ಕರ್ತಾರ್ಪುರ ಕಾರಿಡಾರ್: ಒಪ್ಪಂದಕ್ಕೆ ಸಹಿ ಹಾಕಲು ಭಾರತ ಸಿದ್ಧ

Update: 2019-10-21 16:41 GMT

ಹೊಸದಿಲ್ಲಿ, ಅ. 20: ಪಾಕಿಸ್ತಾನದ ನಾರೋವಾಲ್ ಜಿಲ್ಲೆಯಲ್ಲಿರುವ ಗುರುದ್ವಾರ್ ಕರ್ತಾರ್ಪುರ ಸಾಹಿಬ್‌ಗೆ ಭೇಟಿ ನೀಡುವ ಪ್ರತಿ ಯಾತ್ರಿಯ ಮೇಲೆ ರೂ. 1,417 ಸೇವಾ ಶುಲ್ಕ ವಿಧಿಸುವುದನ್ನು ರದ್ದುಗೊಳಿಸುವುದಕ್ಕೆ ಪಾಕಿಸ್ತಾನ ನಿರಾಕರಿಸುತ್ತಿರುವ ಹೊರತಾಗಿಯೂ ಪಾಕಿಸ್ತಾನದೊಂದಿಗೆ ಕರ್ತಾಪುರ ಕಾರಿಡರ್ ಒಪ್ಪಂದಕ್ಕೆ ಬುಧವಾರ ಸಹಿ ಹಾಕಲಾಗುವುದು ಎಂದು ಭಾರತ ಸರಕಾರ ಸೋಮವಾರ ಹೇಳಿದೆ.

ಸೇವಾ ಶುಲ್ಕ ವಿಧಿಸುವುದಾಗಿ ಪಾಕಿಸ್ತಾನ ಸರಕಾರ ಹೇಳುತ್ತಿರುವುದು ಕಳವಳಕಾರಿ ವಿಚಾರ. ಯಾತ್ರಿಗಳ ಇಚ್ಛೆಗೆ ವಿರುದ್ಧವಾಗಿ ಇಂತಹ ಶುಲ್ಕಗಳನ್ನು ವಿಧಿಸಬಾರದು ಎಂದು ಭಾರತ ಪಾಕಿಸ್ತಾನವನ್ನು ನಿರಂತರ ಒತ್ತಾಯಿಸುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹೇಳಿಕೆ ತಿಳಿಸಿದೆ.

‘‘ಗುರುದ್ವಾರ ಕರ್ತಾರ್ಪುರ ಸಾಹಿಬ್‌ಗೆ ವಿಸಾ ಮುಕ್ತವಾಗಿ ತೆರಳಲು ಅವಕಾಶ ದೊರೆಯಬೇಕು ಎಂಬ ಯಾತ್ರಿಗಳ ದೀರ್ಘ ಕಾಲದ ಬೇಡಿಕೆ ಹಾಗೂ 2019 ನವೆಂಬರ್ 12ರಂದು ನಡೆಯಲಿರುವ ಗುರು ನಾನಕ್ ಅವರ 550ನೇ ಜನ್ಮ ದಿನಾಚರಣೆ ಮುನ್ನ ಕಾರಿಡರ್ ಕಾರ್ಯಾಚರಣೆ ಆರಂಭಿಸುವ ಆಸಕ್ತಿಯ ಹಿನ್ನೆಲೆಯಲ್ಲಿ 2019 ಅಕ್ಟೋಬರ್ 23ರಂದು ಕರ್ತಾರ್ಪುರ ಸಾಹಿಬ್ ಕಾರಿಡರ್ ಒಪ್ಪಂದಕ್ಕೆ ಸಹಿ ಹಾಕಲು ಸಿದ್ಧ ಎಂದು ಸರಕಾರ ಇಂದು ಪಾಕಿಸ್ತಾನಕ್ಕೆ ತಿಳಿಸಿದೆ’’ ಎಂದು ಸಚಿವಾಲಯ ಹೇಳಿದೆ.

ಯಾತ್ರಿಗಳಿಗೆ ಶುಲ್ಕ ವಿಧಿಸುವ ನಿರ್ಧಾರ ಮರು ಪರಿಶೀಲಿಸುವಂತೆ ಪಾಕಿಸ್ತಾನದಲ್ಲಿ ಮತ್ತೊಮ್ಮೆ ಮನವಿ ಮಾಡಲಾಗಿದೆ. ಒಪ್ಪಂದವನ್ನು ತಿದ್ದುಪಡಿ ಮಾಡಲು ಭಾರತ ಯಾವುದೇ ಸಮಯದಲ್ಲಿ ಸಿದ್ಧ ಎಂದು ಸಚಿವಾಲಯ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News