ಭಾಷಾ ಅಕಾಡಮಿಗಳ ಸದಸ್ಯರಿಂದ ‘ರಾಜೀನಾಮೆ’ ಪರ್ವ ಅರಂಭ

Update: 2019-10-20 12:31 GMT

ಮಂಗಳೂರು, ಅ.20: ರಾಜ್ಯದ 16 ಅಕಾಡಮಿಗಳು ಮತ್ತು ಪ್ರಾಧಿಕಾರಕ್ಕೆ ಇತ್ತೀಚೆಗೆ ಸರಕಾರ ನೇಮಕ ಮಾಡಿದ ಬೆನ್ನಿಗೆ ಸೃಷ್ಟಿಯಾದ ವಿವಾದವು ಇದೀಗ ‘ಸದಸ್ಯ’ರ ರಾಜೀನಾಮೆಗೆ ನಾಂದಿ ಹಾಡಿದೆ.

ಅದರಲ್ಲೂ ಭಾಷಾ ಅಕಾಡಮಿಗಳ ಪೈಕಿ ಬ್ಯಾರಿ ಮತ್ತು ತುಳು ಅಕಾಡಮಿ ಐವರು ಸದಸ್ಯರು ‘ರಾಜೀನಾಮೆ’ಯ ಪರ್ವಕ್ಕೆ ಚಾಲನೆ ಕೊಟ್ಟಿದ್ದಾರೆ. ಬ್ಯಾರಿ ಸಾಹಿತ್ಯ ಅಕಾಡಮಿಯ ಸದಸ್ಯರಾಗಿ ನೇಮಕಗೊಂಡಿದ್ದ ಮುನೀರ್ ಬಾವಾ, ಫಝಲ್ ಅಸೈಗೋಳಿ, ಸಿರಾಜ್ ಮುಡಿಪು ರಾಜೀನಾಮೆ ಸಲ್ಲಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಸಾಹಿತಿ, ಕಲಾವಿದರೇ ಅಲ್ಲದ ನಮಗೆ ಅಕಾಡಮಿಯ ಸದಸ್ಯತ್ವ ಅಗತ್ಯವಿಲ್ಲ ಎಂದಿದ್ದಾರೆ. ಫಝಲ್ ಅಸೈಗೋಳಿಯು ಈ ಹಿಂದೆ ಬಿಜೆಪಿ ಸರಕಾರವಿದ್ದಾಗ ಸದಸ್ಯರಾಗಿ ನೇಮಕಗೊಂಡಿದ್ದರು. ಆವಾಗಲೂ ಅವರು ಸದಸ್ಯ ಸ್ಥಾನವನ್ನು ತಿರಸ್ಕರಿಸಿದ್ದರು. 

ತುಳು ಅಕಾಡಮಿಗೆ ಡಾ. ವೈ.ಎನ್.ಶೆಟ್ಟಿ ಹಾಗೂ ಡಾ. ಸಾಯಿಗೀತಾ ಹೆಗ್ಡೆ ರಾಜೀನಾಮೆ ಸಲ್ಲಿಸಿದ್ದಾರೆ. ಡಾ. ವೈ.ಎನ್.ಶೆಟ್ಟಿ ಈ ಹಿಂದೆ ಸದಸ್ಯರಾಗಿದ್ದರು. ಎರಡನೆ ಬಾರಿಗೆ ಸದಸ್ಯನಾಗಿ ಇತರ ಅರ್ಹರ ಅವಕಾಶಕ್ಕೆ ಅಡ್ಡಿಯಾಗಲಾರೆ ಎಂದು ಹೇಳಿಕೊಂಡಿದ್ದಾರೆ. ಸಾಯಿಗೀತಾ ಹೆಗ್ಡೆಯವರು ನಿಟ್ಟೆ ವಿವಿ ವಹಿಸಿಕೊಟ್ಟ ಜ್ಞಾತಿ ಪದಕೋಶ ಕಾರ್ಯದಲ್ಲಿ ತೊಡಗಿಸಿಕೊಂಡ ಕಾರಣ ಸಮಯದ ಕೊರತೆಯನ್ನು ಮನಗಂಡು ಸದಸ್ಯತ್ವ ಒಪ್ಪಿಕೊಳ್ಳಲು ಅಸಾಧ್ಯ ಎಂದಿದ್ದಾರೆ. ರಾಜೀನಾಮೆ ಪರ್ವದ ನಡುವೆ ತುಳು ಅಕಾಡಮಿಗೆ ಬೆಂಗಳೂರಿನ ಕಾಂತಿ ಶೆಟ್ಟಿ ಅವರನ್ನು ಸದಸ್ಯರನ್ನಾಗಿ ನೇಮಕಗೊಳಿಸಲಾಗಿದೆ.

ಇನ್ನು ಕೊಂಕಣಿ ಅಕಾಡಮಿಯಲ್ಲೂ ಕೂಡ ಕ್ರೈಸ್ತ ಕೊಂಕಣಿಗರಿಗೆ ಸ್ಥಾನ ನೀಡಿಲ್ಲ ಎಂಬ ಅಸಮಾಧಾನ ವ್ಯಕ್ತವಾಗಿದೆ. ಕೆಪಿಸಿಸಿ ವಕ್ತಾರರೂ ಆಗಿರುವ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಎರಡು ವಾರದೊಳಗೆ ಕ್ರೈಸ್ತ ಕೊಂಕಣಿ ಸಾಹಿತಿ-ಕಲಾವಿದರಿಗೆ ಸ್ಥಾನ ಕಲ್ಪಿಸದಿದ್ದರೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.

ಬ್ಯಾರಿ ಅಕಾಡಮಿಗೆ ಇಬ್ಬರು ಮಹಿಳೆಯರ ಸಹಿತ ನಾಲ್ಕು ಮಂದಿ ಬ್ಯಾರಿಯೇತರ ಸಮುದಾಯದವರನ್ನು ನೇಮಿಸಿದ ಬಗ್ಗೆಯೂ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಅಪಸ್ವರ ವ್ಯಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News