ಅಸಂಘಟಿತ ಕಾರ್ಮಿಕರ ಬೇಡಿಕೆಗೆ ಸಿಎಂ ಸ್ಪಂದನೆ: ವಿಶ್ವನಾಥ ಶೆಟ್ಟಿ

Update: 2019-10-19 14:11 GMT

ಮಂಗಳೂರು, ಅ.19:ಅಸಂಘಟಿತ ಕಾರ್ಮಿಕರ ವಿವಿಧ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸುವಲ್ಲಿ ಭಾರತೀಯ ಮಜ್ದೂರ್ ಸಂಘ (ಬಿಎಂಎಸ್) ನೇತೃತ್ವದಲ್ಲಿ ಇತ್ತೀಚೆಗೆ ಮುಖ್ಯಮಂತ್ರಿಗಳು ಹಾಗೂ ಇಲಾಖಾ ಅಧಿಕಾರಿಗಳೊಂದಿಗೆ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಪೂರಕವಾಗಿ ಸ್ಪಂದಿಸಿದ್ದು, ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದಾರೆ ಎಂದು ಬಿಎಂಎಸ್ ರಾಜ್ಯಾಧ್ಯಕ್ಷ ಕೆ.ವಿಶ್ವನಾಥ ಶೆಟ್ಟಿ ಹೇಳಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಆಟೋ ರಿಕ್ಷಾ, ಮ್ಯಾಕ್ಸಿಕ್ಯಾಬ್, ಟ್ಯಾಕ್ಷಿ ಚಾಲಕರು ಮತ್ತು ಮಾಲಕರಿಗೆ ಕಟ್ಟಡ ಕಾರ್ಮಿಕ ಮಂಡಳಿಯಂತೆ ಮಂಡಳಿ ರಚಿಸಲು ಮುಖ್ಯಮಂತ್ರಿ ಬಳಿ ಮನವಿ ಮಾಡಿದಾಗ ಸ್ಪಂದಿಸಿದ್ದಾರೆ. ಅದಕ್ಕೆ ಬೇಕಾದ ಹಣ ಕ್ರೋಢೀಕರಣಕ್ಕೆ ಚರ್ಚೆ ನಡೆಸುವಂತೆ ಸಲಹೆ ನೀಡಿದ್ದಾರೆ. ಕಟ್ಟಡ ಕಾರ್ಮಿಕರ 2016ರಿಂದ 2017ರಿಂದ ಬಾಕಿ ಇರುವ ಸುಮಾರು 80 ಸಾವಿರ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡುವಂತೆ ಸಿಎಂ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಕಟ್ಟಡ ಕಾರ್ಮಿಕರ ಆನ್‌ಲೈನ್ ನೋಂದಣಿ ಸರಿಯಾದ ಕ್ರಮವಲ್ಲವೆಂದು ಹಿಂದಿನಂತೆ ನೋಂದಣಿ ಮಾಡಲು ಮನವಿ ಮಾಡಿದಾಗ ಅದಕ್ಕೂ ಸಕಾರಾತ್ಮಕ ಸ್ಪಂದನೆ ದೊರಕಿದೆ. ಒಟಿಪಿ ವ್ಯವಸ್ಥೆಯನ್ನು ರದ್ದು ಪಡಿಸಲು ಸರಕಾರ ಒಪ್ಪಿದೆ ಎಂದು ಹೇಳಿದರು.

ಗೇರುಬೀಜ ಉದ್ಯಮದಲ್ಲಿ ದುಡಿಯುವ ಕಾರ್ಮಿಕರಿಗೆ ಆರೋಗ್ಯ ಸೌಲಭ್ಯ ಮತ್ತು ಅವರ ಮಕ್ಕಳಿಗೆ ವಿದ್ಯಾರ್ಥಿವೇತನ ಸೌಲಭ್ಯಗಳನ್ನು ಒಳಗೊಂಡ ಮಂಡಳಿ ಸ್ಥಾಪಿಸಲು ಒತ್ತಾಯಿಸಲಾಗಿದೆ. ಅದಕ್ಕೂ ಸಿಎಂ ಒಪ್ಪಿಗೆ ಸೂಚಿಸಿದ್ದಾರೆ. ರಾಜ್ಯ ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನದ ನೌಕರರು ಈವರೆಗೆ ಗ್ಯಾಚ್ಯುಟಿ ಕಾನೂನಿನಂದ ಗ್ಯಾಚ್ಯುಟಿ ಪಡೆಯುತ್ತಿದ್ದು, ಇತ್ತೀಚೆಗೆ ರಾಜ್ಯದ ಉಚ್ಚ ನ್ಯಾಯಾಲಯದ ಆದೇಶದಿಂದಾಗಿ ಗ್ಯಾಚ್ಯುಟಿ ಕಾಯ್ದೆಯಿಂದ ವಂಚಿತರಾಗಿದ್ದಾರೆ. ಈ ಸಮಸ್ಯೆಯನ್ನು ಬಗೆಹರಿಸುವ ಭರವಸೆಯೂ ದೊರಕಿದೆ ಎಂದು ಕೆ.ವಿಶ್ವನಾಥ ಶೆಟ್ಟಿ ತಿಳಿಸಿದರು.

ಅಂಗನವಾಡಿ ಕಾರ್ಯಕರ್ತೆಯರಿಗೆ ಹೆಚ್ಚುವರಿಯಾಗಿ ಕೇಂದ್ರ ಸರಕಾರದಿಂದ 1,500 ರೂ. ಮತ್ತು ರಾಜ್ಯ ಸರಕಾರದಿಂದ 500 ರೂ. ಪಾವತಿ ಮಾಡಲು ಕೂಡಲೇ ಸರಕಾರದ ಆದೇಶವನ್ನು ಹೊರಡಿಸಲು ಮತ್ತು ಪ್ರತಿ ತಿಂಗಳು 10ನೇ ತಾರೀಕಿನ ಒಳಗಾಗಿ ವೇತನ ಪಾವತಿಸುವಂತೆ ಮುಖ್ಯಮಂತ್ರಿಯು ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸೂಚಿಸಿದ್ದಾರೆ. ಅಲ್ಲದೆ ನಿವೃತ್ತಿಯ ಸಂದರ್ಭ ಅವರಿಗೆ ನೀಡಲಾಗುತ್ತಿದ್ದ 50 ಸಾವಿರ ರೂ.ವನ್ನು ಹಿಂದಿನ ಸಿದ್ದರಾಮಯ್ಯ ಸರಕಾರ ಮತ್ತು ಸಮ್ಮಿಶ್ರ ಸರಕಾರ ನಿಲ್ಲಿಸಿತ್ತು. ಅದನ್ನು ಮತ್ತೆ ನೀಡುವಂತೆ ಮನವಿ ಮಾಡಲಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಸಿಎಂ ಭರವಸೆ ನೀಡಿದ್ದಾರೆ ಎಂ.ವಿಶ್ವನಾಥ ಶೆಟ್ಟಿ ತಿಳಿಸಿದರು.

ಎನ್‌ಎಚ್‌ಎಂ ಯೂನಿಯನ್‌ನ ಕಾರ್ಯದರ್ಶಿ ರಮೇಶ್ ಮಾತನಾಡಿ ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುವ ಹೊರ ಮತ್ತು ಒಳ ಗುತ್ತಿಗೆ ನೌಕರರ ಸೇವೆಯನ್ನು (ಎನ್‌ಎಚ್‌ಎಂ) ಒಂದು ದಿನ ಬ್ರೇಕ್ ಮಾಡಿ ಮತ್ತೆ ಕೆಲಸಕ್ಕೆ ತೆಗೆದುಕೊಳ್ಳುವ ಪದ್ಧತಿಯನ್ನು ಕೈ ಬಿಡಬೇಕೆಂದು ಸರಕಾರದ ಗಮನ ಸೆಳೆಯಲಾಗಿದೆ. ಸಾಮಾಜಿಕ ಭದ್ರತೆಯಡಿಯಲ್ಲಿ ಈ ಆರೋಗ್ಯ ಇಲಾಖೆಯ ನೌಕರರಿಗೆ ಜೀವವಿಮೆ ಮತ್ತು ಆರೋಗ್ಯ ವಿಮೆ ನೀಡಬೇಕನ್ನುವ ಬೇಡಿಕೆಗೆ ಸ್ಪಂದನೆ ದೊರಕಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬಿಎಂಎಸ್ ವಲಯ ಕಾರ್ಯದರ್ಶಿ ಪುರುಷೋತ್ತಮ ಕೆ.ಎನ್. ಉಪಾಧ್ಯಕ್ಷ ರೋಹಿತಾಶ್ವ, ಜಿಲ್ಲಾ ಕಾರ್ಯದರ್ಶಿ ಗೋಪಾಲ ಕೃಷ್ಣ, ಆಟೋರಿಕ್ಷಾ ಘಟಕದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಶೋಕ್ ಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News