ಕಲಾಕೃತಿಗಳ ಮೂಲಕ ಸಮಾಜದಲ್ಲಿ ಉನ್ನತ ಚಿಂತನೆ ಬೆಳೆಸಲು ಸಾಧ್ಯ: ಡಾ.ಪಿ.ವಿ.ಭಂಡಾರಿ

Update: 2019-10-20 15:36 GMT

ಉಡುಪಿ, ಅ.20: ಕಲಾವಿದರು ತಮ್ಮ ಕಲಾಕೃತಿಗಳ ಮೂಲಕ ಸಮಾಜದಲ್ಲಿ ಉನ್ನತ ಚಿಂತನೆಗಳನ್ನು ಬೆಳೆಸಿ ಅನೇಕ ಸಮಾಜಮುಖಿ ಕಾರ್ಯಕ್ರಮಗಳ ಆಯೋಜನೆಯಾಗುವಂತೆ ಪ್ರೇರೇಪಿಸುತ್ತಾರೆ ಎಂದು ಮಾನಸಿಕ ತಜ್ಞ ಡಾ.ಪಿ. ವಿ.ಭಂಡಾರಿ ಹೇಳಿದ್ದಾರೆ.
ಮಣಿಪಾಲ ಸರಳಬೆಟ್ಟುವಿನ ಹೊಸ ಬೆಳಕು ಆಶ್ರಯದಲ್ಲಿ ಆವೆ ಮಣ್ಣಿನ ಕಲಾಕೃತಿ ರಚನೆಯ ತರಬೇತಿ ಶಿಬಿರ ಮಣ್ಣಿನ ಆಟವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಸಂಘ ಸಂಸ್ಥೆಗಳು ಸಾಮಾಜಿಕ ಸೇವೆಯಲ್ಲಿ ತೊಡಗಿಕೊಳ್ಳುವುದು ಸಾಮಾನ್ಯ ಮತ್ತು ತಮ್ಮ ಅಸಿತಿತ್ವವನ್ನು ಉಳಿಸಿಕೊಳ್ಳಲು ಅದು ಅನಿವಾರ್ಯವಾಗಿರುತ್ತದೆ. ಆದರೆ ಕಲಾವಿದರು ಮಾಡುತ್ತಿರುವ ಸಾಮಾಜಿಕ ಸೇವೆ ಅತ್ಯಂತ ನಿಸ್ವಾರ್ಥ ಮತ್ತು ಅಮೂಲ್ಯವಾಗಿದ್ದು ಅವರ ಈ ಚಟುವಟಿಕೆಗಳಿಂದ ಸಾಕಷ್ಟು ಪ್ರತಿಭೆ ಗಳನ್ನು ಬೆಳಕಿಗೆ ಚೆಲ್ಲುವ ಕೆಲಸಗಳಾಗುತ್ತದೆ ಎಂದರು.

ಮುಖ್ಯ ಅತಿಥಿಯಾಗಿ ಉಡುಪಿ ಆರ್ಟಿಸ್ಟ್ ಫಾರಂನ ಸಂಚಾಲಕ ರಮೇಶ್ ರಾವ್ ಮಾತನಾಡಿ, ಕಲಾವಿದರು ತಮ್ಮ ಪ್ರತಿಭೆಗಳನ್ನು ಸಾಮಾಜಿಕ ಕಳಕಳಿಯ ಚಟುವಟಿಕೆಗಳಲ್ಲಿ ಉಪಯೋಗಿಸಿ ಕೊಂಡಾಗ ಅವರು ಕಲಿತ ವಿದ್ಯೆಗೆ ನ್ಯಾಯ ಒದಗಿಸಿದಂತಾಗುತ್ತದೆ ಮತ್ತು ಅದರಲ್ಲಿ ಅವರು ಸಾರ್ಥಕ ಮನೋಭಾವವನ್ನು ಕಾಣಬಹುದು ಎಂದು ಅಭಿಪ್ರಾಯ ಪಟ್ಟರು.

ಸ್ಯಾಂಡ್ ಹಾರ್ಟ್ ಕಲಾವಿದರಾದ ವೆಂಕಿ ಪಲಿಮಾರು, ಶ್ರೀನಾಥ್ ಮಣಿಪಾಲ ಮತ್ತು ರವಿ ಹಿರೇಬೆಟ್ಟು ಅವರ ವಿಶಿಷ್ಟ ಮಣ್ಣಿನ ಕಲಾಕೃತಿಯನ್ನು ಅನಾವರಣಗೊಳಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಜಗತ್ತಿನಲ್ಲಿ ಇಂದು ಹೇರಳವಾಗಿ ಪೋಲಾಗುತ್ತಿರುವ ಆಹಾರವನ್ನು ತಡೆಯುವ ಸಂದೇಶವನ್ನು ಸಾರುವ ಈ ಕಲಾಕೃತಿ ಎಲ್ಲರ ಗಮನ ಸೆಳೆಯಿತು.

ಹೊಸಬೆಳಕು ಸಂಸ್ಥೆಯ ಪೋಷಕ ಮಹೇಶ್ ಠಾಕೂರ್, ಮಾನಸಿಕ ವೈದ್ಯ ಡಾ.ವಿರೂಪಾಕ್ಷ ದೇವರಮನೆ, ಕಾರ್ಪೊರೇಷನ್ ಬ್ಯಾಂಕ್ ಮಂಗಳೂರಿನ ಸಿಬ್ಬಂದಿ ತರಬೇತುದಾರ ಕನಕರಾಜ್, ನಗರಸಭಾ ಸದಸ್ಯೆ ವಿಜಯಲಕ್ಷ್ಮಿ, ಕಲಾವಿದರಾದ ವೆಂಕಿ ಪಲಿಮಾರು, ಶ್ರೀನಾಥ್ ಮಣಿಪಾಲ, ರವಿ ಹಿರೇಬೆಟ್ಟು ಉಪಸ್ಥಿತರಿದ್ದರು. ಸಂಸ್ಥೆಯ ನಿರ್ವಾಹಕರಾದ ತನುಲಾ ತರುಣ್ ವಂದಿಸಿದರು. ವಿನಯ ಚಂದ್ರ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News