ನೆರೆಯಲ್ಲೂ ಬೆಳೆಯುವ ‘ಸಹ್ಯಾದ್ರಿ ಪಂಚಮುಖಿ’ ಕೆಂಪು ಭತ್ತದ ತಳಿ

Update: 2019-10-19 13:58 GMT

ಉಡುಪಿ, ಅ.19: ಕರ್ನಾಟಕ ಕರಾವಳಿಯಲ್ಲಿ ನೆರೆ ಹಾವಳಿಯಿಂದ ಕಡಿಮೆ ಭತ್ತದ ಇಳುವರಿ ಪಡೆಯುವ ಕೃಷಿಕರಿಗೆ ಪರಿಹಾರವಾಗಿ ನೆರೆ ಹಾವಳಿಯನ್ನು ತಡೆದು ಬೆಳೆಯುವ ‘ಸಹ್ಯಾದ್ರಿ ಪಂಚಮುಖಿ’ ಕೆಂಪು ಭತ್ತದ ತಳಿಯನ್ನು ಬ್ರಹ್ಮಾವರದ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ ಅಭಿವೃದ್ಧಿ ಪಡಿಸಿ ಯಶಸ್ವಿಯಾಗಿದೆ.

ಹೆಚ್ಚು ಇಳುವರಿ ಸಾಮರ್ಥ್ಯದ ತಳಿಗಳ ಅಭಿವೃದ್ಧಿಗಾಗಿ ಬ್ರಹ್ಮಾವರದ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ಅಖಿಲ ಭಾರತೀಯ ಸಮನ್ವಯ ಅಕ್ಕಿ ಅಭಿವೃದ್ಧಿ ಯೋಜನೆಯಡಿ ನಡೆಸಿದ ಹೆಚ್ಚಿನ ಸಂಶೋಧನಾ ಪ್ರಯತ್ನಗಳ ಫಲವಾಗಿ ಅಭಿವೃದ್ಧಿ ಪಡಿಸಲಾದ ಈ ಸಹ್ಯಾದ್ರಿ ಪಂಚಮುಖಿ(ಇರ್ಗಾ-318-11-6-9-2ಬಿ) ಕೆಂಪು ಭತ್ತದ ತಳಿಯನ್ನು ಕೇಂದ್ರದಲ್ಲಿ ಆ.19ರಿಂದ ಆರಂಭಗೊಂಡ ಕೃಷಿಮೇಳದಲ್ಲಿ ಬಿಡುಗಡೆಗೊಳಿಸ ಲಾಯಿತು.

ಕರ್ನಾಟಕ ಕರಾವಳಿಯ ತಗ್ಗು ಪ್ರದೇಶದ ಬಯಲು ಭತ್ತದ ಗದ್ದೆಗಳಿಗೆ ಸೂಕ್ತ ತಳಿಯಾಗಿದ್ದು, ಬಯಲು ಗದ್ದೆಗಳಿಗೆ ಮುಂಗಾರು ಬೆಳೆಯಾಗಿ ಬೆಳೆಯಲು ಅತ್ಯಂತ ಪ್ರಶಸ್ತವಾಗಿದೆ. ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಈ ತಳಿಯು ನಿರಂತರವಾಗಿ ಹೆಕ್ಟರ್ ಒಂದಕ್ಕೆ ಸರಾಸರಿ 56 ಕ್ವಿಂಟಾಲ್‌ನಂತೆ ಇಳುವರಿ ನೀಡಿದೆ. ಈ ತಳಿ ಪ್ರತಿ ಎಕರೆಗೆ ಸರಾಸರಿ 18-20 ಕ್ವಿಂಟಾಲ್ ಇಳುವರಿಯನ್ನು ನೀಡುತ್ತದೆ.

ಇದು ಕೆಂಪಕ್ಕಿಯಾಗಿದ್ದು, ಮಧ್ಯಮ ಗಾತ್ರದ ಬೀಜವನ್ನು ಹೊಂದಿದೆ. ಎಂಓ4 ಭತ್ತದ ತಳಿಗೆ ಹೋಲಿಕೆ ಮಾಡಿದರೆ ಈ ತಳಿ 95 ಸೆ.ಮೀ. ಎತ್ತರ ಬೆಳೆದರೂ ಬೀಳುವುದಿಲ್ಲ. ಇದುವೇ ಇದರ ವಿಶೇಷವಾಗಿದೆ. ಕಣೆ ಕೀಟ ನಿರೋಧಕ ಮತ್ತು ನೆರೆ ಹಾವಳಿಯನ್ನು ತಡೆದುಕೊಂಡು ಬೆಳೆಯುವ ತಳಿ ಇದಾಗಿದೆ.

ನೋಡಲು ಆಕರ್ಷಣಿಯವಾಗಿದ್ದು, ಕುಚ್ಚಲಕ್ಕಿ ಅನ್ನಕ್ಕೆ ಯೋಗ್ಯವಾಗಿದೆ. ಯಾವುದೇ ರೀತಿಯ ಕೀಟ ರೋಗ ಬಂದರೂ ಸಹಿಸಿಕೊಳ್ಳುತ್ತದೆ. ಕರ್ನಾಟಕ ಕರಾವಳಿಯ ತಗ್ಗು ಪ್ರದೇಶದಲ್ಲಿ ಬೆಳೆಯಲು ಈ ತಳಿಯನ್ನು ಶಿಫಾರಸ್ಸು ಮಾಡ ಲಾಗಿದೆ. ಕನಿಷ್ಠ 8ರಿಂದ 15 ದಿನಗಳ ಕಾಲ ನೆರೆ ಹಾವಳಿಯನ್ನು ತಡೆದು ಕೊಳ್ಳುವ ಸಾಮರ್ಥ್ಯ ಇದಕ್ಕಿದೆ. ರೈತರು ಎಂಓ4 ಬೆಳೆದು ನಷ್ಟ ಮಾಡು ವುದಕ್ಕಿಂತ ಈ ಇರ್ಗಾ ತಳಿಯನ್ನು ಬೆಳೆಸಬಹುದಾಗಿದೆ. ಈಗಾಗಲೇ ಸುಮಾರು 20 ಎಕರೆ ಪ್ರದೇಶದಲ್ಲಿ ಈ ತಳಿಯನ್ನು ಬೆಳೆಸಲಾಗಿದೆ ಎಂದು ಕೇಂದ್ರದ ವಿಜ್ಞಾನಿ ಶ್ರೀದೇವಿ ಎ.ಜಕ್ಕೇರಾಳ ತಿಳಿಸಿದ್ದಾರೆ.

ಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ ಕಳೆದ 38ವರ್ಷಗಳಿಂದ ನಿರಂತರ ಸಂಶೋಧನೆ ಮಾಡುತ್ತ ಈ ಭಾಗದ ರೈತರಿಗೆ ನೆರವಾಗುತ್ತಿದೆ. ಎಂಓ 4 ಭತ್ತದ ತಳಿ ಬೆಳೆಸುತ್ತಿದ್ದ ಈ ಭಾಗದ ರೈತರಿಂದ ಕಳೆದ 15-20ವರ್ಷಗಳಿಂದ ಇಲ್ಲಿಗೆ ಬೇರೆಯೇ ತಳಿ ಬೇಕು ಎಂಬ ಬೇಡಿಕೆ ಕೇಳಿ ಬರುತ್ತಿತ್ತು. ಅದರಂತೆ ಕೇಂದ್ರ ನಡೆಸಿದ ಸಂಶೋಧನೆಯಿಂದ ಸಹ್ಯಾದ್ರಿ ಪಂಚಮುಖಿ ಎಂಬ ಕೆಂಪಕ್ಕಿ ಭತ್ತದ ತಳಿಯನ್ನು ಇಲ್ಲಿನ ಜನರಿಗಾಗಿ ಬಿಡುಗಡೆ ಮಾಡಿದೆ. ಈ ತಳಿಗೆ ನೆರೆ ಹಾವಳಿಯನ್ನು ತಡೆದುಕೊಳ್ಳುವ ಶಕ್ತಿ ಇದೆ. ಅದನ್ನು ನಾವು ಜನಪ್ರಿಯಗೊಳಿಸಬೇಕಾಗಿದೆ.

-ಡಾ.ಎಂ.ಕೆ.ನಾಯ್ಕ, ಕುಲಪತಿ, ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾನಿಲಯ, ಶಿವಮೊಗ್ಗ.

ತಾರಸಿ ಮೇಲೆ ಅಣಬೆ ಕೃಷಿ, ಕೃಷಿ ವಸ್ತುಗಳ ಪ್ರದರ್ಶನ

ಬ್ರಹ್ಮಾವರದ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ಆವರಣದಲ್ಲಿ ಇಂದಿನಿಂದ ಆರಂಭಗೊಂಡ ಕೃಷಿಮೇಳಕ್ಕೆ ಉತ್ತಮ ಸ್ಪಂದನೆ ದೊರೆತಿದ್ದು, ರೈತರು, ವಿದ್ಯಾರ್ಥಿಗಳು, ಯುವಜನತೆ ಕೃಷಿಗೆ ಸಂಬಂಧಿಸಿದ ವಿಚಾರಗಳ ಕುರಿತು ಮಾಹಿತಿ ಪಡೆದುಕೊಂಡರು.

ಈ ಬಾರಿಯ ಕೃಷಿಮೇಳದಲ್ಲಿ ಕಾರ್ಕಳದ ರವಿ ಅವರು ಪ್ರದರ್ಶಿಸಿದ ತಾರಸಿ ಮೇಲೆ ಚಿಪ್ಪು ಅಣಬೆ ಕೃಷಿ ವಿಶಿಷ್ಟವಾಗಿತ್ತು. ಜಾಗದ ಕೊರತೆ ಇರುವವರು ಮನೆಯ ತಾರಸಿ ಮೇಲೆಯೇ ಚಿಪ್ಪು ಅಣಬೆಯನ್ನು ಬೆಳೆಸಿ ದೈನಂದಿನ ಆಹಾರ ದಲ್ಲಿ ಬಳಸಿಕೊಳ್ಳಬಹುದಾಗಿದೆ.

ಅದೇ ರೀತಿ ನೂರಾರು ಬಗೆಯ ಭತ್ತದ ತಳಿಗಳು, ಬೀಜೋತ್ಪಾದನೆ, ಭತ್ತದಲ್ಲಿ ಚಾಪೆ ನೇಜಿ ತಯಾರಿ, ಶ್ರೀಪದ್ಧತಿ ಬೇಸಾಯ, ತೆಂಗಿನಲ್ಲಿ ಬಹು ಬೆಳೆ ಯೋಜನೆ, ಸಾವಯವ ಗೊಬ್ಬರ, ಕಾಂಪೋಸ್ಟ್, ಎರೆಗೊಬ್ಬರ ತಯಾರಿ, ದೇಶಿ ತಳಿಯ ಹಸುಗಳ ಪ್ರದರ್ಶನ, ಮೀನುಗಾರಿಕೆ, ಆಡು, ಮೊಲ, ಕೋಳಿ, ಹದಿ ಮತ್ತು ಬಾತುಕೋಳಿ ಸಾಕಾಣಿಕೆ ಪ್ರಾತ್ಯಕ್ಷಿಕೆ, ಕೃಷಿ ಯಂತ್ರೋಪಕರಣಗಳು, ಜೈವಿಕ ಅನಿಲ ಉತ್ಪಾದನಾ ಘಟಕಗಳು, ಆಹಾರ ಉತ್ಪನ್ನಗಳು, ಅಲಂಕಾರಿಕಾ ಗಿಡಗಳ ಪ್ರದರ್ಶನಗಳು ಪ್ರಮುಖವಾಗಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News