ಜಮ್ಮು-ಕಾಶ್ಮೀರ: ಆಗಸ್ಟ್‌ನಿಂದೀಚಿಗೆ ಅರಣ್ಯ ಭೂಮಿಯಲ್ಲಿ 125 ಯೋಜನೆಗಳಿಗೆ ಅಸ್ತು

Update: 2019-10-21 14:51 GMT

ಹೊಸದಿಲ್ಲಿ,ಅ.21: ಜಮ್ಮು-ಕಾಶ್ಮೀರ ಆಡಳಿತದ ಅರಣ್ಯ ಸಲಹಾ ಸಮಿತಿಯು ಈ ವರ್ಷದ ಆಗಸ್ಟ್ ಮತ್ತು ಅಕ್ಟೋಬರ್ ನಡುವಿನ ಅವಧಿಯಲ್ಲಿ ಇತರ ಉದ್ದೇಶಗಳಿಗಾಗಿ ಅರಣ್ಯ ಭೂಮಿಯ ಪರಿವರ್ತನೆಯನ್ನೊಳಗೊಂಡ 125 ಯೋಜನೆಗಳಿಗೆ ಅನುಮತಿ ನೀಡಿದೆ. 2018ರಲ್ಲಿ ಇಂತಹ ಕೇವಲ 97 ಯೋಜನೆಗಳಿಗೆ ಹಸಿರು ನಿಶಾನೆ ತೋರಿಸಲಾಗಿತ್ತು.

  ಆಗಸ್ಟ್‌ನಿಂದೀಚಿಗೆ ಅರಣ್ಯ ಸಲಹಾ ಸಮಿತಿಯ ಮೂರು ಸಭೆಗಳು ನಡೆದಿದ್ದು,ಇವುಗಳಲ್ಲಿ ಒಟ್ಟು 125 ಯೋಜನೆಗಳಿಗೆ ಅನುಮತಿಯನ್ನು ನೀಡಲಾಗಿದೆ. ಈ ಶಿಫಾರಸುಗಳನ್ನು ಜಮ್ಮು-ಕಾಶ್ಮೀರ ಸಂಪುಟಕ್ಕೆ ಸಲ್ಲಿಸಲಾಗುವುದು ಮತ್ತು ಅಲ್ಲಿ ಅಂತಿಮಗೊಳ್ಳಲಿವೆ ಎಂದು ರಾಜ್ಯದ ಅರಣ್ಯ,ಪರಿಸರ ಮತ್ತು ಪರಿಸರ ವಿಜ್ಞಾನ ಇಲಾಖೆಯ ಆಯುಕ್ತ ಕಾರ್ಯದರ್ಶಿ ಮನೋಜ ಕುಮಾರ ಅವರು ಹೇಳಿರುವುದನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

ಕೇಂದ್ರ ಸರಕಾರವು ಆ.5ರಂದು ಸಂವಿಧಾನದ ವಿಧಿ 370ರಡಿ ಜಮ್ಮು-ಕಾಶ್ಮೀರಕ್ಕೆ ಒದಗಿಸಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿತ್ತು. ಆ ಸಂದರ್ಭದಲ್ಲಿ ರಾಜ್ಯದಲ್ಲಿ ಕರ್ಫ್ಯೂ ಸದೃಶ ಸ್ಥಿತಿಯನ್ನು ಹೇರಲಾಗಿದ್ದು, ನಿರ್ಬಂಧಗಳನ್ನು ನಿಧಾನವಾಗಿ ಸಡಿಲಿಸಲಾಗುತ್ತಿದೆ.

ಜಮ್ಮು-ಕಾಶ್ಮೀರ ಅರಣ್ಯ (ಸಂರಕ್ಷಣೆ) ಕಾಯ್ದೆ,1997ರಡಿ ಜಮ್ಮು-ಕಾಶ್ಮೀರವು ಪ್ರತ್ಯೇಕ ಅರಣ್ಯ ಸಲಹಾ ಸಮಿತಿಯನ್ನು ಹೊಂದಿದೆ. ಈ ಸಮಿತಿಯು ಶಿಫಾರಸುಗಳನ್ನು ಮಾಡುತ್ತದೆ ಮತ್ತು ಅವುಗಳನ್ನು ಜಮ್ಮು-ಕಾಶ್ಮೀರ ಸಂಪುಟವು ಒಪ್ಪಿಕೊಳ್ಳಬಹುದು ಇಲ್ಲವೇ ತಿರಸ್ಕರಿಸಬಹುದು. ಆದರೆ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತವಿರುವುದರಿಂದ ಶಿಫಾರಸುಗಳನ್ನು ಜಾರಿಗೊಳಿಸಲು ರಾಜ್ಯಪಾಲ ಸತ್ಯಪಾಲ ಮಲಿಕ್ ಅವರ ಒಪ್ಪಿಗೆ ಮಾತ್ರ ಸಾಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News