ಅಯೋಧ್ಯೆ ಪ್ರಕರಣ: ಲಿಖಿತ ಟಿಪ್ಪಣಿ ಸಲ್ಲಿಸಲು ಮುಸ್ಲಿಂ ಕಕ್ಷಿದಾರರಿಗೆ ಅವಕಾಶ ನೀಡಿದ ಸುಪ್ರೀಂ

Update: 2019-10-21 14:55 GMT

ಹೊಸದಿಲ್ಲಿ,ಅ.21: ಅಯೋಧ್ಯೆ ವಿವಾದ ಪ್ರಕರಣದಲ್ಲಿ ತಮ್ಮ ಲಿಖಿತ ಟಿಪ್ಪಣಿಯನ್ನು ಸಲ್ಲಿಸಲು ಉತ್ತರ ಪ್ರದೇಶ ಸುನ್ನಿ ವಕ್ಫ್ ಮಂಡಳಿ ಸೇರಿದಂತೆ ಮುಸ್ಲಿಂ ಕಕ್ಷಿದಾರರಿಗೆ ಸರ್ವೋಚ್ಚ ನ್ಯಾಯಾಲಯವು ಸೋಮವಾರ ಅನುಮತಿಯನ್ನು ನೀಡಿತು. ನ್ಯಾಯಾಲಯದ ತೀರ್ಪು ದೇಶದ ಭವಿಷ್ಯದ ರಾಜಕೀಯದ ಮೇಲೆ ಪರಿಣಾಮಗಳನ್ನು ಬೀರಲಿದೆ ಎಂದು ಮುಸ್ಲಿಂ ಕಕ್ಷಿದಾರರು ಈ ಟಿಪ್ಪಣಿಯಲ್ಲಿ ನಿವೇದಿಸಿಕೊಂಡಿದ್ದಾರೆ.

ವಿವಾದಕ್ಕೆ ಪರಿಹಾರ ರೂಪಿಸುವ ಕುರಿತು ತಮ್ಮ ಲಿಖಿತ ಟಿಪ್ಪಣಿಯನ್ನು ಐವರು ನ್ಯಾಯಾಧೀಶರ ಸಂವಿಧಾನದ ಪೀಠದ ಅವಗಾಹನೆಗಾಗಿ ದಾಖಲೆಗಳಲ್ಲಿ ಸೇರಿಸಲು ತಮಗೆ ಅವಕಾಶ ನೀಡಬೇಕು ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಮೂವರು ನ್ಯಾಯಾಧೀಶರ ಪೀಠವನ್ನು ಕೋರಿಕೊಂಡ ಮುಸ್ಲಿಂ ಕಕ್ಷಿದಾರರ ಪರ ವಕೀಲರು,ಮುಚ್ಚಿದ ಲಕೋಟೆಯಲ್ಲಿ ಟಿಪ್ಪಣಿಯನ್ನು ಸಲ್ಲಿಸಲು ವಿವಿಧ ಕಕ್ಷಿದಾರರಿಂದ ಮತ್ತು ಸರ್ವೋಚ್ಚ ನ್ಯಾಯಾಲಯದ ರಿಜಿಸ್ಟ್ರಿಯಿಂದ ಆಕ್ಷೇಪ ವ್ಯಕ್ತವಾಗಿದ್ದು,ರವಿವಾರ ಎಲ್ಲ ಕಕ್ಷಿದಾರರಿಗೆ ಲಿಖಿತ ಟಿಪ್ಪಣಿಯ ಪ್ರತಿಗಳನ್ನು ಸಲ್ಲಿಸಲಾಗಿದೆ ಎಂದು ತಿಳಿಸಿದರು.

ತಮ್ಮ ಟಿಪ್ಪಣಿಯನ್ನು ದಾಖಲಿಸಿಕೊಳ್ಳುವಂತೆ ರಿಜಿಸ್ಟ್ರಿಗೆ ನಿರ್ದೇಶ ನೀಡುವಂತೆ ಪೀಠವನ್ನು ಕೋರಿದರು. ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲಾದ ಲಿಖಿತ ಟಿಪ್ಪಣಿಯಲ್ಲಿಯ ವಿಷಯವು ಈಗಾಗಲೇ ಮಾಧ್ಯಮಗಳಲ್ಲಿ ವರದಿಯಾಗಿದೆ ಎಂದು ನ್ಯಾಯಾಲಯವು ಬೆಟ್ಟು ಮಾಡಿತು.

 ರಾಜಕೀಯವಾಗಿ ಸೂಕ್ಷ್ಮವಾಗಿರುವ ಅಯೋಧ್ಯೆ ಪ್ರಕರಣದಲ್ಲಿ 40 ದಿನಗಳ ಕಾಲ ವಿಚಾರಣೆಯನ್ನು ನಡೆಸಿದ ಬಳಿಕ ಅ.16ರಂದು ಸಂವಿಧಾನ ಪೀಠವು ತನ್ನ ತೀರ್ಪನ್ನು ಕಾಯ್ದಿರಿಸಿದೆ.

ಮುಚ್ಚಿದ ಲಕೋಟೆಯಲ್ಲಿ ತಮ್ಮ ಲಿಖಿತ ಟಿಪ್ಪಣಿಯನ್ನು ಸಂವಿಧಾನ ಪೀಠದ ಅವಗಾಹನೆಗೆ ಸಲ್ಲಿಸಿದ ಮುಸ್ಲಿಂ ಕಕ್ಷಿದಾರರು ಬಳಿಕ ಸಾರ್ವಜನಿಕ ಹೇಳಿಕೆಯೊಂದನ್ನೂ ಹೊರಡಿಸಿದ್ದಾರೆ.

  ಸರ್ವೋಚ್ಚ ನ್ಯಾಯಾಲಯದ ತೀರ್ಪು ಏನೇ ಆಗಿದ್ದರೂ ಅದು ಭವಿಷ್ಯದ ಪೀಳಿಗೆಗಳ ಮೇಲೆ ಪರಿಣಾಮಗಳನ್ನು ಬೀರಲಿದೆ. ಅದು ದೇಶದ ಭವಿಷ್ಯದ ರಾಜಕೀಯದ ಮೇಲೂ ಪರಿಣಾಮಗಳನ್ನು ಬೀರಲಿದೆ ಎಂದು ಹೇಳಿರುವ ಮುಸ್ಲಿಂ ಕಕ್ಷಿದಾರರ ಪರ ವಕೀಲ ರಾಜೀವ ಧವನ್ ಅವರು ಸಿದ್ಧಪಡಿಸಿರುವ ಟಿಪ್ಪಣಿಯು,ಈ ನ್ಯಾಯಾಲಯದ ನಿರ್ಧಾರವು ಈ ದೇಶದ ಪ್ರಜೆಗಳಾಗಿರುವ ಮತ್ತು ಸಂವಿಧಾನದ ವೌಲ್ಯಗಳಲ್ಲಿ ನಂಬಿಕೆಯನ್ನು ಹೊಂದಿರುವ ಮಿಲಿಯಾಂತರ ಜನರ ಮನಸ್ಸುಗಳ ಮೇಲೆ ಪರಿಣಾಮ ಬೀರಬಹುದು. ತೀರ್ಪು ದೂರಗಾಮಿ ಪರಿಣಾಮಗಳನ್ನು ಹೊಂದಿರುವುದರಿಂದ ನ್ಯಾಯಾಲಯವು ಸಂವಿಧಾನ ವೌಲ್ಯಗಳನ್ನು ಪ್ರತಿಬಿಂಬಿಸುವ ರೀತಿಯಲ್ಲಿ ಪರಿಹಾರವನ್ನು ರೂಪಿಸುತ್ತದೆ ಎಂದು ನಾವು ಆಶಿಸಿದ್ದೇವೆ. ಮುಂದಿನ ಪೀಳಿಗೆಯು ತನ್ನ ಐತಿಹಾಸಿಕ ತೀರ್ಪನ್ನು ಹೇಗೆ ನೋಡಲಿದೆ ಎನ್ನುವುದನ್ನೂ ನ್ಯಾಯಾಲಯವು ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News