ಕೊಚ್ಚಿ ಹೋದ ತೂಗು ಸೇತುವೆಯ ಪುನರ್ ನಿರ್ಮಾಣಕ್ಕೆ ಕ್ರಮ: ಸಚಿವ ಆರ್. ಅಶೋಕ್

Update: 2019-10-21 18:16 GMT

ಉಪ್ಪಿನಂಗಡಿ: ಈ ಬಾರಿಯ ನೇತ್ರಾವತಿ ನದಿ ನೆರೆ ನೀರಿಗೆ ಕೊಚ್ಚಿ ಹೋಗಿರುವ ತೂಗು ಸೇತುವೆಯನ್ನು ಶೀಘ್ರವಾಗಿ ಪುನರ್ ನಿರ್ಮಾಣ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದರು.

ಆಗಸ್ಟ್ ತಿಂಗಳ ಮೊದಲ ವಾರ ಸುರಿದ ಭಾರೀ ಮಳೆ ಮತ್ತು ನೆರೆ ಪ್ರವಾಹಕ್ಕೆ ಕೊಚ್ಚಿ ಹೋಗಿರುವ ಮುಗೇರಡ್ಕ-ಬೆದ್ರೋಡಿ ತೂಗು ಸೇತುವೆಯ ಬಳಿ ನೇತ್ರಾವತಿ ನದಿ ದಡಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ ಅವರು ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಇಲ್ಲಿಗೆ ಶಾಶ್ವತ ಸೇತುವೆ ನಿರ್ಮಿಸಬೇಕೆಂಬ ಪ್ರಸ್ತಾಪ ಸ್ಥಳೀಯರದ್ದಾಗಿದೆ. ಆದರೆ, ಸೇತುವೆ ನಿರ್ಮಾಣಕ್ಕೆ ಕನಿಷ್ಠ 5 ವರ್ಷಗಳು ಬೇಕಾಗುತ್ತದೆ. ಈ ಭಾಗದ ಗ್ರಾಮಸ್ಥರು, ವಿದ್ಯಾರ್ಥಿಗಳು ಈ ಸೇತುವೆಯನ್ನು ಅವಲಂಭಿಸಿರುವುದರಿಂದ ಇಲ್ಲಿ ಎರಡು ಗ್ರಾಮಗಳ ಸಂಪರ್ಕಕ್ಕೆ ತಕ್ಷಣದ ಕ್ರಮದ ಅಗತ್ಯವಿದ್ದು, ಆದ್ಯತೆ ನೆಲೆಯಲ್ಲಿ ಇಲ್ಲಿ ತೂಗು ಸೇತುವೆ ನಿರ್ಮಿಸಲು ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.

ಈ ಸಂದರ್ಭ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಸಂಜೀವ ಮಠಂದೂರು, ಹರೀಶ್ ಪೂಂಜ, ವೇದವ್ಯಾಸ ಕಾಮತ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಮೀನಾಕ್ಷಿ ಶಾಂತಿಗೋಡು, ಪುತ್ತೂರು ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News