾಡು ಕಾರ್ನಿಕ ದೈವನೆಲೆಯಾಗಿದೆ. ಹಳೆಯ ಕಾಲದಲ್ಲಿ ತುಳುರಾಜ್ಯವಾಗಿ ಗುರುತಿಸಿಕೊಂಡಿದ್ದ ಈ ನಾಡಿನ ತುಳು ಭಾಷೆ, ಸಂಸ್ಕೃತಿಯ ಸೇವೆಯ ಪ್ರತಿಲವಾಗಿ ಇಂದು ಈ ತಾಯಿಯ ಸೇವೆ ಮಾಡುವ ಅವಕಾಶ ಬಂದಿದೆ ಎಂದರು.

ಪರಿಶಿಷ್ಟ ಜಾತಿ, ಪಂಗಡದ ತಳಮಟ್ಟದ ಸಮುದಾಯದಲ್ಲಿ ಹುಟ್ಟಿದ ನನಗೆ ಇಂತಹ ಅಧಿಕಾರ ನೀಡುವ ಮೂಲಕ ದೊಡ್ಡ ಹೊರೆಯನ್ನು ಸಣ್ಣ ತಲೆ ಮೇಲೆ ಹೊರಿಸಲಾಗಿದೆ. ತುಳು ಭಾಷೆ, ಸಂಸ್ಕೃತಿ, ಜಾಗೃತಿ ಮಾಡುವ ಕೆಲಸವನ್ನು ಎಲ್ಲರ ಸಹಕಾರದಿಂದ ಮಾಡುವ ಕೆಲಸವನ್ನು ಸಮರ್ಥವಾಗಿ ಮಾಡುವ ವಿಶ್ವಾಸದ ಜತೆಯಲ್ಲಿ ಸದಸ್ಯರ ಸಹಕಾರದಿಂದ ಮುಂದುವರಿಸುತ್ತೇನೆ ಎಂದರು.

ತುಳು ದೈವ ಆರಾಧನೆಯ ಜತೆಯಲ್ಲಿ ದೈವ ಶಿಲ್ಪಗಳ, ಕಲ್ಲು ಬರಹಗಳ ದಾಖಲೀಕರಣ, ತುಳು ಅಕಾಡೆಮಿಗೆ 25 ವರ್ಷದ ಸಂಭ್ರಮ, ತುಳು ಭವನದ ಉಳಿದಿರುವ ಕೆಲಸದ ಜತೆಯಲ್ಲಿ ತುಳು ಕಲಿಸುವ ಶಿಕ್ಷಕರಿಗೆ ಗೌರವಧನ ನೀಡುವ ಕಾರ್ಯಗಳು ಸಾಗಲಿದೆ. ತುಳು ಭಾಷೆಯ ಏಳಿಗೆ ಗಾಗಿ ದುಡಿದ ಎಲ್ಲರನ್ನು ಒಟ್ಟು ಸೇರಿಸಿಕೊಂಡು ತುಳು ತಾಯಿಯ ಸೇವೆಯನ್ನು ನಿರಂತರವಾಗಿ ಮುಂದುವರಿಸುವ ಯೋಜನೆಗಳನ್ನು ಮುಂದಿನ ದಿನಗಳಲ್ಲಿ ಮಾಡಲಾಗುತ್ತದೆ ಎಂದರು.

ಈ ಸಂದರ್ಭ ಮಂಗಳೂರು ತಾಲೂಕು ತಹಶೀಲ್ದಾರ್ ಗುರುಪ್ರಸಾದ್, ದ.ಕ. ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಅಕಾಡಮಿಯ ರಿಜಿಸ್ಟ್ರಾರ್ ರಾಜೇಶ್ ಜಿ., ಸನಾತನ ನಾಟ್ಯಾಲಯದ ಚಂದ್ರಶೇಖರ್ ಶೆಟ್ಟಿ, ಪೆರಾರ ಮಹಾ ಸಂಸ್ಥಾನದ ಅಧ್ಯಕ್ಷ ಸುಧೀರ್ ಪ್ರಸಾದ್ ಶೆಟ್ಟಿ ಸೇರಿದಂತೆ ಕತ್ತಲ್‌ಸಾರ್ ಅವರ ಕುಟುಂಬಿಕರು ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News