ಮಂಗಳೂರು: ಪೊಲೀಸ್ ಹುತಾತ್ಮರ ದಿನಾಚರಣೆ

Update: 2019-10-21 12:41 GMT

ಮಂಗಳೂರು, ಅ.21: ಕರ್ತವ್ಯ ನಿರತ ವೇಳೆ ಅಕಾಲಿಕವಾಗಿ ಸಾವನ್ನಪ್ಪಿ ಹುತಾತ್ಮರಾಗುವ ಪೊಲೀಸರ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ನಗರಲದಲ್ಲಿ ಶಾಲೆ ತೆರೆಯಬೇಕು ಎಂದು ದ.ಕ. ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಕಡ್ಲೂರು ಸತ್ಯನಾರಾಯಣಾಚಾರ್ಯ ಸಲಹೆ ನೀಡಿದ್ದಾರೆ.

ಮಂಗಳೂರು ನಗರ ಪೊಲೀಸ್ ಕಮಿಷನರೆಟ್ ಮತ್ತು ದ.ಕ. ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ನಗರದ ಡಿಎಆರ್ ಕಚೇರಿಯ ಆವರಣದಲ್ಲಿ ಸೋಮವಾರ ನಡೆದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಹುತಾತ್ಮ ಪೊಲೀಸರಿಗೆ ಗೌರವ ನಮನ ಸಲ್ಲಿಸಿ ಅವರು ಮಾತನಾಡಿದರು.

ಪೊಲೀಸರು ಕರ್ತವ್ಯದ ವೇಳೆ ಸಾವನ್ನಪ್ಪಿದರೆ ಅವರ ಮಕ್ಕಳು ಸೂಕ್ತ ಮಾರ್ಗದರ್ಶನ ಮತ್ತು ಶಿಕ್ಷಣದಿಂದ ವಂಚಿತರಾಗಬಾರದು. ಹಾಗಾಗಿ ಇಂತಹ ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸಿ ಮುಂದೆ ಅವರು ಕೂಡಾ ಪೊಲೀಸ್ ಸೇವೆಗೆ ಸೇರುವಂತಾಗಲು ಸರಕಾರವೇ ಉಚಿತ ಶಿಕ್ಷಣವನ್ನು ಒದಗಿಸಬೇಕು. ಧಾರವಾಡದಲ್ಲಿ ಅಂತಹ ಶಾಲೆ ಇದ್ದು, ಮಂಗಳೂರಿನಲ್ಲಿಯೂ ಅಂತಹ ಉಚಿತ ಶಿಕ್ಷಣ ಒದಗಿಸುವ ಶಾಲೆಯನ್ನು ಆರಂಭಿಸಿದರೆ ಈ ಭಾಗದ ಹುತಾತ್ಮ ಪೊಲೀಸರ ಮಕ್ಕಳಿಗೆ ಅನುಕೂಲವಾಗಲಿದೆ ಎಂದು ಕಡ್ಲೂರು ಸತ್ಯನಾರಾಯಣ ಆಚಾರ್ಯ ಅಭಿಪ್ರಾಯಪಟ್ಟರು.

ಮಂಗಳೂರು ಪೊಲೀಸ್ ಆಯುಕ್ತ ಡಾ. ಹರ್ಷ ಪಿ.ಎಸ್. ಕಳೆದ 1 ವರ್ಷದ ಅವಧಿಯಲ್ಲಿ ಮಂಗಳೂರಿನ ಇಬ್ಬರು ಮತ್ತು ಕರ್ನಾಟಕದ 12 ಮಂದಿ ಸೇರಿದಂತೆ ದೇಶದಲ್ಲಿ ಹುತಾತ್ಮರಾದ 292 ಮಂದಿ ಪೊಲೀಸರ ಹೆಸರನ್ನು ವಾಚಿಸಿದರು.

ಪಶ್ಚಿಮ ವಲಯ ಐಜಿಪಿ ಜೆ. ಅರುಣ್ ಚಕ್ರವರ್ತಿ, ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್, ಜಿಲ್ಲಾ ಎಸ್ಪಿ ಬಿ.ಎಂ. ಲಕ್ಷ್ಮೀ ಪ್ರಸಾದ್, ಡಿಸಿಪಿಗಳಾದ ಅರುಣಾಂಗ್ಷುಗಿರಿ ಮತ್ತು ಲಕ್ಷ್ಮಿಪ್ರಸಾದ್, ಮಂಗಳೂರು ನಗರ ಪಾಲಿಕೆ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ, ಗೃಹ ರಕ್ಷಕ ದಳದ ಜಿಲ್ಲಾ ಕಮಾಂಡೆಂಟ್ ಡಾ. ಮುರಳಿ ಮೋಹನ್ ಚೂಂತಾರು, ನಿವೃತ್ತ ಕಮಾಂಡೆಂಟ್ ಡಾ. ಶಿವಪ್ರಸಾದ್ ರೈ, ವಲಯ ಅಗ್ನಿ ಶಾಮಕ ಅಧಿಕಾರಿ ಶಿವಶಂಕರ್, ಎಸಿಪಿಗಳಾದ ಮಂಜುನಾಥ ಶೆಟ್ಟಿ, ಶ್ರೀನಿವಾಸ ಗೌಡ ಉಪಾಸೆ, ಪುತ್ತೂರು ಡಿವೈಎಸ್ಪಿ ದಿನಕರ ಶೆಟ್ಟಿ, ಕೆಎಸ್ಸಾರ್‌ಪಿ ಕಮಾಂಡೆಂಟ್ ಜನಾರ್ದನ ಮತ್ತಿತರರು ಗೌರವ ನಮನ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಮೂರು ಸುತ್ತು ಕುಶಾಲು ತೋಪು ಹಾರಿಸಿ ಹುತಾತ್ಮರಿಗೆ ಗೌರವ ಸಲ್ಲಿಸಲಾಯಿತು. ನಗರ ಸಶಸ ಮೀಸಲು ಪಡೆಯ ಇನ್‌ಸ್ಪೆಕ್ಟರ್ ವಿಠಲ ಶಿಂಧೆ ಪರೇಡ್ ಕಮಾಂಡರ್ ಆಗಿ ಕಾರ್ಯ ನಿರ್ವಹಿಸಿದರು.

ಕಾರ್ಯಕ್ರಮದಲ್ಲಿ ಪಶ್ಚಿಮ ವಲಯ ಐಜಿಪಿ‌ ಅರುಣ್ ಚಕ್ರವರ್ತಿ, ಪೊಲೀಸ್ ಆಯುಕ್ತ ಡಾ.ಪಿ.ಎಸ್. ಹರ್ಷ, ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಿಪ್ರಸಾದ್, ಮನಪಾ ಆಯುಕ್ತ ಶಾನಾಡಿ‌ ಅಜಿತ್‌ ಕುಮಾರ್ ಹೆಗ್ಡೆ ಮತ್ತಿತರರು ಪಾಲ್ಗೊಂಡಿದ್ದರು.

ಎಎಸ್ಸೈ ಹರಿಶ್ಚಂದ್ರ ಆರ್. ಬೈಕಂಪಾಡಿ ಮತ್ತು ಟ್ರಾಫಿಕ್ ಇನ್‌ಸ್ಪೆಕ್ಟರ್ ಗುರುದತ್ತ ಕಾಮತ್ ಕಾರ್ಯಕ್ರಮ ನಿರೂಪಿಸಿದರು.

ಮೂಡುಬಿದಿರೆ ಪೊಲೀಸ್ ಠಾಣೆಯ ಎಚ್. ಜಗದೀಶ್ ಮತ್ತು ದ.ಕ. ಜಿಲ್ಲಾ ಸಶಸ ಮೀಸಲು ಪಡೆಯ (ಡಿಎಆರ್) ಮಹೇಶ್ ಲಮಾಣಿ 2019ರ ಮಾರ್ಚ್‌ನಲ್ಲಿ ಕರ್ತವ್ಯನಿರತರಾಗಿದ್ದ ವೇಳೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಅವರ ಕುಟುಂಬದ ಸದಸ್ಯರು ಕೂಡ ಗೌರವ ನಮನ ಸಲ್ಲಿಸಿದರು.

ಹುತಾತ್ಮ ಪೊಲೀಸರಿಗೆ ಗೌರವ ನಮನ ಸಲ್ಲಿಸಿದ ನೀಲವ್ವ ತನ್ನ ಪುತ್ರ ಮಹೇಶ್‌ರನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತು ಬಿಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News