ರಬ್ಬರ್ ಬೆಳೆಗಾರರಿಗೆ ಬೆಂಬಲ ಬೆಲೆ ಘೋಷಿಸಬೇಕು: ಡಾ.ರಾಜೇಂದ್ರ ಕುಮಾರ್

Update: 2019-10-18 14:46 GMT

ಮಂಗಳೂರು, ಅ.18:ಒಂದು ರಾಜ್ಯದ ಬೆಳೆಗಾರರಿಗೆ ಬೆಂಬಲ ಬೆಲೆ, ಇನ್ನೊಂದು ರಾಜ್ಯದ ಬೆಳೆಗಾರರಿಗೆ ಬೆಂಬಲ ಬೆಲೆ ಇಲ್ಲ. ಇದರಿಂದ ಬೆಳೆಗಾರರು ಸಂಕಷ್ಟ ಅನುಭವಿಸುವ ಪರಿಸ್ಥಿತಿ ಇದೆ. ಇದು ಸರಿಯಲ್ಲ. ಕೇಂದ್ರ ಸರಕಾರವು ರಬ್ಬರ್ ಬೆಳೆಗಾರರನ್ನು ತಾರತಮ್ಯದಿಂದ ನೋಡದೆ ಸಮಾನವಾಗಿ ಕಾಣಬೇಕು. ಅಲ್ಲದೆ ರಾಜ್ಯದ ರಬ್ಬರ್ ಬೆಳೆಗಾರರಿಗೆ ಸೂಕ್ತ ಬೆಂಬಲ ಬೆಲೆಯನ್ನು ನಿಗದಿಪಡಿಸಬೇಕು ಎಂದು ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಆಗ್ರಹಿಸಿದ್ದಾರೆ.

ಅಖಿಲ ಕರ್ನಾಟಕ ರಬ್ಬರ್ ಬೆಳೆಗಾರರ ಸಂಘದ ವತಿಯಿಂದ ನಗರದ ಎಸ್‌ಸಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಶುಕ್ರವಾರ ನಡೆದ ರಬ್ಬರ್ ಬೆಳೆಗಾರರ ಸಮಾವೇಶದಲ್ಲಿ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.

ಭಾರತ ಸೇರಿದಂತೆ 16 ದೇಶಗಳು ಸಮಗ್ರ ಆರ್ಥಿಕ ಸಹಭಾಗಿತ್ವದ ಮುಕ್ತ ವ್ಯಾಪಾರ ಒಪ್ಪಂದ ನಡೆಸುವ ಕೇಂದ್ರದ ಪ್ರಸ್ತಾವದ ಕುರಿತು ಚರ್ಚೆಯಾಗಬೇಕು. ಭಾರತ ಇನ್ನೂ ಈ ಒಪ್ಪಂದ ಬಗ್ಗೆ ಅಂತಿಮ ಅಭಿಪ್ರಾಯ ತಿಳಿಸಿಲ್ಲ. ಆದರೆ ಈ ಒಪ್ಪಂದಕ್ಕೆ ಭಾರತ ಸಹಿ ಹಾಕಿದರೆ ರಬ್ಬರ್, ಹಾಲಿನ ಉತ್ಪನ್ನಗಳು ಸಹಿತ ವಿವಿಧ ಕ್ಷೇತ್ರಗಳನ್ನು ಅವಲಂಬಿಸಿರುವ ಜನರ ಬಗ್ಗೆ ಚಿಂತನೆ ನಡೆಯಬೇಕು ಎಂದು ರಾಜೇಂದ್ರ ಕುಮಾರ್ ಹೇಳಿದರು.

ಸಮಾವೇಶ ಉದ್ಘಾಟಿಸಿ ಮಾತನಾಡಿದ ಕೇಂದ್ರ ರಬ್ಬರ್ ಮಂಡಳಿಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಕೆ.ಎನ್.ರಾಘವನ್ ರಬ್ಬರ್ ಬೆಳೆಗಾರರ ಹಿಂತ ಕಾಯಲು ಸೂಕ್ತ ಬೆಂಬಲ ಬೆಲೆ ಒದಗಿಸುವಂತೆ ರಬ್ಬರ್‌ಮಂಡಳಿ ವತಿಯಿಂದ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬೆಳೆಗಾರರ ಪರಿಸ್ಥಿತಿಯ ಬಗ್ಗೆ ರಾಜ್ಯ ಸರಕಾರ ಗಮನ ಸೆಳೆಯಲಾಗಿದೆ ಎಂದರು.

ರಬ್ಬರ್ ಬೆಲೆ ದಿಢೀರ್ ಕುಸಿತದಿಂದ ಬೆಳೆಗಾರರಲ್ಲಿ ಸಹಜವಾದ ಆತಂಕ ಸಷ್ಟಿಸಿದೆ. ಅಂತಾರಾಷ್ಟ್ರೀಯ ಮಟ್ಟದ ಆರ್ಥಿಕತೆಯಲ್ಲಿ ಉಂಟಾದ ಬದಲಾವಣೆಯೇ ಈ ಪರಿಸ್ತಿತಿಗೆ ಮುಖ್ಯ ಕಾರಣವಾಗಿದೆ. ಬೆಳೆಗಾರರು ದಿಗಿಲಾಗುವ ಅಗತ್ಯವಿಲ್ಲ. ರಬ್ಬರ್ ಬೆಳೆಯ ಇತಿಹಾಸ ಗಮನಿಸಿದರೆ ಇದಕ್ಕೆ ಉತ್ತಮ ಭವಿಷ್ಯವಿದೆ ಎಂದು ಡಾ.ಕೆ.ಎನ್. ರಾಘವನ್ ಹೇಳಿದರು.

ವಾರದಲ್ಲಿ 1 ಬಾರಿ ಮಾತ್ರ ಟ್ಯಾಪಿಂಗ್ ಹಾಗೂ ವೈಜ್ಞಾನಿಕವಾಗಿ ಬೆಳೆ ನಡೆಸುವ ಕುರಿತು ರಬ್ಬರ್ ಬೆಳೆಗಾರರು ಗಮನ ಹರಿಸಬೇಕು. ಅಡೂರಿನಲ್ಲಿ ಟ್ಯಾಪರ್ಸ್‌ನವರು ಗುಂಪುಗಳನ್ನು ರಚಿಸಿಕೊಂಡು ಮಾಸಿಕ ತಲಾ 25 ಸಾವಿರದಿಂದ 30 ಸಾವಿರ ರೂ. ತನಕ ಯುವಕರು ಆದಾಯ ಗಳಿಸುತ್ತಿದ್ದಾರೆ. ಇಂತಹ ಮಾದರಿಯನ್ನು ಇತರ ಕಡೆಯ ರಬ್ಬರ್ ಬೆಳೆಗಾರರು ಗಮನಿಸಬೇಕು ಎಂದು ಎಂದ ರಾಘವನ್ ಹೇಳಿದರು.

ಭಾರತದಲ್ಲಿ 2018-19ನೇ ಸಾಲಿನಲ್ಲಿ ಸುಮಾರು 12.11 ಲಕ್ಷ ಟನ್ ರಬ್ಬರ್ ಬಳಸಲಾಗುತ್ತಿದೆ. ಆದರೆ ದೇಶದೊಳಗೆ ರಬ್ಬರ್‌ಉತ್ಪಾದನೆ 6.48 ಲಕ್ಷ ಟನ್ ಮಾತ್ರ ಇದೆ. ಸುಮಾರು 5.8 ಲಕ್ಷ ನೈಸರ್ಗಿಕ ರಬ್ಬರ್ ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ದೇಶದಲ್ಲಿ ವಾಹನ ಉತ್ಪಾದನಾ ಕೈಗಾರಿಕೆಗಳಲ್ಲಿ ಶೇ.55 ನೈಸರ್ಗಿಕ ರಬ್ಬರ್ ಉಪಯೋಗಿಸಲಾಗುತ್ತದೆ. ಕರ್ನಾಟಕದಲ್ಲಿ ವಾರ್ಷಿಕ ಪ್ರತೀ ಹೆಕ್ಟೇರ್‌ಗೆ 1,800 ಕೆ.ಜಿ. ರಬ್ಬರ್ ಪಡೆಯಲಾಗುತ್ತಿದೆ ಎನ್ನುವುದು ಸಂತೋಷದ ವಿಚಾರ ಎಂದು ರಾಘವನ್ ನುಡಿದರು.

ಮುಖ್ಯ ಅತಿಥಿಗಳಾಗಿ ರಬ್ಬರ್ ಮಂಡಳಿಯ ರಬ್ಬರ್ ಉತ್ಪಾದನಾ ಜಂಟಿ ಆಯುಕ್ತ ಸಾಬು, ಆರ್‌ಜಿಎಂಪಿಸಿಎಸ್ (ಉಜಿರೆ) ಅಧ್ಯಕ್ಷ ಶ್ರೀಧರ ಬಿಡೆ, ಗುತ್ತಿಗಾರು ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಕಾಞಂಗಾಡು ವ್ಯವಸ್ಥಾಪನಾ ನಿರ್ದೇಶಕ ಪವಿತ್ರನ್ ನಂಬಿಯಾರ್ ಉಪಸ್ಥಿತರಿದ್ದರು.

ಬೆಂಬಲ ಬೆಲೆ ಬೇಡಿಕೆ

ಕೆ.ಜಿ.ಗೆ 160 ರೂ. ಬೆಂಬಲ ಬೆಲೆ ಒದಗಿಸಬೇಕು ಎನ್ನುವುದು ಕರ್ನಾಟಕ ರಬ್ಬರ್ ಬೆಳೆಗಾರರ ಸಂಘದ ಬೇಡಿಕೆ. ಕೇರಳದಲ್ಲಿ ಕೆ.ಜಿ.ಗೆ 150 ರೂ. ಬೆಂಬಲ ಬೆಲೆಯನ್ನು ಸರಕಾರ ಒದಗಿಸುತ್ತಿದೆ ಎಂದು ಅಧ್ಯಕ್ಷತೆ ವಹಿಸಿದ ಸಂಘದ ಅಧ್ಯಕ್ಷ ಕರ್ನಲ್ ನಿಟ್ಟೆಗುತ್ತು ಶರತ್ ಭಂಡಾರಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News