10 ಎಸೆತಗಳಲ್ಲಿ 2 ದಾಖಲೆ ನಿರ್ಮಿಸಿದ ಉಮೇಶ್ ಯಾದವ್

Update: 2019-10-20 18:03 GMT

ರಾಂಚಿ, ಅ.20: ಭಾರತ ಕೆಳ ಕ್ರಮಾಂಕದ ಆಟಗಾರ ಉಮೇಶ್ ಯಾದವ್ ಕೇವಲ 10 ಎಸೆತಗಳಲ್ಲಿ 2 ಅಪರೂಪದ ಸಾಧನೆ ಮಾಡಿದರು. ಟೆಸ್ಟ್ ಇನಿಂಗ್ಸ್‌ನಲ್ಲಿ ತಾನೆದುರಿಸಿದ ಮೊದಲ ಎರಡು ಎಸೆತಗಳಲ್ಲಿ ಸಿಕ್ಸರ್‌ಗಳನ್ನು ಸಿಡಿಸಿದ ಬಾಲಂಗೋಚಿ ಉಮೇಶ್ ಯಾದವ್ ಈ ಸಾಧನೆ ಮಾಡಿದ ವಿಶ್ವದ 3ನೇ ಆಟಗಾರ ಎನಿಸಿಕೊಂಡರು. ಭಾರತದ ಮಾಜಿ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಹಾಗೂ ವೆಸ್ಟ್‌ಇಂಡೀಸ್‌ನ ಮಾಜಿ ದಾಂಡಿಗ ಫೊಫೀ ವಿಲಿಯಮ್ಸ್ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ತಾವೆದುರಿಸಿದ್ದ ಮೊದಲೆರಡು ಎಸೆತಗಳಲ್ಲಿ ಸಿಕ್ಸರ್‌ಗಳನ್ನು ಸಿಡಿಸಿದ ಸಾಧನೆ ಮಾಡಿದ್ದರು.

ವಿಲಿಯಮ್ಸ್ 1948ರಲ್ಲಿ ಇಂಗ್ಲೆಂಡ್‌ನ ಜಿಮ್ ಲೇಕರ್ ಎಸೆತದಲ್ಲಿ ಈ ಸಾಧನೆ ಮಾಡಿದ್ದರೆ ತೆಂಡುಲ್ಕರ್ ಆಸ್ಟ್ರೇಲಿಯದ ಆಫ್-ಸ್ಪಿನ್ನರ್ ನಥಾನ್ ಲಿನ್ ವಿರುದ್ಧ ಈ ಸಾಧನೆ ಮಾಡಿದ್ದರು. ಕೇವಲ 10 ಎಸೆತಗಳಲ್ಲಿ 5 ಭರ್ಜರಿ ಸಿಕ್ಸರ್‌ಗಳ ಸಹಿತ 31 ರನ್ ಗಳಿಸಿದ ಯಾದವ್ ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ಸ್ಟ್ರೈಕ್‌ರೇಟ್‌ನಲ್ಲಿ(310) ಬ್ಯಾಟಿಂಗ್ ಮಾಡಿದರು. ಇದು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 10 ಕ್ಕಿಂತ ಹೆಚ್ಚು ಎಸೆತ ಎದುರಿಸಿದ ಯಾವುದೇ ಆಟಗಾರನ ಹೆಚ್ಚಿನ ಸ್ಟ್ರೈಕ್‌ರೇಟ್ ಆಗಿದೆ. ಕಡಿಮೆ ಎಸೆತಗಳಲ್ಲಿ 30 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ ಶ್ರೇಯ ಯಾದವ್ ಪಾಲಾಯಿತು. ಯಾದವ್ ಅವರ ಐದು ಸಿಕ್ಸರ್‌ಗಳನ್ನು ಲಿಂಡೆ ವಿರುದ್ಧವೇ ಸಿಡಿಸಿದ್ದು ವಿಶೇಷ. 310 ಸ್ಟ್ರೈಕ್‌ರೇಟ್ ದಾಖಲಿಸಿದ ಯಾದವ್ ನ್ಯೂಝಿಲ್ಯಾಂಡ್‌ನ ಮಾಜಿ ನಾಯಕ ಫ್ಲೆಮಿಂಗ್ ದಾಖಲೆ ಮುರಿದರು. ಫ್ಲೆಮಿಂಗ್ 2004ರಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ ಪಂದ್ಯದಲ್ಲಿ 11 ಎಸೆತಗಳಲ್ಲಿ 31 ರನ್ ಗಳಿಸಿದ್ದರು. ತೆಂಡುಲ್ಕರ್,ಝಹೀರ್ ಖಾನ್, ಎಂ.ಎಸ್. ಧೋನಿ ಬಳಿಕ ಟೆಸ್ಟ್ ಪಂದ್ಯದಲ್ಲಿ ತಾನೆದುರಿಸಿದ ಮೊದಲೆರಡು ಎಸೆತಗಳಲ್ಲಿ ಸಿಕ್ಸರ್ ಸಿಡಿಸಿದ ಭಾರತದ ನಾಲ್ಕನೇ ಆಟಗಾರನೆಂಬ ಕೀರ್ತಿಗೆ ಯಾದವ್ ಪಾತ್ರರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News