ಆರ್ಥಿಕ ಹಿಂಜರಿತದಿಂದ ಸಣ್ಣ,ಮಧ್ಯಮ ಕೈಗಾರಿಕೆಗಳು ಸಂಕಷ್ಟದಲ್ಲಿ: ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ಆತಂಕ

Update: 2019-10-21 11:24 GMT

ಮಂಗಳೂರು, ಅ.21: ದೇಶದಲ್ಲಿ ಆರ್ಥಿಕ ಹಿಂಜರಿತರಿದಂದಾಗಿ ಸಣ್ಣ ಮತ್ತು ಮಧ್ಯಮ ಉದ್ಯಮ(ಎಸ್‌ಎಂಇ)ಗಳು ಸಂಕಷ್ಟವನ್ನು ಎದುರಿಸುತ್ತಿವೆ. ಇವುಗಳನ್ನು ಉಳಿಸಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಇನ್ನಷ್ಟು ಉತ್ತೇಜನಕಾರಿ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ) ಆಗ್ರಹಿಸಿದೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಕಾಸಿಯಾ ಅಧ್ಯಕ್ಷ ಆರ್. ರಾಜು, ಕಳೆದ ಏಳು ವರ್ಷಗಳಲ್ಲೇ ಈ ಬಾರಿಯ ಆಗಸ್ಟ್‌ನಲ್ಲಿ ಕೈಗಾರಿಕಾ ಉತ್ಪಾದನಾ ಸೂಚ್ಯಂಕ ಅತ್ಯಂತ ಕಡಿಮೆ ಮಟ್ಟದಲ್ಲಿ ದಾಖಲಾಗಿದೆ. ಜಿಡಿಪಿ ಬೆಳವಣಿಗೆ ಶೇ.6.1ರಷ್ಟಿದೆ ಎಂಬುದು ಪರಿಸ್ಥಿತಿಯನ್ನು ಮತ್ತಷ್ಟು ಆತಂಕಗೊಳಿಸಿದೆ ಎಂದರು.

ಕಳೆದ ಎರಡು ವರ್ಷಗಳಿಂದ ಆರ್ಥಿಕ ಹಿಂಜರಿತದ ಗಾಢ ಪರಿಣಾಮ ಉಂಟಾಗುತ್ತಲೇ ಇದೆ. ಪ್ರಸ್ತುತ ಆಟೋಮೊಬೈಲ್ ವಲಯ, ಜವಳಿ ಮತ್ತು ಸಿದ್ದ ಉಡುಪುಗಳು ಹಾಗೂ ಗ್ರಾಹಕರ ವಸ್ತುಗಳೂ ಸೇರಿದಂತೆ ಇತರ ತಯಾರಿಕಾ ವಲಯಗಳು ತೀವ್ರ ಕುಸಿತ ಕಂಡಿದ್ದು, ಇದರಿಂದ ಎಸ್‌ಎಂಇಗಳ ಸಾಮರ್ಥ್ಯಕ್ಕೆ ಭಾರಿ ಹೊಡೆತ ಬಿದ್ದಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ರಾಜ್ಯದಲ್ಲಿ ಅನೇಕ ಎಸ್‌ಎಂಇ ಘಟಕಗಳು ವಹಿವಾಟಿನಲ್ಲಿ ಶೇ. 30 ರಿಂದ ಶೇ. 70ರಷ್ಟು ಕುಸಿತ ಕಂಡಿವೆ. ಪಾಳಿ ಸಂಖ್ಯೆಗಳನ್ನು ಮೊಟಕುಗೊಳಿಸಲಾಗಿದೆ. ಗುತ್ತಿಗೆ ಮತ್ತು ತಾತ್ಕಾಲಿಕ ನೌಕರರು ಉದ್ಯೋಗ ಕಳೆದುಕೊಂಡಿದ್ದಾರೆ. ವೇತನಗಳು ಸಕಾಲದಲ್ಲಿ ಪಾವತಿಯಾಗುತ್ತಿಲ್ಲ. ಇಂತಹ ಘಟಕಗಳ ಕಾರ್ಯನಿರ್ವಹಣೆಗೆ ಹಣಕಾಸು ಹೂಡಿಕೆ ಮತ್ತು ನೆರವು ಪಡೆಯುವುದು ಕಷ್ಟವಾಗಿದೆ ಎಂದರು.

ಮಂಗಳೂರಿನಲ್ಲಿ 17883 ಕೈಗಾರಿಕೆಗಳಿದ್ದು, 112375 ಲಕ್ಷ ರೂ. ಬಂಡವಾಳ ಹೂಡಿಕೆಯನ್ನು ಹೊಂದಿದೆ. 98129 ಮಂದಿ ಉದ್ಯೋಗಿಗಳಿದ್ದಾರೆ. ನೋಂದಣಿ ಆಗದ ಕೈಗಾರಿಕೆಗಳೂ ಕೆಲವು ಇವೆ ಎಂದು ಅವರು ಹೇಳಿದರು.

ಸರಕಾರ ಈಗಾಗಲೇ ಕೆಲ ಕ್ರಮ ಕೈಗೊಂಡಿದೆ. ಸಾಲ ವಸೂಲಾತಿಯಲ್ಲಿ ವಿಳಂಬ ಮಾಡುವಂತೆ ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಿರುವುದು, ಎನ್‌ಪಿಎ ನಿಯಮಗಳ ಜಾರಿ, ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಿಗೆ ಸಾಲ ಸುಲಭವಾಗಿ ದೊರೆಯುವಂತೆ ಮಾಡಲು ಅನೇಕ ಕ್ರಮಗಳನ್ನು ಕೈಗೊಂಡಿರುವುದು ಸ್ವಾಗತಾರ್ಹ. ಆರ್‌ಬಿಐ ರೆಪೊ ದರ ಇಳಿಸಿದೆ. ಇದು ಈಗ ಶೇ.5.15ರಷ್ಟಿದ್ದು, ತನ್ನ ಸಾಲ ನೀಡಿಕೆ ದರಗಳನ್ನು ಇದಕ್ಕೆ ಸಂಪರ್ಕ ಕಲ್ಪಿಸಲು ಬ್ಯಾಂಕ್‌ಗಳಿಗೆ ಸ್ಪಷ್ಟ ನಿರ್ದೇಶನ ನೀಡಿದೆ. ಕೇಂದ್ರ ಸರಕಾರ ಅಸ್ತಿತ್ವದಲ್ಲಿರುವ ಮತ್ತು ಹೊಸ ಘಟಕಗಳಿಗೆ ಕಾರ್ಪೊರೇಟ್ ತೆರಿಗೆ ಇಳಿಸಿದೆ. ಇದರಿಂದ ಹೊಸ ಘಟಕಗಳು ಕಡಿಮೆ ತೆರಿಗೆಯ ಅಧಿಕ ಸೌಲಭ್ಯವನ್ನು ಪಡೆಯಲು ನೆರವಾಗಿದೆ. ಆದರೂ, ಕಾರ್ಪೊರೇಟ್ ಉದ್ಯಮಗಳಲ್ಲದಿರುವ ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಿಗೆ ಈ ಕ್ರಮಗಳಿಂದ ಯಾವುದೇ ಪ್ರಯೋಜನವಾಗಿಲ್ಲ. ಈ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಈಗಾಗಲೇ ಮನವಿ ಸಲ್ಲಿಸಲಾಗಿದೆ ಎಂದರು.

ಇಂಥ ಕ್ಲಿಷ್ಟ ಸನ್ನಿವೇಶ ಸಂದರ್ಭ ಉನ್ನತ ಕೌಶಲ್ಯಕ್ಕಾಗಿ ಪ್ರೋತ್ಸಾಹ ದನ, ಜಿಎಸ್‌ಟಿ ಸಂಗ್ರಹದಲ್ಲಿ ವಿನಾಯಿತಿ, ಇದನ್ನು ಕೆಲವು ಸ್ಲ್ತ್ರ್ಯಾಬ್‌ಗಳ ಅಡಿ ತ್ರೈಮಾಸಿಕ ಅವಧಿಗೆ ಪರಿವರ್ತನೆ, ಜಿಎಸ್‌ಟಿ ದರ ಇಳಿಕೆ, ಜಿಎಸ್‌ಟಿ ಕುಂದುಕೊರತೆಗಳ ಪರಿಹಾರ ಕಾರ್ಯವಿಧಾನದಲ್ಲಿ ಸುಧಾರಣೆ ಎಸ್‌ಎಂಇಗಳಿಗೆ ಸಾಲ ನೀಡುವ ಸೌಲಭ್ಯಗಳಲ್ಲಿ ಸುಧಾರಣೆ, ವಾಸ್ತವ ಬಡ್ಡಿ ದರಗಳ ಇಳಿಕೆ ಮುಂತಾದ ಕ್ರಮ ಕೈಗೊಳ್ಳುವಿಕೆ ಹಾಗೂ ಭೌತಿಕ ಮೂಲಸೌಕರ್ಯ ಅಭಿವೃದ್ದಿ ಮತ್ತು ವ್ಯವಸ್ಥಾಪನಾ ಕ್ರಮಗಳನ್ನು ಸರಕಾರ ಕೈಗೊಳ್ಳಬೇಕಿದೆ ಎಂದರು.

ಎಸ್‌ಎಂಇಗಳ ಬಡ್ಡಿದರಕ್ಕೆ ಸಹಾಯಧನ ನೀಡಲು ಕೆ.ಎಸ್.ಎಫ್.ಸಿ.ಗೆ ಸರಕಾರ ಹೆಚ್ಚಿನ ಹಣಕಾಸು ನೆರವು ನೀಡಬೇಕು, ಬ್ಯಾಂಕುಗಳ ಮೂಲಕ ಶೇ. 4ರಷ್ಟು ಬಡ್ಡಿ ದರದಲ್ಲಿ ಮುಂಗಡ ನೀಡಬೇಕು, ಒಂದು ವರ್ಷದವರೆಗೆ ಬಡ್ಡಿ ರಜೆಯ ಲಾಭ ವಿಸ್ತರಿಸಬೇಕು, ಬಾಕಿ ಬಡ್ಡಿ ಪಾವತಿ ಅವಧಿಯನ್ನು ಕನಿಷ್ಟ ಒಂದು ವರ್ಷದ ಮಟ್ಟಿಗೆ ವಿನಾಯಿತಿ ನೀಡಬೇಕು, ಜಿಎಸ್‌ಟಿಗೆ ಸಂಬಂಧಿಸಿ ಜಾಬ್ ವರ್ಕ್‌ಗಳು, ಕಾರ್ಮಿಕರ ಶುಲ್ಕಗಳು, ಪಾವತಿ ವಿಳಂಬಳ ಕುರಿತ ಜಿಎಸ್‌ಟಿ ಮುಂತಾದ ಅನೇಕ ಕ್ಷೇತ್ರಗಳಲ್ಲಿ ಇರುವ ಸಮಸ್ಯೆಗಳನ್ನು ಶೀಘ್ರ ಬಗೆಹರಿಸಬೇಕು, ಎಸ್‌ಎಂಇ ಗಳಿಗೆ 5 ಕೋಟಿ ರೂ.ಗಳ ತನಕ ಸಾಲ ಖಾತರಿಯನ್ನು ಹೆಚ್ಚಿಸಬೇಕು ಎಂದು ಅವರು ಆಗ್ರಹಿಸಿದರು.

ಸಿಜಿಟಿಎಂಎಸ್‌ಇ ಅಡಿ ಸಾಲ ಪಡೆಯುವ ಉದ್ಯಮಿಗಳು ಎರಡು ಬಾರಿ ಜಿಎಸ್‌ಟಿ ಪಾವತಿಸಬೇಕಾಗುತ್ತದೆ. ಈ ಸಮಸ್ಯೆ ಬಗೆಹರಿಸಬೇಕು, ಪ್ರಧಾನಮಂತ್ರಿ ಯವರ ನೂತನ 59 ನಿಮಿಷಗಳ ಆನ್‌ಲೈನ್ ಮೂಲಕ ಸಾಲ ನೀಡುವ ಯೋಜನೆ ಅಡಿ ವಿತರಿಸಲಾದ ಸಾಲಗಳ ಸಂಖ್ಯೆಗಳ ಬಗ್ಗೆ ಬ್ಯಾಂಕುಗಳು ಸೂಚನಾ ಫಲಕದಲ್ಲಿ ಪ್ರದರ್ಶಿಸುವುದನ್ನು ಕಡ್ಡಾಯವಾಗೊಳಿಸಬೇಕು, ಎಸ್‌ಐಡಿಬಿಐ ಪುರ್ನರಚಿಸಬೇಕು, ಸಂಸತ್ತಿನ ಮುಂದೆ ಬಾಕಿ ಇರುವ ಸಣ್ಣ ಕಾರ್ಖಾನೆಗಳ ಕಾಯ್ದೆಯನ್ನು ಅಂಗೀಕರಿಸಬೇಕು ಎಂದು ಅವರು ಒತ್ತಾಯಿಸಿದರು.

ಸಣ್ಣ ಕೈಗಾರಿಕಾ ಸಂಘದ ಕೃಷ್ಣದಾಸ್ ಕಾಮತ್, ವಿಶಾಲ್ ಸಾಲ್ಯಾನ್, ಐಸಾಕ್ ವಾಜ್, ಅರುಣ್ ಪಡಿಯಾರ್, ಕೆ.ವಿ. ಅರಸಪ್ಪ, ರಾಜಗೋಪಾಲ್, ವಿಶ್ವನಾಥ ಗೌಡರ್, ಹುಸೈನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News