ಮಂಗಳೂರು ವಿವಿಯಲ್ಲಿ ಮೂರು ದಿನದ ಅಂತರ್ ರಾಷ್ಟ್ರೀಯ ಸಮ್ಮೇಳನ

Update: 2019-10-17 16:56 GMT

ಕೊಣಾಜೆ: ರಸಾಯನಶಾಸ್ತ್ರ ಕ್ಷೇತ್ರವು ಜಾಗತಿಕ ಮಟ್ಟದಲ್ಲಿ ವಿಸ್ತರಿಸಿಕೊಂಡಿದೆ. ಈ ಕ್ಷೇತ್ರದಲ್ಲಿ ಸಂಶೋಧನೆಗಳಿಗೆ ಬಹಳಷ್ಟು ಅವಕಾಶಗಳಿದ್ದು ವಿದ್ಯಾರ್ಥಿಗಳು, ಯುವ ಸಮುದಾಯ ಇಂತಹ ಅವಕಾಶಗಳನ್ನು ಬಳಸಿಕೊಂಡು ಮುನ್ನಡೆಯಬೇಕು ಎಂದು  ಕೇರಳದ ಕೊಟ್ಟಾಯಂ ಎಂ.ಜಿ. ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸಬು ಥಾಮಸ್ ಅವರು ಹೇಳಿದರು.

ಅವರು ಮಂಗಳೂರು ವಿಶ್ವವಿದ್ಯಾನಿಲಯದ ರಸಾಯನಶಾಸ್ತ್ರ ವಿಭಾಗದ ಆಶ್ರಯದಲ್ಲಿ ಮಂಗಳೂರು ವಿವಿಯ ಮಂಗಳಾ ಸಭಾಂಗಣದಲ್ಲಿ "ಅಡ್ವಾನ್ಸಸ್ ಇನ್ ಕೆಮಿಕಲ್ಸ್ ಆಂಡ್ ಮೆಟೀರಿಯಲ್ಸ್ ಸೈಯನ್ಸಸ್ (ಐಸಿಸಿಎಂ 2019)" ಎಂಬ ವಿಷಯದಲ್ಲಿ ಮೂರು ದಿನಗಳ ಕಾಲ ನಡೆಯುವ ಅಂತರ್ ರಾಷ್ಟ್ರೀಯ ಮಟ್ಟದ ಸಮ್ಮೇಳನವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.

ಹೊಸ ಹೊಸ ಅಭಿವೃದ್ಧಿಯ ಬಗ್ಗೆ, ಸಂಶೋಧನೆಯ ಬಗ್ಗೆ ನಮ್ಮ ಚಿಂತನೆಗಳನ್ನು ಬೆಳೆಸುವಲ್ಲಿ ಇಂತಹ ಸಮ್ಮೇಳನಗಳು ಪರಿಣಾಮಕಾರಿ ಯಾಗಿದೆ. ಆದ್ದರಿಂದ ಇಂತಹ ಸಮ್ಮೇಳನಗಳಲ್ಲಿ ಭಾಗವಹಿಸಿ ನಮ್ಮ ಅರಿವನ್ನು ಹೆಚ್ಚಿಸಿಕೊಂಡು ಸಮಾಜಕ್ಕೆ ನಮ್ಮದೇ ಆದ ಕೊಡುಗೆ ನೀಡುವಂತಾಗಬೇಕು ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಅವರು, ರಸಾಯನಶಾಸ್ತ್ರ ಸೇರಿದಂತೆ ವಿವಿಯ ಹಲವು ವಿಭಾಗಗಳು ವಿವಿಯನ್ನು ಜಗತ್ತಿ‌ನಲ್ಲಿ ಅತ್ಯುತ್ತಮ ವಿವಿಗಳೊಂದಿಗೆ ಗುರುತಿಸುವಂತೆ ಮಾಡಿದೆ. ಶ ಸಂಶೋಧನೆಗೆ ಮಂಗಳೂರು ವಿವಿಯು ಹೆಚ್ಚಿನ ಒತ್ತು ನೀಡುತ್ತಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆಯ ಮೂಲಕ ಗುರುತಿಸಿಕೊಳ್ಳಲಿದೆ. ಶಿಕ್ಷಣ ಮತ್ತು ಉದ್ಯೋಗ ಒಂದಕ್ಕೊಂದು ಪೂರಕವಾಗಿರಬೇಕು. ನಮ್ಮ ಶೈಕ್ಷಣಿಕ ಅವಧಿಯ ವೇಳೆ ಕೆಲವೊಂದು ಪಠ್ಯೇತರ ಚಟುವಟಿಕೆಯ  ಅನುಭವಗಳು ಕೂಡಾ ನಮ್ಮ  ಭವಿಷ್ಯವನ್ನು ರೂಪಿಸುವಲ್ಲಿ ಸಹಕಾರಿಯಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಐಸಿಸಿಎಂ ನ ಅಧ್ಯಕ್ಷರಾದ ಪ್ರೊ.ಜಿ.ಕೆ.ನಾಗರಾಜ, ಐಸಿಸಿಎಂ ನ ಸಂಘಟನಾ ಕಾರ್ಯದರ್ಶಿ ಪ್ರೊ.ಬೋಜಪೂಜಾರಿ, ಕೋಶಾಧಿಕಾರಿ ಪ್ರೊ.ಜಗದೀಶ್ ಪ್ರಸಾದ್ ಮೊದಲಾವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News