ಅ.26: ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದಲ್ಲಿ ಗೂಡುದೀಪ ಪಂಥ

Update: 2019-10-19 14:27 GMT

ಮಂಗಳೂರು, ಅ.19: ನಮ್ಮ ಕುಡ್ಲ ವಾಹಿನಿ ವತಿಯಿಂದ 20 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಗೂಡುದೀಪ ಪಂಥವು ಅ.26ರಂದು ಸಂಜೆ 4ಕ್ಕೆ ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯಲಿದೆ ಎಂದು ನಮ್ಮ ಕುಡ್ಲ ವಾಹಿನಿಯ ನಿರ್ದೇಶಕ ಹರೀಶ್‌ಬಿ. ಕರ್ಕೇರಾ ಹೇಳಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಾಂಪ್ರದಾಯಿಕ, ಆಧುನಿಕ ಮತ್ತು ವಿಶೇಷ ಮಾದರಿ (ಪ್ರತಿಕೃತಿ-ಮೋಡೆಲ್) ಹೀಗೆ ಮೂರು ವಿಭಾಗಗಳಲ್ಲಿ ಗೂಡುದೀಪ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಪ್ರತಿಯೊಂದು ವಿಭಾಗದಲ್ಲೂ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆಯುವ ಗೂಡುದೀಪಗಳಿಗೆ ಚಿನ್ನದ ಪದಕ ಹಾಗೂ ತೃತೀಯ ಸ್ಥಾನ ಪಡೆಯುವ ಗೂಡುದೀಪಗಳಿಗೆ ಬೆಳ್ಳಿಯ ಪದಕ 100ಕ್ಕಿಂತಲೂ ಹೆಚ್ಚು ಬಹುಮಾನ ಸೇರಿದ ಅತೀ ಹೆಚ್ಚು ಗೂಡುದೀಪ ತರುವ ಸಂಸ್ಥೆಗಳಿಗೆ ವಿಶೇಷ ಬಹುಮಾನಗಳಲ್ಲದೆ ತೀರ್ಪುಗಾರರ ಮೆಚ್ಚುಗೆ ಪಡೆದ ಆಯ್ದ ಗೂಡುದೀಪಗಳಿಗೆ ಪ್ರೋತ್ಸಾಹಕ ಬಹುಮಾನಗಳನ್ನು ನೀಡಲಾಗುತ್ತದೆ. ಭಾಗವಹಿಸಿದ ಎಲ್ಲಾ ಸ್ಪರ್ಧೆಗಳಿಗೂ ಸ್ಮರಣಿಕೆ, ಸಿಹಿ ತಿಂಡಿಯ ಪೊಟ್ಟಣ ಹಾಗೂ ಕ್ಷೇತ್ರದ ಪ್ರಸಾದವನ್ನು ವಿತರಿಸಲಾಗುತ್ತದೆ ಎಂದರು.

ಈ ಸಂದರ್ಭ ಕರ್ಣಾಟಕ ಬ್ಯಾಂಕ್ ಇದರ ಆಡಳಿತ ನಿರ್ದೇಶಕ ಎಂ.ಎಸ್. ಮಹಾಬಲೇಶ್ವರ ಅವರಿಗೆ ‘ನಮ್ಮ ಕುಡ್ಲ ಪ್ರಶಸ್ತಿ’, ಲಕುಮಿ ತಂಡದ ಮುಖ್ಯಸ್ಥ ಲಯನ್ ಕಿಶೋರ್ ಡಿ. ಶೆಟ್ಟಿ ಅವರಿಗೆ ‘ನಮ್ಮ ತುಳುವೆರ್ ಪ್ರಶಸ್ತಿ, ದೇಶದ ರಕ್ಷಣಾ ಕಾರ್ಯದಲ್ಲಿ ಉತ್ತರಖಾಂಡದಲ್ಲಿ ಸೇನಾ ಕರ್ತವ್ಯದಲ್ಲಿರುವ ಪುತ್ತೂರು ಪಡ್ನೂರಿನ ನೆಲಪ್ಪಾಲ್ ಮನೆಯ ಎನ್. ಅಶೋಕ್ ಅವರಿಗೆ ‘ನಮ್ಮ ಕುಡ್ಲ ಸಾಧಕ ಪ್ರಶಸ್ತಿ’, ಕ್ರೀಡಾ ಲೇಖಕ ಜಗದೀಶ್ಚಂದ್ರ ಸೂಟರ್‌ಪೇಟೆ ಮತ್ತು ಅಂತಾರಾಷ್ಟ್ರೀಯ ಕ್ರೀಡಾಪಟು ರಿತ್ವಿಕ್ ಅಲೆವೂರಾಯರಿಗೆ ನಮ್ಮ ಕುಡ್ಲ ಸಾಧನಾ ಪ್ರಶಸ್ತಿಯನ್ನು ನೀಡಲಾಗುತ್ತದೆ ಎಂದರು.

ಗೂಡುದೀಪ ಸ್ಪರ್ಧೆಯ ಅಂಗವಾಗಿ ಕುದ್ರೋಳಿ ಕ್ಷೇತ್ರದಲ್ಲಿ ಉದ್ಘಾಟನೆ ಮತ್ತು ಸಮಾರೋಪ ಸಮಾರಂಭದಲ್ಲಿ ಜಿಲ್ಲೆಯ ಅನೇಕ ಗಣ್ಯರು ಅತಿಥಿಗಳಾಗಿ ಪಾಲ್ಗೊಳ್ಳುವರು. ಸಂಜೆ 5:30ರಿಂದ ರಾತ್ರಿ 8ರವರೆಗೆ ಜಿಲ್ಲೆಯ ಖ್ಯಾತ ಕಲಾವಿದರಿಂದ ನೃತ್ಯ, ಸಂಗೀತ ವೈವಿಧ್ಯಮಯ ಕಾರ್ಯಕ್ರಮಗಳು ಗೂಡುದೀಪ ವೀಕ್ಷಣೆಗೆ ಬರುವ ಆಸಕ್ತರಿಗೆ ಮುದ ನೀಡಲಿವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕದ್ರಿ ನವನೀತ ಶೆಟ್ಟಿ, ಪ್ರೊ. ಎಂ.ಎಸ್. ಕೋಟ್ಯಾನ್, ದಯಾನಂದ ಕಟೀಲು ಹಾಗೂ ಲೀಲಾಕ್ಷ ಬಿ ಕರ್ಕೆರಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News