ಕುಂದಾಪುರ ಅಂಚೆ ಕಚೇರಿಯ ಆಧಾರ್ ಅದಾಲತ್‌ನಲ್ಲಿ ನೂಕುನುಗ್ಗಲು

Update: 2019-10-20 16:42 GMT

ಕುಂದಾಪುರ, ಅ.20: ಭಾರತೀಯ ಅಂಚೆ ಇಲಾಖೆಯ ಉಡುಪಿ ಅಂಚೆ ವಿಭಾಗವು ಕುಂದಾಪುರ ಪ್ರಧಾನ ಅಂಚೆ ಕಚೇರಿಯಲ್ಲಿ ರವಿವಾರ ಸಾರ್ವಜನಿಕರ ಅನುಕೂಲಕ್ಕಾಗಿ ಏರ್ಪಡಿಸಲಾಗಿದ್ದ ಆಧಾರ್ ಅದಾಲತ್‌ಗೆ ಸಾವಿರಾರು ಸಂಖ್ಯೆಯಲ್ಲಿ ಜನ ಆಗಮಿಸಿದ ಪರಿಣಾಮ ನೂಕುನುಗ್ಗಲು ಉಂಟಾಗಿದ್ದು, ಇದರಿಂದ ಬಹುತೇಕ ಮಂದಿ ಅವಕಾಶ ಸಿಗದೆ ನಿರಾಶೆಯಿಂದ ವಾಪಾಸ್ಸು ಹೋಗಿರುವ ಬಗ್ಗೆ ವರದಿಯಾಗಿದೆ,.

ಆಧಾರ್ ತಿದ್ದುಪಡಿ, ಹೊಸ ಆಧಾರ್ ಮಾಡಿಸಲು ಸಾರ್ವಜನಿಕರಿಗೆ ಅನು ಕೂಲವಾಗುವ ನಿಟ್ಟಿನಲ್ಲಿ ರಜೆಯ ದಿನವಾಗಿರುವ ರವಿವಾರ ಕುಂದಾಪುರ ಅಂಚೆ ಕಚೇರಿಯಲ್ಲಿ ಈ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಅದಕ್ಕಾಗಿ ಸಮೀಪದ ಇತರ ಅಂಚೆ ಕಚೇರಿಗಳಿಂದ ಆರು ಕಂಪ್ಯೂಟರ್‌ಗಳನ್ನು ತಂದು ಆಳವಡಿಸಲಾಗಿತ್ತು. ಹೀಗೆ ಇದರಲ್ಲಿ ಸುಮಾರು 15 ಮಂದಿ ಸಿಬ್ಬಂದಿ ತೊಡಗಿಸಿಕೊಂಡಿದ್ದರು.

ಸಾಮಾನ್ಯವಾಗಿ ಒಂದು ದಿನದಲ್ಲಿ 50 ಮಂದಿಗೆ ಆಧಾರ್ ಪ್ರಕ್ರಿಯೆ ನಡೆಸುವ ಅಂಚೆ ಕಚೇರಿ, ಅದರಂತೆ ಇಂದು ವಿಶೇಷ ದಿನವಾಗಿ 250ರಿಂದ 300 ಮಂದಿಗೆ ಆಧಾರ ಪ್ರಕ್ರಿಯೆ ನಡೆಸಲು ವ್ಯವಸ್ಥೆ ಮಾಡಿಕೊಂಡಿತ್ತು. ಮಾಹಿತಿ ತಿಳಿದು ಕುಂದಾಪುರ ಹಾಗೂ ಬೈಂದೂರು ತಾಲೂಕಿನ ವಿವಿಧ ಗ್ರಾಮಗಳ ನೂರಾರು ಸಂಖ್ಯೆಯ ಜನ ಬೆಳಗಿನ ಜಾವವೇ ಕುಂದಾಪುರದ ಚಿಕ್ಕನ್ ಸಾಲ್ ರಸ್ತೆಯಲ್ಲಿರುವ ಅಂಚೆ ಕಚೇರಿಯ ಮುಂದೆ ಜಮಾಯಿಸಿದ್ದರು.

ಬೆಳಗ್ಗೆ 8.30ರ ಸುಮಾರಿಗೆ ಟೋಕನ್ ನೀಡಲು ಆರಂಭಿಸಲಾಯಿತು. ಆ ವೇಳೆ ಕಚೇರಿ ಮುಂದೆ ಜಮಾಯಿಸಿದವರ ಸಂಖ್ಯೆ ಸಾವಿರ ಮೀರಿತ್ತು. ಇದರಿಂದ ಟೋಕನ್ ಪಡೆಯಲು ಸಾರ್ವಜನಿಕರಿಂದ ನೂಕುನುಗ್ಗಲು ಉಂಟಾಯಿತು. ಈ ಸಂದರ್ಭ ಉಂಟಾದ ಗೊಂದಲದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಪೊಲೀಸರು ಆಗಮಿಸಿ, ಜನರನ್ನುನಿಯಂತ್ರಿಸಲು ಹರಸಾಹಸ ಪಟ್ಟರು.

ಒಂದು ಕಿ.ಮೀ. ಉದ್ದದಲ್ಲಿ ಜನ ಸರತಿ ಸಾಲಿನಲ್ಲಿ ಟೋಕನ್ ಪಡೆದು ಕೊಂಡರು. 500 ಮಂದಿಯಷ್ಟೆ ಟೋಕನ್ ನೀಡಲಾಯಿತು. ಉಳಿದವರನ್ನು ಆವರಣದಿಂದ ಹೊರಗೆ ಕಳುಹಿಸಲಾಯಿತು. ಈ ವೇಳೆ ಪೊಲೀಸರು ಹಾಗೂ ಸಾರ್ವಜನಿಕರ ಮಧ್ಯೆ ಮಾತಿನ ಚಕಮಕಿ ಉಂಟಾಯಿತು. ಈ ಮಧ್ಯೆ ಬೆಳಗ್ಗೆ 9ಗಂಟೆಗೆ ಆರಂಭಗೊಂಡ ಆಧಾರ್ ಪ್ರಕ್ರಿಯೆ ಸಂಜೆ ಐದು ಗಂಟೆಗೆ ಸಮಾಪ್ತಿ ಗೊಂಡಿತು. ಈ ಸಮಯದಲ್ಲಿ ಒಟ್ಟು 427 ಮಂದಿಗೆ ಆಧಾರ್ ತಿದ್ದುಪಡಿ, ಹೊಸ ಆಧಾರ್ ಕಾರ್ಡ್‌ಗಳನ್ನು ನಡೆಸಲಾಯಿತು.

ಟೋಕನ್ ಸಿಗದೆ ಅವಕಾಶ ವಂಚಿತರಾದ ಬಹುತೇಕ ಮಂದಿ ವಾಪಾಸ್ಸಾದರು. ದೂರದ ಗ್ರಾಮಗಳಿಂದ ಆಗಮಿಸಿದ ಜನ ಹಿಡಿಶಾಪ ಹಾಕಿದರು. ಜನ ಪ್ರತಿನಿಧಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಯಿತು. ಅನೇಕರು ದಾಖಲೆಗಳ ಮೂಲಪ್ರತಿಯನ್ನು ತರದ ಕಾರಣ ಸಮಸ್ಯೆ ಉಂಟಾಯಿತು.

ಆಧಾರ್ ತಿದ್ದುಪಡಿಗಾಗಿ ದೂರ ಊರಿನಿಂದ ಬೆಳಗ್ಗೆ 8ಗಂಟೆಗೆ ಅಂಚೆ ಕಚೇರಿಗೆ ಬಂದರೂ ಅವಕಾಶ ಸಿಗಲಿಲ್ಲ. ಸಾವಿರಾರು ಮಂದಿಯ ಮಧ್ಯೆ ಕಾದು ಸುಸ್ತಾಗಿ ಯಾವುದೇ ಕೆಲಸ ಆಗದೆ ಮನೆಗೆ ಮರಳಬೇಕಾಯಿತು. ಇದಕ್ಕೆಲ್ಲ ಅವ್ಯವಸ್ಥೆಯೇ ಕಾರಣ. ಜನಪ್ರತಿನಿಧಿಗಳು ಈ ಬಗ್ಗೆ ಮೌನವಾಗಿದ್ದಾರೆ. ಆಧಾರ್ ಸಂಬಂಧಿಸಿ ಸಾವಿರಾರು ಮಂದಿಗೆ ಸಮಸ್ಯೆ ಇರುವುದು ಇಂದು ಗೊತ್ತಾಗಿದೆ. ಅದಕ್ಕೆ ಬೇಕಾದ ವ್ಯವಸ್ಥೆುನ್ನು ಆದಷ್ಟು ಬೇಗ ಮಾಡಬೇಕು.
-ಅಣ್ಣಪ್ಪ ಮೆಂಡನ್ ವಡೇರಹೋಬಳಿ

ಆಧಾರ್ ಅದಾಲತ್ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಪ್ರಚಾರ ಕಾರ್ಯ ನಡೆದ ಪರಿಣಾಮ ಸಾವಿರ ಸಂಖ್ಯೆಯಲ್ಲಿ ಜನ ಆಗಮಿಸಿ ದ್ದರು. ಇದರಿಂದ ನೂಕುನುಗ್ಗಲು ಉಂಟಾಗಿ ಕೆಲಕಾಲ ಗೊಂದಲಕ್ಕೆ ಕಾರಣ ವಾಯಿತು. ಆದರೂ 500 ಮಂದಿಗೆ ಟೋಕನ್ ನೀಡಿ, ಅದರಲ್ಲಿ 427 ಮಂದಿಯ ಆಧಾರ್ ತಿದ್ದುಪಡಿ, ಹೊಸ ಕಾರ್ಡ್ ಮಾಡಲಾಯಿತು. ಉಳಿದಂತೆ ಮಕ್ಕಳು ಹಾಗೂ ಹಿರಿಯರಿಗೆ ಬೇರೆ ಸಮಯ ನೀಡಲಾಗಿದೆ.

-ಸುಧಾಕರ್ ದೇವಾಡಿಗ, ಅಂಚೆ ಅಧೀಕ್ಷಕರು, ಉಡುಪಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News