ರಾಷ್ಟ್ರೀಯ ಹೋಮಿಯೋಪಥಿ ಸಮ್ಮೇಳನ ‘ಇನ್ವೆನಿಯೋ 2ಕೆ19’ ಚಾಲನೆ

Update: 2019-10-19 06:39 GMT

ಮಂಗಳೂರು, ಅ.19: ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ಅಂಗಸಂಸ್ಥೆ ಕಂಕನಾಡಿಯ ಫಾದರ್ ಮುಲ್ಲರ್ ಹೋಮಿಯೋಪಥಿ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ವತಿಯಿಂದ ಆಯೋಜಿಸಲಾಗಿರುವ ಎರಡು ದಿನಗಳ 24ನೇ ರಾಷ್ಟ್ರೀಯ ಹೋಮಿಯೋಪಥಿ ಸಮ್ಮೇಳನ ‘ಇನ್ವೆನಿಯೋ 2ಕೆ19’ಕ್ಕೆ ಶನಿವಾರ ಚಾಲನೆ ನೀಡಲಾಯಿತು.

ಸಮ್ಮೇಳನವನ್ನು ದೆಹಲಿಯ ಸೆಂಟ್ರಲ್ ಕೌನ್ಸಿಲ್ ಆಫ್ ಹೋಮಿಯೋಪಥಿ ಇದರ ಸದಸ್ಯ, ಕರ್ನಾಟಕ ಹೋಮಿಯೋಪಥಿ ವೈದ್ಯಕೀಯ ಮಂಡಳಿ ಅಧ್ಯಕ್ಷ ನಾಡೋಜ ಡಾ.ಬಿ.ಟಿ.ರುದ್ರೇಶ್ ಉದ್ಘಾಟಿಸಿದರು.

ಈ ಸಂದರ್ಭ ಮಾತನಾಡಿದ ಅವರು, 2020ರೊಳಗೆ ಎಲ್ಲರಿಗೂ ಆರೋಗ್ಯವನ್ನು ಕಲ್ಪಿಸುವ ಸಂಕಲ್ಪವು ಹೋಮಿಯೋಪತಿ ಚಿಕಿತ್ಸೆ ಹೊರತಾಗಿ ಅಸಾಧ್ಯ ಎಂದರು. ಈ ನಿಟ್ಟಿನಲ್ಲಿ ನೀತಿ ಆಯೋಗಕ್ಕೆ ತಾನು ಸಲ್ಲಿಸಿದ್ದ ಕೋರಿಕೆಯ ಮೇರೆಗೆ ಕರ್ನಾಟಕದ 200 ತಾಲೂಕುಗಳಲ್ಲಿ ಹೋಮಿಯೋಪಥಿ ಔಷಧಾಲಯ ಆರಂಭಿಸುವ ಯೋಜನೆಗೆ ಈ ಸಾಲಿನ ಬಜೆಟ್‌ನಲ್ಲಿ ಅನುಮೋದನೆ ದೊರಕಿದೆ. ಈಗಾಗಲೇ 10 ಕೋಟಿ ರೂ. ವೆಚ್ಚದಲ್ಲಿ 100 ಔಷಧಾಲಯಗಳನ್ನು ಸ್ಥಾಪಿಸಲು ಆದೇಶವಾಗಿದೆ ಎಂದವರು ಹೇಳಿದರು.

ಬಡವರಿಗೆ ಮಾತ್ರವಲ್ಲ, ಆರೋಗ್ಯ ಸಮಸ್ಯೆ ಇಂದು ಮೇಲ್ವರ್ಗದ ಜನರನ್ನೂ ಹೈರಾಣಾಗಿಸುತ್ತಿದೆ. ಜನಸಾಮಾನ್ಯರನ್ನು ಕಾಡುವ ನಾನಾ ರೀತಿಯ ಕಾಯಿಲೆಗಳಿಗೆ ಚಿಕಿತ್ಸೆ ಒದಗಿಸುವಲ್ಲಿ ಹೋಮಿಯೋಪತಿ ಪರ್ಯಾಯ ವ್ಯವಸ್ಥೆಯಾಗಿ ಜನಪ್ರಿಯಗೊಳ್ಳುತ್ತಿದೆಯಲ್ಲದೆ, ಭವಿಷ್ಯದ ಆಶಾಕಿರಣ ಎಂದು ಅವರು ಹೇಳಿದರು.

ಯಾವುದೇ ಒಂದು ಚಿಕಿತ್ಸಾ ಪದ್ಧತಿ ಪರಿಣಾಮಕಾರಿಯಾಗಿಲ್ಲವೆಂದರೆ ಅದು ಪದ್ಧತಿಯ ವೈಫಲ್ಯವಲ್ಲ. ಬದಲಾಗಿ ವೈದ್ಯರ ವೈಫಲ್ಯ. ಹಾಗಾಗಿ ವೈದ್ಯರು ತಮ್ಮ ಕರ್ತವ್ಯದಲ್ಲಿ ನಿಷ್ಠೆ ಹಾಗೂ ಆಸಕ್ತಿಯಿಂದ ಬದಲಾವಣೆಯೊಂದಿಗೆ ತಮ್ಮನ್ನು ತೊಡಗಿಸಿಕೊಂಡು ತಮ್ಮ ವೈದ್ಯಕೀಯ ತತ್ವಗಳಿಗೆ ಬದ್ಧರಾಗಿದ್ದುಕೊಂಡು ಪ್ರಾಕ್ಟೀಸ್ ಮಾಡಿದರೆ ಆರೋಗ್ಯ ವ್ಯವಸ್ಥೆಯಲ್ಲಿ ಬದಲಾವಣೆ ಸಾಧ್ಯ ಎಂದವರು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಫಾದರ್ ಮುಲ್ಲರ್ ಸಂಸ್ಥೆಗಳ ಆಡಳಿತಾಧಿಕಾರಿ ರೆ.ಫಾ.ರುಡಾಲ್ಫ್ ರವಿ ಡೇಸಾ, ವೈದ್ಯಕೀಯ ಕ್ಷೇತ್ರದಲ್ಲಿ ಸಂಶೋಧನೆಗಳಿಲ್ಲದೆ ಬದಲಾವಣೆ ಸಾಧ್ಯವಾಗದು. ಈ ನಿಟ್ಟಿನಲ್ಲಿ ಸಂಶೋಧನೆಗೆ ಒತ್ತು ನೀಡಿ ನಡೆಯುತ್ತಿರುವ ಈ ಸಮ್ಮೇಳನ ಹೋಮಿಯೋಪತಿ ಪದ್ಧತಿಗೆ ಪ್ರೋತ್ಸಾಹದಾಯಕ ಎಂದರು.

ಕಾರ್ಯಕ್ರಮದಲ್ಲಿ ಸಮ್ಮೇಳನದ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.

ಫಾದರ್ ಮುಲ್ಲರ್ ಹೋಮಿಯೋಪಥಿ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಪ್ರಾಂಶುಪಾಲ ಡಾ.ಶಿವಪ್ರಸಾದ್ ಸ್ವಾಗತಿಸಿದರು. ಆಡಳಿತಾಧಿಕಾರಿ ರೆ.ಫಾ. ರೋಶನ್ ಕ್ರಾಸ್ತಾ ಉಪಸ್ಥಿತರಿದ್ದರು. ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಡಾ.ಪಿ.ಜೆ.ಕುರಿಯನ್ ವಂದಿಸಿದರು. ಡಾ.ಸ್ಕಂದನ್ ಹಾಗೂ ಡಾ.ಶೆರ್ಲಿನ್ ಕಾರ್ಯಕ್ರಮ ನಿರೂಪಿಸಿದರು.


ಮುಂದಿನ ತಿಂಗಳು ಹೋಮಿಯೋಭವನ ಉದ್ಘಾಟನೆ
ಹೋಮಿಯೋಪಥಿ ಔಷಧೀಯ ಪದ್ಧತಿಗೆ ಸಂಬಂಧಿಸಿ ಕರ್ನಾಟಕದಲ್ಲಿ ಹೋಮಿಯೋಭವನವು ಬಸವೇಶ್ವರನಗರದಲ್ಲಿ ನಿರ್ಮಾಣವಾಗಿದೆ. ಒಂದು ಕೋಟಿ ರೂ. ವೆಚ್ಚದಲ್ಲಿ ಈ ಭವನ ನಿರ್ಮಾಣವಾಗಿದ್ದು, ಮುಂದಿನ ತಿಂಗಳು ಉದ್ಘಾಟನೆಗೊಳ್ಳಲಿದೆ. ಇದಕ್ಕಾಗಿ ತಾನು 7 ವರ್ಷಗಳಿಂದ ತನಗೆ ದೊರಕುವ ವೇತನ, ವಾಹನ ಹಾಗೂ ಇತರ ಭತ್ತೆಗಳ ಸುಮಾರು 50 ಲಕ್ಷ ರೂ.ಗಳನ್ನು ಭವನಕ್ಕೆ ಕೊಡುಗೆಯಾಗಿ ಒದಗಿಸಿರುವುದಾಗಿ ನಾಡೋಜ ಡಾ.ಬಿ.ಟಿ.ರುದ್ರೇಶ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News