ಗಾಂಧೀಜಿ ರಾಷ್ಟ್ರಪುತ್ರ ಎಂದ ಪ್ರಜ್ಞಾ ಸಿಂಗ್

Update: 2019-10-21 14:26 GMT

ಭೋಪಾಲ, ಅ.21: ತನ್ನ ಹೇಳಿಕೆಗಳಿಂದ ಆಗಿಂದಾಗ್ಗೆ ಪಕ್ಷಕ್ಕೆ ಮುಜುಗುರ ಉಂಟು ಮಾಡುತ್ತಿರುವ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಮಹಾತ್ಮಾ ಗಾಂಧೀಜಿಯವರನ್ನು ರಾಷ್ಟ್ರಪಿತ ಎನ್ನುವ ಬದಲು ರಾಷ್ಟ್ರಪುತ್ರ ಎಂದು ಕರೆದಿದ್ದಾರೆ.

ಭೋಪಾಲದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಪ್ರಜ್ಞಾ ಸಿಂಗ್, ರಾಷ್ಟ್ರಪುತ್ರನಾಗಿರುವ ಮಹಾತ್ಮಾ ಗಾಂಧೀಜಿಯವರನ್ನು ಸದಾಕಾಲ ಪ್ರೀತಿ ಮತ್ತು ಗೌರವದಿಂದ ಕಾಣಬೇಕು ಎಂದು ಹೇಳಿದರು. ಮಹಾತ್ಮಾ ಗಾಂಧೀಜಿಯವರ 150ನೇ ಜನ್ಮದಿನಾಚರಣೆ ಪ್ರಯುಕ್ತ ಬಿಜೆಪಿ ಪಕ್ಷ ದೇಶದಾದ್ಯಂತ ಗಾಂಧಿ ಸಂಕಲ್ಪ ಯಾತ್ರೆ ಆಯೋಜಿಸುತ್ತಿದೆ. ಆದರೆ ಇದುವರೆಗೆ ಯಾವುದೇ ಕಾರ್ಯಕ್ರಮದಲ್ಲಿ ಪ್ರಜ್ಞಾ ಸಿಂಗ್ ಪಾಲ್ಗೊಂಡಿಲ್ಲ.

ಈ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, “ಗಾಂಧೀಜಿ ರಾಷ್ಟ್ರದ ಪುತ್ರನಾಗಿದ್ದಾರೆ. ನಾನು ಅವರ ಅಭಿಮಾನಿ. ಇದಕ್ಕಿಂತ ಹೆಚ್ಚಿನ ವಿವರಣೆ ನೀಡುವ ಅಗತ್ಯವಿಲ್ಲ ಎಂದು ಭಾವಿಸುತ್ತೇನೆ” ಎಂದು ಉತ್ತರಿಸಿದ್ದಾರೆ. “ದೇಶಕ್ಕಾಗಿ ಕೆಲಸ ಮಾಡಿದವರನ್ನು ನಾನು ಮೆಚ್ಚುತ್ತೇನೆ. ಮಹಾತ್ಮಾ ಗಾಂಧೀಜಿ ಹಾಕಿಕೊಟ್ಟ ದಾರಿಯಲ್ಲಿ ನಾನು ಸಾಗುತ್ತೇನೆ. ನಮಗೆ ಮಾರ್ಗದರ್ಶನ ನೀಡಿದವರನ್ನು ನಾವು ಪ್ರಶಂಸಿಸಬೇಕು” ಎಂದವರು ಹೇಳಿದ್ದಾರೆ.

2019ರ ಸಾರ್ವತ್ರಿಕ ಚುನಾವಣೆಯ ಸಂದರ್ಭ ಪ್ರಜ್ಞಾ ಸಿಂಗ್, ನಾಥೂರಾಮ್ ಗೋಡ್ಸೆಯನ್ನು ದೇಶಭಕ್ತ ಎಂದು ಬಣ್ಣಿಸಿದ್ದರು. ಇದು ವಿವಾದಕ್ಕೆ ಕಾರಣವಾಗುತ್ತಿದ್ದಂತೆಯೇ ಬಿಜೆಪಿ ಪಕ್ಷ ಅವರಿಗೆ ಶೋಕಾಸ್ ನೋಟಿಸ್ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News