ಬೀದಿ ನಾಯಿ-ಬೆಕ್ಕುಗಳನ್ನು ಉಚಿತ ಪಡೆಯಲು ಹೀಗೊಂದು ಶಿಬಿರ!

Update: 2019-10-21 12:30 GMT

ಮಂಗಳೂರು, ಅ.20: ನಗರದ ಕಂಕನಾಡಿ- ವೆಲೆನ್ಸಿಯಾ ರಸ್ತೆಯಾಗಿ ಹಾದು ಹೋಗುವ ವಾಹನಿಗರ, ಪಾದಚಾರಿಗಳ ಪೈಕಿ ಬಹುತೇಕರ ಕಣ್ಣು ಒಮ್ಮೆ ಅತ್ತ ವಾಲುತಿತ್ತು. ಕೆಲವರು ಕುತೂಹಲದಿಂದ ಅತ್ತ ತೆರಳಿ ವೀಕ್ಷಿಸಿದರೆ, ಇನ್ನು ಕೆಲವರು ತಮ್ಮ ಪಾಡಿಗೆ ಹೋಗುತ್ತಿದ್ದರು. ಕೆಲವರು ಸೆಲ್ಫಿ ಖುಷಿಯಲ್ಲಿ ಸಂಭ್ರಮಿಸಿದರೆ ಇನ್ನು ಕೆಲವರು ‘ಬೀದಿ ಬದಿಯದ್ದಾ? ಹೆಣ್ಣು ಬೇಡ, ಗಂಡಿದ್ದರೆ ಕೊಡಿ’ಎಂದು ಕೇಳುತ್ತಿದ್ದರು.

ಇದು ರವಿವಾರ ಬೆಳಗ್ಗಿನಿಂದ ಸಂಜೆಯವರೆಗೆ ವೆಲೆನ್ಸಿಯಾ ರಸ್ತೆಯ ಬಳಿ ಕಂಡು ಬಂದ ದೃಶ್ಯ. ಮಂಗಳೂರಿನ ‘ಲವ್ 4 ಪೌವ್ಸ್’ ಚಾರಿಟೇಬಲ್ ಟ್ರಸ್ಟ್ ಈ ಶಿಬಿರವನ್ನು ಆಯೋಜಿಸಿದೆ. ಅಂದರೆ ಯಾರೋ ಹಿಡಿದು ತಂದು ಕೊಟ್ಟ ಅಥವಾ ಸ್ವತಃ ಹಿಡಿದ ಅಥವಾ ಯಾರದೋ ಕರೆಯ ಮೇರೆಗೆ ರಿಕ್ಷಾ ಮತ್ತಿತರ ವಾಹನದಲ್ಲಿ ಸಾಗಿಸಿ ತಂದ ಬೀದಿ ನಾಯಿ-ಬೆಕ್ಕುಗಳನ್ನು ಇಂತಹ ಶಿಬಿರಗಳ ಮೂಲಕ ಉಚಿತವಾಗಿ ದಾನ ಮಾಡಲಾಗುತಿತ್ತು. ಇದನ್ನು ಟ್ರಸ್ಟ್‌ನವರು ‘ನಾಯಿ-ಬೆಕ್ಕುಗಳ ದತ್ತು ಸ್ವೀಕಾರ’ ಎನ್ನುತ್ತಿದ್ದರು.

ಬೀದಿ ನಾಯಿಗಳ ಸಂಖ್ಯೆ ಕಡಿಮೆಯಾಗಬೇಕು, ಅವು ಆಹಾರವಿಲ್ಲದೆ ಸೊರಗಬಾರದು, ಅವುಗಳನ್ನು ಯಾರೂ ಹಿಂಸಿಸಬಾರದು, ಎಲ್ಲರಲ್ಲೂ ಪ್ರಾಣಿಯ ಬಗ್ಗೆ ಪ್ರೀತಿ, ಮಮತೆ, ಗೌರವವಿರಬೇಕು ಎಂಬ ಉದ್ದೇಶದಿಂದ ನಗರದ ಖಾಸಗಿ ಸಂಸ್ಥೆಯೊಂದರ ಉದ್ಯೋಗಿಯಾಗಿರುವ ಉಷಾ ಸುವರ್ಣ ಎಂಬವರು 2019ರ ಮಾರ್ಚ್‌ನಲ್ಲಿ ಈ ಟ್ರಸ್ಟ್ ಆರಂಭಿಸಿದರು. ನಾಯಿ-ಬೆಕ್ಕಿನ ಮೇಲೆ ಪ್ರೀತಿ ಇರುವ ಐದಾರು ಮಂದಿ ಈ ಟ್ರಸ್ಟ್‌ನೊಂದಿಗೆ ಕೈ ಜೋಡಿಸಿದ್ದಾರೆ. ಇವರೆಲ್ಲಾ ವಾಟ್ಸ್‌ಆ್ಯಪ್ ಮೂಲಕ ನಾಯಿ-ಬೆಕ್ಕುಗಳ ಇರುವಿಕೆಯ ಬಗ್ಗೆ ಮಾಹಿತಿ ಹಂಚಿಕೊಂಡು ಅಲ್ಲಲ್ಲಿಂದ ಪಡೆಯುತ್ತಾರೆ. ಹಾಗೇ ಆರೈಕೆ ಮಾಡುತ್ತಾರೆ. ಅಗತ್ಯಬಿದ್ದರೆ ಸಂತಾನಹರಣ ಚಿಕಿತ್ಸೆಯನ್ನೂ ಮಾಡಿಸುತ್ತಾರೆ. ಪ್ರತಿಯೊಂದು ನಾಯಿಯ ಸಂತಾನಹರಣಕ್ಕೆ 2,500 ರೂ.ನಿಂದ 3,000 ರೂ. ಅಗತ್ಯವಿದ್ದು, ಅದನ್ನು ಟ್ರಸ್ಟ್‌ನ ಸದಸ್ಯರೇ ಭರಿಸುತ್ತಾರೆ. ಈವರೆಗೆ ಈ ಟ್ರಸ್ಟ್ ವತಿಯಿಂದ ನಗರದ ಕಂಕನಾಡಿ-ವೆಲೆನ್ಸಿಯಾ, ಬಿಜೈ, ಫಳ್ನೀರ್, ಕಪಿತಾನಿಯೋ ಹೀಗೆ ಹಲವು ಕಡೆ 7 ಶಿಬಿರಗಳನ್ನು ನಡೆಸಿ 80ಕ್ಕೂ ಅಧಿಕ ನಾಯಿ, 50ಕ್ಕೂ ಅಧಿಕ ಬೆಕ್ಕುಗಳನ್ನು ದಾನ ಮಾಡಿದ್ದಾರೆ ಅಥವಾ ದತ್ತು ನೀಡಿದ್ದಾರೆ. ಅಂದರೆ ಬೀದಿ ನಾಯಿ-ಬೆಕ್ಕುಗಳು ಸಾಕಲು ಆಸಕ್ತಿ ಇರುವವರಿಗೆ ಉಚಿತ ನಾಯಿ-ಬೆಕ್ಕು ನೀಡುತ್ತಾರೆ. ಹಾಗೇ ಅವರ ಹೆಸರು, ವಿಳಾಸ, ಸಂಪರ್ಕ ಸಂಖ್ಯೆ ಪಡೆಯುತ್ತಾರೆ. ಎರಡ್ಮೂರು ತಿಂಗಳಿಗೊಮ್ಮೆ ದತ್ತು ಪಡೆದವರನ್ನು ಸಂಪರ್ಕಿಸಿ ನಾಯಿ-ಬೆಕ್ಕುಗಳ ಸ್ಥಿತಿಗತಿ ಬಗ್ಗೆ ಮಾಹಿತಿ ತಿಳಿದುಕೊಳ್ಳುತ್ತಾರೆ. ದತ್ತು ಪಡೆದ ಬಳಿಕವೂ ಅವುಗಳನ್ನು ಸಾಕಲು ಆಸಕ್ತಿ ತೋರದವರಿಂದ ಮರಳಿ ಪಡೆದು ಇತರರಿಗೆ ದತ್ತು ನೀಡುತ್ತಾರೆ.

ಈ ಟ್ರಸ್ಟ್‌ನವರಿಗೆ ಬೀದಿ ನಾಯಿ-ಬೆಕ್ಕುಗಳನ್ನು ಸಾಕಲು ಜಾಗದ ಸಮಸ್ಯೆ ಇದೆ. ಮಾರುಕಟ್ಟೆಯ ಸುತ್ತಮುತ್ತಲೋ, ರಸ್ತೆಬದಿಯಲ್ಲೋ ಅಲೆದಾಡುವ ನಾಯಿ-ಬೆಕ್ಕುಗಳನ್ನು ಹಿಡಿಯುವುದೇ ಒಂದು ಸಾಹಸವಾಗಿದೆ. ಹಿಡಿದ ಬಳಿಕ ಅವುಗಳನ್ನು ಎಲ್ಲಿಡಬೇಕು ಎಂಬ ಪ್ರಶ್ನೆಯೂ ಟ್ರಸ್ಟ್‌ನ ಸದಸ್ಯರಿಗೆ ಕಾಡುತ್ತಿದೆ. ಈಗಾಗಲೆ ಟ್ರಸ್ಟ್‌ನ ಮುಖ್ಯಸ್ಥೆ ಉಷಾ ಸುವರ್ಣರ ಮನೆಯಲ್ಲೇ 17 ಬೆಕ್ಕು ಮತ್ತು 3 ನಾಯಿಗಳಿವೆ. ಪ್ರತೀ ತಿಂಗಳಿಗೊಂದು ಶಿಬಿರ ಆಯೋಜಿಸುವುದು, ಓಡಾಟ, ದಾರಿಯಲ್ಲಿ ಸಿಕ್ಕಿದವುಗಳನ್ನು ಹಿಡಿದು ತಂದ ನಾಯಿ-ಬೆಕ್ಕುಗಳಿಗೆ ಆಹಾರ ಪೂರೈಕೆ, ಆರೈಕೆ ಹೀಗೆ ಮಾಸಿಕ 15 ಸಾವಿರ ರೂ.ವನ್ನು ವ್ಯಯಿಸುತ್ತಾರೆ. ಅಪರೂಪಕ್ಕೊಮ್ಮೆ ದಾನಿಗಳ ನೆರವು ಸಿಗುತ್ತಿದೆ. ಮಾನವೀಯ ದೃಷ್ಟಿಯಿಂದಲಾದರೂ ಸರಿ ಜಿಲ್ಲಾಡಳಿತ, ಮಹಾನಗರ ಪಾಲಿಕೆಯು ಬೀದಿ ನಾಯಿಗಳ ಸಂಖ್ಯೆ ಕಡಿಮೆ ಮಾಡಲು, ದೇಸಿ ನಾಯಿ-ಬೆಕ್ಕುಗಳನ್ನು ಸಾಕಲು ಸ್ವಲ್ಪ ಜಮೀನು ಕೊಡಬೇಕು ಎಂದು ಆಶಿಸುತ್ತಾರೆ.

ನಾವು ಕಳೆದ ಮಾರ್ಚ್‌ನಲ್ಲಿ ಈ ಟ್ರಸ್ಟ್ ರಚಿಸಿದ್ದೇವೆ. ಬೀದಿ ನಾಯಿ-ಬೆಕ್ಕುಗಳ ಸಂರಕ್ಷಣೆಯೇ ನಮ್ಮ ಗುರಿ. ಅದು ಬೀದಿ ಪಾಲಾಗುವ ಬದಲು ನಮ್ಮದೇ ಮನೆಯಲ್ಲಿ ಬೆಳೆದರೆ ಚೆನ್ನ ಅಲ್ವಾ? ಅದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಟ್ರಸ್ಟ್ ರಚಿಸಿ ತಿಂಗಳಿಗೊಮ್ಮೆ ಇಂತಹ ಶಿಬಿರ ನಡೆಸುತ್ತೇವೆ. ಆಸಕ್ತಿ ಇದ್ದವರು ಬಂದು ಕೊಂಡು ಹೋಗುತ್ತಾರೆ. ನಮ್ಮಿಂದ ನಾಯಿ-ಬೆಕ್ಕು ದತ್ತು ಪಡೆದುಕೊಂಡು ಹೋದ ಬಳಿಕ ನಾವು ಸುಮ್ಮನಿರುವುದಿಲ್ಲ. ಅವುಗಳ ಸಂರಕ್ಷಣೆ ಮಾಡುತ್ತಿದ್ದಾರೆಯೇ ಎಂದು ತಿಳಿದುಕೊಳ್ಳುತ್ತಲೇ ಇರುತ್ತೇವೆ. ನಮಗೆ ಅವುಗಳನ್ನು ತಂದು ಕೂಡಿಡಲು ಅಥವಾ ಸಾಕಲು ಜಾಗದ ಸಮಸ್ಯೆ ಇದೆ. ಜಿಲ್ಲಾಡಳಿತ ಅಥವಾ ಖಾಸಗಿ ವ್ಯಕ್ತಿಗಳು ಜಮೀನು ಅಥವಾ ಶೆಲ್ಟರ್ ಕೊಟ್ಟರೆ ನಾವು ಅಲ್ಲೇ ಅವುಗಳನ್ನು ಸಾಕಿ ಸಲಹಿ ಅಗತ್ಯ ಉಳ್ಳವರಿಗೆ ದತ್ತು ಕೊಡುವೆವು. ದಯವಿಟ್ಟು ದಾನಿಗಳು ನಮ್ಮ ಕಳಕಳಿಗೆ (ಮೊ.ಸಂ: 7204995440) ಸ್ಪಂದಿಸಿದರೆ ಚೆನ್ನಾಗಿತ್ತು.

-ಉಷಾ ಸುವರ್ಣ, ಸಂಸ್ಥಾಪಕಿ,

‘ಲವ್ 4 ಪೌವ್ಸ್’ ಚಾರಿಟೇಬಲ್ ಟ್ರಸ್ಟ್

ಮಂಗಳೂರು

ನನ್ನ ಅಜ್ಜನಿಗೆ ಜಾನುವಾರುಗಳು ಅಂದರೆ ತುಂಬಾ ಇಷ್ಟವಂತೆ. ಅವರೂ ದನ, ಆಡುಗಳನ್ನು ಸಾಕುತ್ತಿದ್ದರಂತೆ. ಅಜ್ಜನ ಆ ಗುಣ ನನಗೂ ಬಂತೋ ಏನೋ? ನಮ್ಮ ಮನೆಯ ಸುತ್ತಮುತ್ತ ಸಾಕಷ್ಟು ಬೀದಿ ಬೆಕ್ಕುಗಳಿವೆ. ಕೆಲವನ್ನು ನಾನು ಮನೆಯಲ್ಲೇ ಸಾಕುತ್ತೇನೆ. ಇನ್ನು ಕೆಲವನ್ನು ಹಿಡಿದು ತಂದು ಅಥವಾ ಯಾರಾದರು ಕೊಟ್ಟರೆ ಅದನ್ನು ಇಂತಹ ಶಿಬಿರಗಳಲ್ಲಿ ದತ್ತು ನೀಡುತ್ತೇನೆ. ಈಗಾಗಲೆ ಬೆಂಗಳೂರು, ಹೈದರಾಬಾದ್ ಅಂತೆಲ್ಲಾ 50ಕ್ಕೂ ಅಧಿಕ ಬೆಕ್ಕುಗಳನ್ನು ಪ್ರಾಣಿಪ್ರಿಯರಿಗೆ ನೀಡಿದ ತೃಪ್ತಿ ಇದೆ. 

-ನಾಝಿಯಾ ಶಕ್ತಿನಗರ, ಸದಸ್ಯೆ, 

‘ಲವ್ 4 ಪೌವ್ಸ್’ ಚಾರಿಟೇಬಲ್ ಟ್ರಸ್ಟ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News