ಕಡಿಮೆ ನಿರ್ವಹಣೆಯ ‘ಕೊಕೆಡಾಮ’ ಪಾಚಿ ಉಂಡೆಯ ಗಿಡ

Update: 2019-10-21 12:33 GMT

ಉಡುಪಿ, ಅ.20: ಕಡಿಮೆ ನಿರ್ವಹಣಾ ವೆಚ್ಚ, ಕಡಿಮೆ ನೀರು ಹಾಗೂ ಮನೆಯ ಒಳಾಂಗಣ, ಹೊರಾಂಗಣಗಳ ಅಂದವನ್ನು ಹೆಚ್ಚಿಸುವ ವಿಶಿಷ್ಟ ಜಪಾನಿ ಕಲೆಯಾದ ಪರಿಸರ ಸ್ನೇಹಿ ಕೊಕೆಡಾಮ (ಪಾಚಿ ಉಂಡೆ) ಗಿಡವನ್ನು ಬ್ರಹ್ಮಾವರ ಚೆರ್ಕಾಡಿ ಪೇತ್ರಿಯ ಅನ್ನಪೂರ್ಣ ನರ್ಸರಿಯು ಕರಾವಳಿ ಜನತೆಗೆ ಪರಿಚಯಿಸಿದೆ.

ಬಡವರ ಬೋನ್ಸಾಯಿ ಎಂದೇ ಹೆಸರು ಪಡೆದಿರುವ ಕೊಕೆಡಾಮ ಮನೆಯ ಅಂದವನ್ನು ಹೆಚ್ಚಿಸುವುದಲ್ಲದೆ ಯಥೇಚ್ಛ ಆಮ್ಲಜನಕವನ್ನು ನೀಡಿ ಆರೋಗ್ಯವನ್ನು ವೃದ್ಧಿಸುತ್ತದೆ. ಇದನ್ನು ಮನೆಯ ಯಾವುದೇ ಭಾಗದಲ್ಲೂ ಬೆಳೆಸಬಹುದಾಗಿದ್ದು, ಡೈನಿಂಗ್ ಟೇಬಲ್, ಬಾಲ್ಕನಿ, ಟಿವಿ ಯುನಿಟ್‌ಗಳಲ್ಲಿಟ್ಟು ಮನೆಯ ಸೌಂದರ್ಯವನ್ನು ಹೆಚ್ಚ್ಚಿಸ ಬಹುದಾಗಿದೆ. ಅಲ್ಲದೆ ಪರಿಸರ ಸ್ನೇಹಿಯಾಗಿರುವ ಕೊಕೆಡಾಮವನ್ನು ಸಭೆ ಸಮಾರಂಭಗಳಲ್ಲಿಯೂ ಸ್ಮರಣಿಕೆಯಾಗಿ ನೀಡಬಹುದಾಗಿದೆ. ಪಾಸ್ಟಿಕ್ ಮುಕ್ತಗೊಳಿಸುವ ನಿಟ್ಟಿನಲ್ಲಿ ಕುಡಿದ ಬೊಂಡ, ಬಿದಿರಿನಲ್ಲಿ ಗಿಡಗಳನ್ನು ಬೆಳೆಸುವ ಮೂಲಕ ಸದಾ ಹೊಸತನದ ಹೆಜ್ಜೆ ಇಡುತ್ತಿರುವ ಅನ್ನಪೂರ್ವ ನರ್ಸರಿ ಈ ಹೊಸ ವಿಧಾನವನ್ನು ಪ್ರಯೋಗಾತ್ಮಕವಾಗಿ ಪರಿಚಯಿಸಿದ್ದು, ಪ್ರಸನ್ನ ಪ್ರಸಾದ್ ಇದರ ರೂವಾರಿಯಾಗಿದ್ದಾರೆ. ವಾಟ್ಸಾಪ್‌ನಲ್ಲಿ ಬಂದ ಸಂದೇಶದಲ್ಲಿ ಕೊಕೆಡಾಮವನ್ನು ನೋಡಿ ಆಸಕ್ತಿ ಬೆಳೆಯಿತು. ಅದಕ್ಕಾಗಿ ಇಂಟರ್‌ನೆಟ್‌ನಲ್ಲಿ ತಡಕಾಡಿದಾಗ ಕೇರಳ, ತಮಿಳುನಾಡಿನಲ್ಲಿ ಈ ಕಲೆ ಜನಪ್ರಿಯ ಆಗಿರುವುದು ತಿಳಿದುಬಂತು. ಕರ್ನಾಟಕದಲ್ಲಿ ನನ್ನದೇ ಮೊದಲ ಪ್ರಯತ್ನವಾಗಿದೆ. ಎರಡು ತಿಂಗಳ ಹಿಂದೆ ಈ ಯೋಜನೆ ಹಾಕಿಕೊಂಡಿದ್ದೆ. ಒಂದು ತಿಂಗಳ ಹಿಂದೆ ತಯಾರಿಸಿದ ಗಿಡ ಯಶಸ್ವಿಯಾಗಿ ಬೆಳೆದಿರುವ ಹಿನ್ನೆಲೆಯಲ್ಲಿ ಮುಂದುವರಿಸುತ್ತಿದ್ದೇನೆ ಎಂದು ಪ್ರಸನ್ನ ಪ್ರಸಾದ್ ತಿಳಿಸಿದರು.

ಅಲಂಕಾರಿಕ ಗಿಡಗಳಲ್ಲಿ ಕೊಕೆಡಾಮ: ಸದ್ಯ ಕೊಕೆಡಾಮ ಕಲೆಯಲ್ಲಿ ಅಲಂಕಾರಿಕ ಗಿಡಗಳನ್ನು ಮಾತ್ರ ಬಳಸಿಕೊಳ್ಳಲಾಗಿದೆ. ಇಲ್ಲಿನ ವಾತಾವರಣಕ್ಕೆ ಬೇರೆ ಗಿಡಗಳನ್ನು ಬೆಳೆಸುವುದು ಕಷ್ಟವಾಗುವುದನ್ನು ಮನಗಂಡ ಪ್ರಸನ್ನ ಪ್ರಸಾದ್, ಆಯ್ದ ಗಿಡಗಳನ್ನು ಮಾತ್ರ ಕೈಗೆತ್ತಿಕೊಂಡಿದ್ದಾರೆ. ಇತರ ಗಿಡಗಳನ್ನು ಈ ಕಲೆಯಲ್ಲಿ ಬೆಳೆಸುವ ಇರಾದೆ ಕೂಡ ಹೊಂದಿರುವ ಅವರು, ಆ ಬಗ್ಗೆ ಮುಂದೆ ಪ್ರಯೋಗ ಮಾಡಲು ಯೋಜನೆ ಹಾಕಿಕೊಂಡಿದ್ದಾರೆ. ಪ್ರಸಕ್ತ ಕಡಿಮೆ ಬೇರು ಮತ್ತು ಗಟ್ಟಿಯಾದ ಗಿಡಗಳನ್ನು ಮಾತ್ರ ಬಳಸಿಕೊಳ್ಳುತ್ತಿದ್ದಾರೆ.

ಸಸಿಯ ಬೇರಿಗೆ ತೆಂಗಿನ ನಾರಿನ ಕಾಂಪೋಸ್ಟ್ ಹುಡಿಯನ್ನು ಹಾಕಿ, ಅದರ ಮೇಲೆ ಜೇಡಿ ಮಣ್ಣಿನಿಂದ ಮುಚ್ಚಲಾಗುತ್ತದೆ. ನಂತರ ಕಾಟನ್ ಬಟ್ಟೆಯನ್ನು ಸುತ್ತಿ, ಅದರ ಮೇಲೆ ‘ಸ್ಫಗ್ನಮ್ ಮೋಸ್’ ಪಾಚಿಯನ್ನು ಹಚ್ಚಲಾಗುತ್ತದೆ. ತದ ನಂತರ ಇಡೀ ಪಾಚಿಯ ಉಂಡೆಯನ್ನು ಸಣ್ಣ ಹಗ್ಗದಿಂದ ಬಿಗಿದು ಕಟ್ಟಲಾಗುತ್ತದೆ. ಇದಕ್ಕೆ ಮರದಲ್ಲಿ ಬರುವ ಪಾಚಿಗಳನ್ನು ಕೂಡ ಬಳಸಲಾಗುತ್ತದೆ. ಮುಂದೆ ಪಾಚಿಯಲ್ಲಿ ಅತಿ ಸಣ್ಣ ಗಾತ್ರದ ಗಿಡಗಳು ಬೆಳೆದು ಇಡೀ ಕೊಕೆಡಾಮದ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸುತ್ತದೆ.

ಇದಕ್ಕೆ ಅತ್ಯಂತ ಕಡಿಮೆ ನೀರು ಸಾಕಾಗುತ್ತದೆ. ನಿರ್ವಹಣೆ ಕೂಡ ತುಂಬಾ ಕಡಿಮೆಯಾಗಿದ್ದು, ಫ್ಲಾಟ್‌ಗಳಲ್ಲಿಯೂ ಬಳಸಿಕೊಳ್ಳಬಹುದು. ಕೊಕೆಡಾಮವನ್ನು ಎರಡು ದಿನಗಳಿಗ್ಕೊಮ್ಮೆ ಅರ್ಧ ಬಕೆಟ್ ನೀರಿನಲ್ಲಿ ಅದ್ದಿ ತೆಗೆದರೆ ಸಾಕಾಗುತ್ತದೆ. ಅದು ಬಿಟ್ಟರೆ ಇದಕ್ಕೆ ಬೇರೆ ನೀರಿನ ಅವಶ್ಯಕತೆ ಇರುವುದಿಲ್ಲ. ಇದರಿಂದ ನೀರಿನ ದುರ್ಬಳಕೆಯನ್ನು ಕೂಡ ತಡೆಯಬಹುದಾಗಿದೆ. ಪಾಚಿಯಲ್ಲಿರುವ ನೀರಿನ ತೇವಾಂಶದಿಂದಲೇ ಈ ಗಿಡ ಬೆಳೆಯುತ್ತದೆ. ಗಿಡದ ಬೇರು ಕೂಡ ಉದ್ದ ಬೆಳೆಯುವುದಿಲ್ಲ. ಬೇರು ಜೇಡಿಮಣ್ಣಿನೊಳಗೆಯೇ ಇರುತ್ತದೆ. ಹೀಗಾಗಿ ಈ ಗಿಡದ ಬೆಳವಣಿಗೆ ತುಂಬಾ ನಿಧಾನವಾಗಿರುತ್ತದೆ ಎಂದು ಪ್ರಸನ್ನ ಪ್ರಸಾದ್ ತಿಳಿಸಿದರು.

ನರ್ಸರಿ ನನ್ನ ಆಸಕ್ತಿ ಕ್ಷೇತ್ರ. ಇದರಲ್ಲಿ ಹೊಸತನ ಮಾಡಬೇಕೆಂಬ ಆಸಕ್ತಿಯಿಂದಾಗಿ ಕೊಕೆಡಾಮ ತಯಾರಿಸಿದ್ದೇನೆ. ಇದೀಗ ಇದರಲ್ಲಿ ಯಶಸ್ವಿಯಾಗಿದ್ದು, ಈವರೆಗೆ ಒಟ್ಟು 125 ಕೊಕೆಡಾಮಗಳನ್ನು ರಚಿಸಿದ್ದೇನೆ. ಇದಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದು ಹೊಸ ಮಾದರಿಯ ಗಿಡ ಆಗಿರುವುದರಿಂದ ಇನ್ನಷ್ಟೆ ಜನಪ್ರಿಯವಾಗಬೇಕಾಗಿದೆ.

-ಪ್ರಸನ್ನ ಪ್ರಸಾದ್,

ಕೊಕೆಡಾಮದ ರೂವಾರಿ

10 ಬಗೆ ಇಂಡೋರ್ ಪ್ಲಾಂಟ್ಸ್

ಪೈಕಾಸ್, ಕ್ಯಾಕ್ಟಸ್, ರಿಬ್ಬನ್ ಗ್ರಾಸ್ ಸೇರಿದಂತೆ ಸುಮಾರು 10 ಬಗೆಯ ಇಂಡೋರ್ ಪ್ಲಾಂಟ್ಸ್ ಗಳನ್ನು ಕೊಕೆಡಾಮದಲ್ಲಿ ರಚಿಸಲಾಗಿದೆ. ಇದಕ್ಕೆ ಚಟ್ಟಿಯ ಬದಲು ಬಿದಿರು, ಪೇಪರ್ ಕಪ್, ಸೆಣಬಿನ ಚೀಲ ಮತ್ತು ಬೊಂಡಗಳನ್ನು ಬಳಸಿಕೊಳ್ಳಲಾಗಿದೆ. ಈ ಗಿಡವನ್ನು ತಿಂಗಳಿಗೊಮ್ಮೆ ನೀರಿನಲ್ಲಿ ಕರಗುವ ಗೊಬ್ಬರ ಅಥವಾ ಗಂಜಳವನ್ನು 1:10ರ (ಗಂಜಳ: ನೀರು) ಪ್ರಮಾಣದಲ್ಲಿ ತೆಳುಮಾಡಿ ಅದ್ದಿ ತೆಗೆಯಬೇಕು. ಕ್ಯಾಕ್ಟಸ್ ಗಿಡವನ್ನು 10 ದಿನಗಳಿಗೊಮ್ಮೆ ನೀರಿನಲ್ಲಿ ಅದ್ದಿ ತೆಗೆದರೆ ಸಾಕಾಗುತ್ತದೆ. 150 ರೂ.ನಿಂದ 500 ರೂ.ವರೆಗಿನ ಮೊತ್ತದ ಕೊಕೆಡಾಮ ಇವರಲ್ಲಿ ಲಭ್ಯವಿದೆ.

 

 

 

 

Writer - ನಝೀರ್ ಪೊಲ್ಯ

contributor

Editor - ನಝೀರ್ ಪೊಲ್ಯ

contributor

Similar News