ಗಾಂಧಿ ಹತ್ಯೆಗೆ ಸಂಚು ರೂಪಿಸಿದ ಆರೋಪ ಸಾವರ್ಕರ್ ಮೇಲಿತ್ತು : ಸಿದ್ದರಾಮಯ್ಯ

Update: 2019-10-18 10:34 GMT

ಮಂಗಳೂರು, ಅ.18: ಹಿಂದೂ ಮಹಾಸಭಾದ ಅಧ್ಯಕ್ಷರಾಗಿದ್ದು, ಮಹಾತ್ಮಾ ಗಾಂಧಿ ಹತ್ಯೆಗೆ ಸಂಚು ನಡೆಸಿದವರಲ್ಲಿ ಒಬ್ಬರಾಗಿರುವ ಸಾವರ್ಕರ್ ಗೆ ಭಾರತ ರತ್ನ ನೀಡಲು ಪ್ರಧಾನಿ ನರೇಂದ್ರ ಮೋದಿ ಸರಕಾರ ಮುಂದಾಗಿದೆ. ಇದು ಪ್ರಧಾನಿಯ ಟೊಳ್ಳು ದೇಶಭಕ್ತಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ನಗರದ ಸೆಂಟ್ ಸೆಬಾಸ್ಟಿನ್ ಚರ್ಚ್ ಸಭಾಂಗಣದಲ್ಲಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಸಾವರ್ಕರ್ ಗಾಂಧಿ ಹತ್ಯೆಗೆ ಸಂಚು ರೂಪಿಸಿದವರಲ್ಲಿ ಓರ್ವ ಆರೋಪಿಯಾಗಿದ್ದು, ಮತ್ತೆ ಖುಲಾಸೆಗೊಂಡವರು. ಆರ್‌ಎಸ್‌ಎಸ್ ಆಗಲಿ, ಹಿಂದೂ ಮಹಾಸಭಾದವರಾಗಲಿ ಸ್ವಾತಂತ್ರ ಹೋರಾಟದಲ್ಲಿ ಭಾಗಿ ಆದವರಲ್ಲ. ಅವರು ಬ್ರಿಟಿಷರ ಜತೆ ಸೇರಿದ್ದವರು. ಇಂತಹವರಿಗೆ ಭಾರತ ರತ್ನ ನೀಡುವ ಪಕ್ಷದವರಿಗೆ ಬುದ್ಧಿವಂತರ ನಗರವಾದ, ರಾಜಕೀಯವಾಗಿ ಪ್ರಬುದ್ಧವಾಗಿರುವ ಮಂಗಳೂರಿನಲ್ಲಿ ಅಧಿಕಾರಕ್ಕೆ ಬರಲು ಅವಕಾಶ ನೀಡಬಾರದು ಎಂದು ಅವರು ಹೇಳಿದರು.

ಕಳೆದ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯವರು ಸುಳ್ಳು ಹೇಳಿದರು. ಆದರೆ ಕಾಂಗ್ರೆಸ್ ಕಾರ್ಯರ್ಕತರು ಸತ್ಯವನ್ನು ಜನರಿಗೆ ಮನದಟ್ಟು ಮಾಡುವಲ್ಲಿ ವಿಫಲವಾದರು. ಆದ್ದರಿಂದ ಕಾಂಗ್ರೆಸ್ ಮಾಡಿರುವ ಸಾಧನೆಗಳನ್ನು ಇದೀಗ ಕಾರ್ಯಕರ್ತರು ಮನೆಗಳಿಗೆ ತೆರಳಿ ಧೈರ್ಯವಾಗಿ ಹೇಳುವ ಕೆಲಸವನ್ನು ಮಾಡಬೇಕು. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಒಗ್ಗಟ್ಟಾಗಿ ಮಾಡಿರುವ ಸಾಧನೆಗಳನ್ನು ಜನರಿಗೆ ತಿಳಿಸಬೇಕು ಎಂದು ಸಿದ್ದರಾಮಯ್ಯ ಕಾರ್ಯಕರ್ತರಿಗೆ ಕರೆ ನೀಡಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News