ತೆರಿಗೆ ಪಾವತಿಸದ ಮೊಬೈಲ್ ಟವರ್ ವಿರುದ್ಧ ನೋಟಿಸ್: ಸಚಿವ ಕೋಟ

Update: 2019-10-17 16:48 GMT

ಮಂಗಳೂರು, ಅ.17: ದ.ಕ. ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಮೊಬೈಲ್ ಫೋನ್ ಟವರ್ ಕಂಪೆನಿಗಳು ಗ್ರಾಮ ಪಂಚಾಯತ್‌ಗೆ ತೆರಿಗೆ ಪಾವತಿ ಮಾಡುತ್ತಿಲ್ಲ ಎಂಬ ದೂರುಗಳು ಬರುತ್ತಿವೆ. ಅಂತಹ ಕಂಪೆನಿಗಳ ವಿರುದ್ಧ ನೋಟಿಸ್ ನೀಡಿ ತೆರಿಗೆ ಕಟ್ಟುವಂತೆ ಆದೇಶ ನೀಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೆನಿವಾಸ್ ಪೂಜಾರಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಸಭಾಂಗಣದಲ್ಲಿ ಗುರುವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪೆರ್ಮುದೆ ಗ್ರಾಪಂ ವ್ಯಾಪ್ತಿಯ ನಿವೇಶನ ರಹಿತರಿಗೆ ಜಮೀನು ಕಾದಿರಿಸುವ ಬಗ್ಗೆ ಮಾಹಿತಿ ಪಡೆದು ಕೊಂಡಿದ್ದೇನೆ. ಇನ್ನೂ ಕೆಲವು ಜಮೀನುಗಳ ವಿಚಾರಗಳು ಕೋರ್ಟ್‌ನಲ್ಲಿ ವಿಚಾರಣೆಯ ಹಂತದಲ್ಲಿವೆ. ಆದಷ್ಟೂ ಬೇಗನೆ ಈ ಕಾರ್ಯ ಪೂರ್ಣಗೊಳ್ಳುವ ಭರವಸೆ ಇದೆ. ರಾಜೀವ್ ಗಾಂಧಿ ನಿವೇಶನ ಯೋಜನೆ ಅಡಿ ಖಾಲಿರುವ ಸರಕಾರಿ ಜಮೀನುಗಳನ್ನು ಸರ್ವೇ ಮಾಡಿ ನಿವೇಶನ ಇಲ್ಲದವರಿಗೆ ನ್ಯಾಯ ಬದ್ಧವಾಗಿ ವಿತರಿಸಿ ಎಂದು ನಿರ್ದೇಶನ ನೀಡಿದರು.

ಅಬ್ಬಕ್ಕ ಉತ್ಸವ: ಜಿಲ್ಲಾಡಳಿತದ ಮೂಲಕ ನಡೆಯುವಂತಹ ಪ್ರತಿ ಉತ್ಸವಗಳಿಗೆ ಸಂಬಂಧಪಟ್ಟ ಸಮಿತಿಗಳು ತಮ್ಮ ಸಲಹೆ ನೀಡಬಹುದು. ಅಬ್ಬಕ್ಕ ಉತ್ಸವಕ್ಕೆ ಸಂಬಂಧಿಸಿದ ಎರಡು ಸಮಿತಿಗಳನ್ನು ಸೇರಿಸಿ ಸಭೆ ನಡೆಸುವ ಹಾಗೂ ಅವರ ಅಭಿಪ್ರಾಯಗಳನ್ನು ಪಡೆದು ಸರಕಾರದ ನಿಯಮದ ಪ್ರಕಾರ ಉತ್ಸವ ನಡೆಸುವುದು ಸೂಕ್ತವಾಗಿದೆ. ಕರಾವಳಿ ಉತ್ಸವದ ಹಿಂದಿನ ವರ್ಷದ ಮಾದರಿಯನ್ನು ಸರಕಾರಕ್ಕೆ ನೀಡಿ ಅದರಂತೆ ಪ್ರಸ್ತುತ ಕರಾವಳಿ ಉತ್ಸವ ನಡೆಸಲು ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ಕಂಬಳ: ಪಿಲಿಕುಳದಲ್ಲಿ ಜಿಲ್ಲೆಯ ಜಾನಪದ ಕಲೆಯಾದ ಕಂಬಳವನ್ನು ಜನವರಿ ಅಂತ್ಯದಲ್ಲಿ ಅಥವಾ ಫೆಬ್ರವರಿಯಲ್ಲ್ಲಿ ನಡೆಸಬಹುದಾಗಿದೆ. ಇದಕ್ಕೆ ಎಲ್ಲ ರೀತಿಯ ಪೂರ್ವಸಿದ್ಧತೆ ನಡೆಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ಕಂಬಳಕ್ಕೆ ಬೇಕಾಗುವ ಅನುದಾನದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು, ಅನುದಾನದ ಬಗ್ಗೆ ಪ್ರಸ್ತಾವವನ್ನು ಸರಕಾರಕ್ಕೆ ನೀಡಿ, ಆದಷ್ಟು ಬೇಗ ಮಂಜೂರು ಮಾಡಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್, ಅಪರ ಜಿಲ್ಲಾಧಿಕಾರಿ ಎಂ.ಜೆ. ರೂಪಾ, ಮುಖ್ಯಕಾರ್ಯನಿವಾಹಣಾಧಿಕಾರಿ ಡಾ.ಆರ್.ಸೆಲ್ವಮಣಿ, ಶಾಸಕರಾದ ಯು.ಟಿ. ಖಾದರ್, ಉಮಾನಾಥ ಕೋಟ್ಯಾನ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

ರಾಜ್ಯೋತ್ಸವ ಪ್ರಶಸ್ತಿ

ಕನ್ನಡ ರಾಜೋತ್ಸವ ಪ್ರಶಸ್ತಿ ಆಯ್ಕೆ ಮಾಡುವ ಸಂದರ್ಭ ನಿಯಮಾನುಸಾರ ಸರಕಾರದ ಮಾನದಂಡದ ಮೂಲಕ ಆಯ್ಕೆ ಮಾಡಬೇಕು. ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ನಿರೀಕ್ಷೆ ಇದ್ದವರಿಗೆ ಅಲ್ಲಿ ಪ್ರಶಸ್ತಿ ಸಿಗದೆ ಇದ್ದಾಗ ಜಿಲ್ಲಾ ಮಟ್ಟದಲ್ಲಿ ನೀಡುವುದು ಸಮಾಧಾನಕರವಾಗಿರುತ್ತದೆ ಎಂದು ಉಸ್ತುವಾರಿ ಸಚಿವ ಕೋಟ ಶ್ರೆನಿವಾಸ್ ಪೂಜಾರಿ ತಿಳಿಸಿದರು.

ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಬಂದಿರುವಂತಹ ಅರ್ಜಿಗಳ ಮಾಹಿತಿ ಪಡೆದ ಸಚಿವರು, ಎಲ್ಲ ಕ್ಷೇತ್ರಗಳಿಗೆ ಹಂಚಿಕೆಯಾಗುವಂತೆ ಕನಿಷ್ಠ 25 ಪ್ರಶಸ್ತಿಗಳನ್ನು ನೀಡಬೇಕು ಎಂದು ಸಲಹೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News