ಬ್ರಹ್ಮಾವರದಲ್ಲಿ ಕೃಷಿ ಕಾಲೇಜು ಸ್ಥಾಪಿಸಲು ಸಿಎಂಗೆ ಪ್ರಸ್ತಾವನೆ

Update: 2019-10-19 14:00 GMT

ಉಡುಪಿ, ಅ.19: ಈ ಹಿಂದೆ ನನೆಗುದಿಗೆ ಬಿದ್ದಿದ್ದ ಬ್ರಹ್ಮಾವರ ಕೃಷಿ ಕಾಲೇಜು ಸ್ಥಾಪನೆ ಕುರಿತು ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಿ, ಮುಂದಿನ ಬಜೆಟ್ ನಲ್ಲಿ ಮಂಜೂರು ಮಾಡುವ ಬಗ್ಗೆ ಪ್ರಯತ್ನ ಮಾಡಲಾಗುವುದು ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ಹೇಳಿದ್ದಾರೆ.

ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ, ಬ್ರಹ್ಮಾವರ ಮತ್ತು ಉಳ್ಳಾಲ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ, ಬ್ರಹ್ಮಾವರ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ, ಬ್ರಹ್ಮಾವರ ಡಿಪ್ಲೋಮಾ ಕೃಷಿ ಮಹಾವಿದ್ಯಾಲಯ, ಕೊಚ್ಚಿನ್ ಗೇರು ಮತ್ತು ಕೋಕೋ ಅಭಿವೃದ್ಧಿ ನಿರ್ದೇಶನಾಲಯ, ಉಡುಪಿ ಕೃಷಿ, ತೋಟಗಾರಿಕೆ, ರೇಷ್ಮೆ, ಅರಣ್ಯ, ಪಶು ಸಂಗೋಪನೆ ಮತ್ತು ಮೀನುಗಾರಿಕಾ ಇಲಾಖೆ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಮಂಗಳೂರು ಹಾಲು ಉತ್ಪಾದಕರ ಒಕ್ಕೂಟ, ಜಿಲ್ಲಾ ಕೃಷಿಕ ಸಮಾಜ ಉಡುಪಿ ಮತ್ತು ಮಂಗಳೂರು ಇವುಗಳ ಸಹಯೋಗ ದಲ್ಲಿ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಲಾದ ಎರಡು ದಿನಗಳ ಕೃಷಿ ಮೇಳವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಈ ಹಿಂದೆ ಬ್ರಹ್ಮಾವರದಲ್ಲಿ ಕೃಷಿ ಕಾಲೇಜು ಸ್ಥಾಪನೆಗೆ ಅನುಮತಿ ದೊರೆತಿದ್ದು, ಆದರೆ ತಾಂತ್ರಿಕ ಕಾರಣಗಳಿಂದ ಅದು ನೆನೆಗುದಿಗೆ ಬಿದ್ದಿತ್ತು. ಆದುದರಿಂದ ಮತ್ತೆ ಅದಕ್ಕೆ ಮಂಜೂರಾತಿ ದೊರಕಿಸಿಕೊಡುವ ಬಗ್ಗೆ ಕೃಷಿ ಇಲಾಖೆಯ ಅಧಿಕಾರಿಗಳ ತಂಡದೊಂದಿಗೆ ತೆರಳಿ, ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸ ಲಾಗುವುದು. ಕಾಲೇಜಿ ಸ್ಥಾಪನೆಗೆ ಸಂಬಂಧಿಸಿ ಜಾಗ ಕೂಡ ಲಭ್ಯ ಇದೆ ಎಂದು ಅವರು ತಿಳಿಸಿದರು.

ಸಕ್ಕರೆ ಕಾರ್ಖಾನೆಗಳನ್ನು ಸರಕಾರ ಖಾಸಗಿಯವರಿಗೆ ಲೀಸ್ ಕೊಡುವ ಬಗ್ಗೆ ಚಿಂತನೆ ನಡೆಸುತ್ತಿದೆ. ಈ ಸಂಬಂಧ ಬ್ರಹ್ಮಾವರ ಕಾರ್ಖಾನೆಯನ್ನು ಖಾಸಗಿ ಯವರಿಗೆ ನೀಡುವುದಾದರೂ ಕಾರ್ಖಾನೆ ಆರಂಭಿಸುವ ಬಗ್ಗೆ ಆದ್ಯತೆ ನೀಡ ಬೇಕು. ಅದು ಬಿಟ್ಟು ಕೇವಲ ಕಾರ್ಖಾನೆಯ ಜಾಗದ ಮೇಲೆ ಕಣ್ಣಿಟ್ಟು ಬರುವವರಿಗೆ ನೀಡಬಾರದು. ಈ ಕುರಿತು ಸಂಬಂಧಪಟ್ಟ ಸಚಿವರೊಂದಿಗೆ ಮಾತು ಕತೆ ನಡೆಸಲಾಗುವುದು ಎಂದರು.

ಕೂಲಿ ಕಾರ್ಮಿಕರ ಕೊರತೆ ಮತ್ತು ಕೃಷಿ ಲಾಭದಾಯಕ ವೃತ್ತಿ ಅಲ್ಲ ಎಂಬ ಮುಖ್ಯ ಕಾರಣದಿಂದ ಇಂದಿನ ಯುವಜನತೆ ಕೃಷಿ ಬದುಕಿನಿಂದ ವಿಮುಖ ರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿನ ಕಾರ್ಮಿಕರ ಕೊರತೆಯನ್ನು ನೀಗಿಸಿ ಕೃಷಿಯಲ್ಲಿ ಹೆಚ್ಚು ಲಾಭ ಗಳಿಸಲು ತಂತ್ರಜ್ಞಾನದ ನೆರವಿನಿಂದ ಯಾಂತ್ರೀ ಕರಣದತ್ತ ಮುಖ ಮಾಡಿದರೆ ಲಾಭ ಗಳಿಸಲು ಸಾಧ್ಯ ಎಂದು ಅವರು ಹೇಳಿದರು.

ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರ ಅಭಿವೃದ್ದಿ ಪಡಿಸಿದ ನೂತನ ಭತ್ತದ ತಳಿ ಸಹ್ಯಾದ್ರಿ ಪಂಚಮುಖಿಯನ್ನು ಜಿಪಂ ಅಧ್ಯಕ್ಷ ದಿನಕರ ಬಾಬು, ಸಹ್ಯಾದ್ರಿ ಜೀವಾಣುಯುಕ್ತ ಎರೆಗೊಬ್ಬರ ಹಾಗೂ ಸಹ್ಯಾದ್ರಿ ಎರೆ ಜಲವನ್ನು ಜಿಪಂ ಉಪಾಧ್ಯಕ್ಷೆ ಶೀಲಾ.ಕೆ.ಶೆಟ್ಟಿ ಬಿಡುಗಡೆಗೊಳಿಸಿದರು.

ತಾಪಂ ಅಧ್ಯಕ್ಷೆ ನೀತಾ ಗುರುರಾಜ್ ಪೂಜಾರಿ, ಉಪಾಧ್ಯಕ್ಷ ಭುಜಂಗ ಶೆಟ್ಟಿ, ಜಿಪಂ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಉದಯ ಎಸ್. ಕೋಟ್ಯಾನ್, ಜಿಪಂ ಸದಸ್ಯ ಮೈರ್ಮಾಡಿ ಸುಧಾಕರ ಶೆಟ್ಟಿ, ಚಾಂತಾರು ಗ್ರಾಪಂ ಅಧ್ಯಕ್ಷೆ ಸರಸ್ವತಿ ಮೊದಲಾದವರು ಉಪಸ್ಥಿತರಿದ್ದರು.
ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕಾ ವಿಶ್ವ ವಿದ್ಯಾಲಯದ ಕುಲಪತಿ ಡಾ.ಎಂ.ಕೆ.ನಾಯ್ಕಾ ಪ್ರಾಸ್ತಾವಿಕವಾಗಿ ಮಾತನಾಡಿದರು.

ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಸಹ ಸಂಶೋಧನಾ/ವಿಸ್ತರಣಾ ನಿರ್ದೇಶಕ ಡಾ.ಎಸ್.ಯು. ಪಾಟೀಲ್ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕ ಡಾ. ಧನಂಜಯ ವಂದಿಸಿದರು.

ಹವಾಮಾನ ವೈಪರೀತ್ಯ ದೊಡ್ಡ ಸವಾಲು

ಕರಾವಳಿಯಂತಹ ವೈಶಿಷ್ಟ್ಯಪೂರ್ಣ ಪ್ರದೇಶದಲ್ಲಿ ಕೃಷಿಗೆ ಹಲವು ಸವಾಲುಗಳು ಎದುರಾಗುತಿದ್ದು, ಹವಾಮಾನ ವೈಪರೀತ್ಯದಿಂದಾಗಿ ಕೃಷಿ ಬದುಕಿನಲ್ಲಿ ವ್ಯತ್ಯಾಸವಾಗುತ್ತಿದೆ ಎಂದು ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಕೆ.ನಾಯ್ಕಾ ತಿಳಿಸಿದರು.

ಯಾಂತ್ರೀಕರಣವೇ ಭತ್ತದ ಕೃಷಿಯ ಆಶಾಕಿರಣವಾಗಿದೆ. ಯಾಂತ್ರೀಕೃತ ಕೃಷಿ ಅಳವಡಿಕೆ ಕುರಿತು 400 ಎಕ್ರೆ ಪ್ರದೇಶದಲ್ಲಿ ಪ್ರಾತ್ಯಕ್ಷಿಕೆ ನೀಡಿದ್ದು, 50 ಎಕರೆ ಪ್ರದೇಶದಲ್ಲಿ ಯಾಂತ್ರಿಕೃತ ಭತ್ತದ ಕೃಷಿ ನಡೆಸಲಾಗಿದೆ. ಹವಾಮಾನ ಮುನ್ಸೂಚನೆ ನೀಡುವ ಕುರಿತು 12000 ರೈತರನ್ನು ನೊಂದಣಿ ಮಾಡಿದ್ದು, ಅವರಿಗೆ ವಾರಕ್ಕೆ ಎರಡು ಬಾರಿ ಹವಾಮಾನ ಕುರಿತು ಎಸ್‌ಎಂಎಸ್ ಸಂದೇಶ ಕಳುಹಿಸಲಾಗುತ್ತಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News