ಮಂಗಳೂರು: ಇನ್‌ಸ್ಪೆಕ್ಟರ್ ಸುನಿಲ್ ನಾಯಕ್ ಬೆಂಗಳೂರಿಗೆ ವರ್ಗಾವಣೆ

Update: 2019-10-20 14:21 GMT

ಮಂಗಳೂರು: ವಿವಿಧ ಕೊಲೆ, ಸುಲಿಗೆ, ದರೋಡೆ ಪ್ರಕರಣಗಳನ್ನು ಬೇಧಿಸಿ ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಪಾತ್ರರಾಗಿರುವ ದ.ಕ.ಜಿಲ್ಲಾ ಅಪರಾಧ ಪತ್ತೆದಳ(ಡಿಸಿಐಬಿ) ಇನ್‌ಸ್ಪೆಕ್ಟರ್ ಸುನಿಲ್ ವೈ.ನಾಯಕ್ ಅವರು ಬೆಂಗಳೂರಿಗೆ ವರ್ಗಾವಣೆಗೊಂಡಿದ್ದಾರೆ.

ಅವರಿಂದ ತೆರವಾಗುವ ಸ್ಥಾನಕ್ಕೆ ಯಾರನ್ನೂ ನೇಮಿಸಿಲ್ಲ. ಆದರೂ ಇವರ ಸ್ಥಾನಕ್ಕೆ ಕುಂದಾಪುರ ಸರ್ಕಲ್ ಇನ್‌ಸ್ಪೆಕ್ಟರ್ ಮಂಜಪ್ಪ ಅವರ ಹೆಸರು ಅಂತಿಮಗೊಂಡಿದೆ ಎಂದು ಹೇಳಲಾಗಿದೆ. ಸುನಿಲ್ ನಾಯಕ್ ಅವರು ಬೆಂಗಳೂರು ಶ್ರೀರಾಮಪುರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಆಗಿ ವರ್ಗಾವಣೆಗೊಂಡಿದ್ದಾರೆ.

ಕರಾವಳಿಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಸುಮಾರು 15 ವರ್ಷಗಳಿಂದ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಪುತ್ತೂರು ಗ್ರಾಮಾಂತರದ ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರೊಬೆಷನರಿ ಎಸ್‌ಐ ಆಗಿ ಕರ್ತವ್ಯಕ್ಕೆ ಸೇರ್ಪಡೆಯಾದ ಸುನಿಲ್ ನಾಯಕ್, ಬಳಿಕ ಎಸ್ಸೈಯಾಗಿ ಶೃಂಗೇರಿ, ಮಂಗಳೂರಿನ ಕಂಕನಾಡಿ, ಬಳ್ಳಾರಿಯ ಹೂವಿನಹಡಗಲಿ, ದಾವಣಗೆರೆಯ ಜಗಳೂರು ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು.

ಕಾರ್ಕಳ ನಕ್ಸಲ್ ನಿಗ್ರಹ ಪಡೆಯ ಎಸ್‌ಐ ಆಗಿದ್ದರು. ನಂತರ ಕರಾವಳಿ ಕಾವಲು ಪಡೆ, ಬ್ರಹ್ಮಾವರಗಳಲ್ಲಿ ಕಾರ್ಯನಿರ್ವಹಿಸಿ ಮಂಗಳೂರಿನ ನಾಗರಿಕ ಜಾರಿ ಹಕ್ಕು ನಿರ್ದೇಶನಾಲಯದಲ್ಲಿ ಇದ್ದರು. ವಿಜಯಪುರದ ಬಸವನಬಾಗೇವಾಡಿ ಹಾಗೂ ಕಾಪುವಿನಲ್ಲಿ ಸರ್ಕಲ್ ಇನ್‌ಸ್ಪೆಕ್ಟರ್‌ರಾಗಿ ಭಡ್ತಿಗೊಂಡು ಕೆಲಸ ಮಾಡಿದ್ದರು.

ಬಳಿಕ ಮಂಗಳೂರು ನಗರ ಅಪರಾಧ ಪತ್ತೆದಳ(ಸಿಸಿಬಿ) ಇನ್‌ಸ್ಪೆಕ್ಟರ್‌ರಾಗಿ ಸಫ್ವಾನ್ ಕೊಲೆ ಪ್ರಕರಣ, ಕಾಲಿಯಾ ರಫೀಕ್ ಶೂಟೌಟ್ ಸೇರಿದಂತೆ ದರೋಡೆ, ಸುಲಿಗೆ ಪ್ರಕರಣಗಳನ್ನು ಮಟ್ಟಹಾಕುವಲ್ಲಿ ಯಶಸ್ವಿಯಾಗಿದ್ದರು. ಭೂಗತ ಜಗತ್ತಿನ ಪ್ರಕರಣಗಳನ್ನೂ ಬೇಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಮಾದಕದ್ರವ್ಯ ಪಿಡುಗು ಜಾಲದ ವಿರುದ್ಧ ಯಶಸ್ವಿ ಕಾರ್ಯಾಚರಣೆ ನಡೆಸುವಲ್ಲಿ ವಿಶೇಷ ಮುತುವರ್ಜಿ ವಹಿಸಿದ್ದರು.
ಪೊಲೀಸ್ ಇಲಾಖೆಯಲ್ಲಿ ಇವರ ಸಾಧನೆಗೆ 2017ರಲ್ಲಿ ಮುಖ್ಯಮಂತ್ರಿ ಪದಕ ಘೋಷಣೆಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News