ಉಪಚುನಾವಣೆಯಲ್ಲೂ ಬಿಜೆಪಿಗೆ ಯಶಸ್ಸು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್

Update: 2019-10-20 17:07 GMT

ಮೂಡುಬಿದಿರೆ: ರಾಜ್ಯದಲ್ಲಿ ಮುಂಬರುವ ಉಪ ಚುನಾವಣೆಯಲ್ಲಿ ಎಲ್ಲ 15 ಸ್ಥಾನಗಳನ್ನೂ ಬಿಜೆಪಿ ಗೆಲ್ಲಲಿದೆ. ಮುಂದಿನ ಮೂರು ವರ್ಷಗಳಲ್ಲಿ ಯಡಿಯೂರಪ್ಪ ಸರಕಾರಕ್ಕೆ ಯಾವುದೇ ಆತಂಕವಿಲ್ಲ. ಆ ಬಳಿಕದ ಚುನಾವಣೆಯಲ್ಲೂ ಯಡಿಯೂರಪ್ಪ ಅವರ ಜತೆ ಸಂಘಟನಾ ಕಾರ್ಯದಲ್ಲಿ ತೊಡಗಿಕೊಂಡು ಬಿಜೆಪಿ 150 ಕ್ಕೂ ಮಿಕ್ಕಿದ ಸ್ಥಾನಗಳೊಂದಿಗೆ ಸ್ಪಷ್ಟ ಬಹುಮತದೊಂದಿಗೆ ರಾಜ್ಯದಲ್ಲಿ ಬೆಳಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ  ನಳಿನ್ ಕುಮಾರ್ ಕಟೀಲ್ ಹೇಳಿದರು.  

ಮೂಲ್ಕಿ ಮೂಡುಬಿದಿರೆ ಬಿಜೆಪಿ ಮಂಡಲದ ವತಿಯಿಂದ ತನಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರಿಗೆ ನಡೆದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು. ಪಕ್ಷಾಧ್ಯಕ್ಷನಾಗಿ ರಾಜ್ಯ ಪ್ರವಾಸ ಪೂರ್ಣಗೊಳಿಸಿದಾಗ ರಾಜ್ಯದಲ್ಲಿ ಸಂಘಟನಾಶಕ್ತಿ ಬೆಳೆದಿರುವುದು ಪ್ರಧಾನಿ ಮೋದಿಯವರ ಮೇಲಿನ ನಂಬಿಕೆ, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲಿನ ವಿಶ್ವಾಸವನ್ನು ಕಂಡಿದ್ದೇನೆ. ಹುಟ್ಟೂರಿನಲ್ಲಿ ದೊರೆತ ಪ್ರೀತಿಯ ಗೌರವ ಸ್ಮರಣೀಯ ಎಂದ ಅವರು ರಾಜ್ಯದಲ್ಲಿ ಯಡಿಯೂರಪ್ಪ ಕಾಮಧೇನುವಾದರೆ ಜಿಲ್ಲೆಗೆ ಕೋಟ ಶ್ರೀನಿವಾಸ ಪೂಜಾರಿ ಕಲ್ಪವೃಕ್ಷದಂತೆ ಅಭಿವೃದ್ಧಿಗೆ ಕೊಡುಗೆ ಸಲ್ಲಿಸಲಿ ಎಂದು ಹಾರೈಸಿದರು. 

ಮುಜರಾಯಿ ಇಲಾಖೆಯಡಿ ದೇವಾಲಯಗಳ ಹುಂಡಿಹಣ ಅಪವ್ಯಯವಾಗಲು ಬಿಡುವುದಿಲ್ಲ. ಈ ಬಾರಿ ಸಾವಿರಕ್ಕೂ ಮಿಕ್ಕಿದ ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮದ ಮೂಲಕ ಇಲಾಖೆಯ ಮೂಲಕ ಜನತೆಯ ಕಲ್ಯಾಣದ ಕಾರ್ಯಕ್ರಮದ ಚಿಂತನೆ ನಡೆದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಹೋರಾಟದ ಹಾದಿಯಲ್ಲಿ ಪಕ್ಷ ಅಧಿಕಾರಕ್ಕೇರಿದೆ. ಕಾಶ್ಮೀರ ಸಮಸ್ಯೆಯಂತಹ ಜಟಿಲ ವಿಷಯಗಳೂ ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ಬಗೆಹರಿದಿರುವಾಗ ಸಮಾನ ನಾಗರಿಕ ಸಂಹಿತೆ, ಅಯೋಧ್ಯೆ ವಿವಾದವೂ ಕೊನೆಗಾಣುವ ದಿನಗಳು ದೂರವಿಲ್ಲ ಎಂದವರು ಅಭಿಪ್ರಾಯಪಟ್ಟರು. 

ಅಭಿನಂದನಾ ಮಾತುಗಳನ್ನಾಡಿದ ಪಕ್ಷದ ಜಿಲ್ಲಾಧ್ಯಕ್ಷ , ಪುತ್ತೂರಿನ ಶಾಸಕ ಸಂಜೀವ ಮಠಂದೂರು  ಬಿಜೆಪಿಯಿಂದು ಸರ್ವಸ್ಪರ್ಶಿಯಾಗಿ, ಸರ್ವವ್ಯಾಪಿಯಾಗಿ ಬೆಳೆಯಲು ಕಾರ್ಯಕರ್ತರ ಪರಿಶ್ರಮವೇ ಕಾರಣ ಎಂದರು. ಸಂಘವೆಂಬ ಗುರು ರಾಷ್ಟ್ರೋತ್ಥಾನ ಎಂಬ ಗುರಿ, ಬದ್ದತೆಯೊಂದಿಗೆ ನಳಿನ್, ಕೋಟ ಇಬ್ಬರೂ ಯಶಸ್ಸು ಕಂಡಿದ್ದಾರೆ ಎಂದರು. ಗಣ್ಯರ ಜತೆಗೆ ನಳಿನ್ ಹಾಗೂ ಶ್ರೀನಿವಾಸ ಪೂಜಾರಿಯವರನ್ನು ಮಂಡಳದ ವತಿಯಿಂದ ಆತ್ಮೀಯವಾಗಿ ಸಮ್ಮಾನಿಸಲಾಯಿತು. 

ಪ್ರಾಸ್ತಾವಿಕ ಮಾತುಗಳನ್ನಾಡಿದ ಶಾಸಕ ಉಮಾನಾಥ ಕೋಟ್ಯಾನ್ ಪಕ್ಷದ ಸಾಮಾನ್ಯಕಾರ್ಯಕರ್ತನಾಗಿದ್ದ ನಳಿನ್ ಯಾವುದೇ ಅಪೇಕ್ಷೆ ಪಡದಿದ್ದರೂ ಸಂಸದರಾಗಿ, ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದು ಗಮನಾರ್ಹ ಎಂದರು.   

ಜಿಲ್ಲಾ ಕಾರ್ಯದರ್ಶಿ ಸುದರ್ಶನ ಎಂ,ಜಿಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ, ಸದಸ್ಯರಾದ ಸುಚರಿತ ಶೆಟ್ಟಿ, ಕೆ.ಪಿ.ಸುಜಾತ, ವಿನೋದ್ ಬೆಳ್ಳೂರು, ವಸಂತಿ ಕಿಶೋರ್, ಪಕ್ಷದ ಪ್ರಮುಖರಾದ ಕೆ.ಪಿ.ಜಗದೀಶ ಅಧಿಕಾರಿ, ಭುವನಾಭಿರಾಮ ಉಡುಪ, ರಮಾನಾಥ ಅತ್ತಾರ್, ಜಾಯ್ಲಸ್ ಡಿ ಸೋಜಾ, ಶೈಲೇಂದ್ರ ಸಸಿಹಿತ್ಲು, ರಾಜೇಶ್ ಮಲ್ಯ, ಕೆ.ಆರ್. ಪಂಡಿತ್, ಬಾಹುಬಲಿ ಪ್ರಸಾದ್, ಕೆ.ಕೃಷ್ಣರಾಜ ಹೆಗ್ಡೆ,  ಮೇಘನಾಥ ಶೆಟ್ಟಿ,  ಎಂ.ಎಸ್. ಕೋಟ್ಯಾನ್, ಮತ್ತಿತರರು ಉಪಸ್ಥಿತರಿದ್ದರು. 

ಮಂಡಲ ಅಧ್ಯಕ್ಷ ಈಶ್ವರ ಕಟೀಲ್ ಸ್ವಾಗತಿಸಿದರು. ಕಾರ್ಯದರ್ಶಿ ಸುಕೇಶ್ ಶೆಟ್ಟಿ ವಂದಿಸಿದರು. ಬೆಳುವಾಯಿ ಭಾಸ್ಕರ ಆಚಾರ್ಯ, ಜಯಂತ್ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News