ಕ್ಲೀನ್ ಸ್ವೀಪ್ ಸಾಧನೆಯ ಹೊಸ್ತಿಲಲ್ಲಿ ಕೊಹ್ಲಿ ಪಡೆ

Update: 2019-10-21 18:24 GMT

3ನೇ ಟೆಸ್ಟ್

ರಾಂಚಿ,ಅ.21: ಮುಹಮ್ಮದ್ ಶಮಿ ಹಾಗೂ ಉಮೇಶ್ ಯಾದವ್ ನೇತೃತ್ವದ ಭಾರತದ ಶಿಸ್ತುಬದ್ಧ ಬೌಲಿಂಗ್ ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್‌ಗಳು ಮೂರನೇ ಟೆಸ್ಟ್ ಪಂದ್ಯದಲ್ಲಿ ಮತ್ತೊಮ್ಮೆ ದಯನೀಯ ವೈಫಲ್ಯ ಅನುಭವಿಸಿದ್ದಾರೆ. ಹರಿಣ ಪಡೆ ವಿರುದ್ಧ ತನ್ನ ಪ್ರಾಬಲ್ಯ ಮುಂದುವರಿಸಿದ ಕೊಹ್ಲಿ ಬಳಗಕ್ಕೆ 3 ಪಂದ್ಯಗಳ ಟೆಸ್ಟ್ ಸರಣಿಯನ್ನು 3-0 ಅಂತರದಿಂದ ವಶಪಡಿಸಿಕೊಂಡು ಕ್ಲೀನ್‌ಸ್ವೀಪ್ ಸಾಧಿಸಲು ಇನ್ನು ಕೇವಲ 2 ವಿಕೆಟ್‌ಗಳ ಅಗತ್ಯವಿದೆ.

ಪಂದ್ಯದ ಮೂರನೇ ದಿನವಾದ ಸೋಮವಾರ ದಕ್ಷಿಣ ಆಫ್ರಿಕಾದ 16 ವಿಕೆಟ್‌ಗಳು ಪತನಗೊಂಡವು.ಶಮಿ ಹಾಗೂ ಯಾದವ್ ಹರಿಣ ಪಡೆಗೆ ಭಾರೀ ಆಘಾತ ನೀಡಿದರು. ಉರಿವೇಗದಲ್ಲಿ ಬೌಲಿಂಗ್ ಮಾಡಿದ ಶಮಿ-ಯಾದವ್ ಜೋಡಿ ದ.ಆಫ್ರಿಕಾ ದಾಂಡಿಗರಿಗೆ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲದಂತೆ ನೋಡಿಕೊಂಡಿತು. ಮತ್ತೊಂದು ಹೀನಾಯ ಸೋಲಿನತ್ತ ಮುಖ ಮಾಡಿರುವ ಪ್ಲೆಸಿಸ್ ಪಡೆ ದಿನದಾಟದಂತ್ಯಕ್ಕೆ 2ನೇ ಇನಿಂಗ್ಸ್‌ನಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 132 ರನ್ ಗಳಿಸಿದೆ. ಭಾರತ ನಾಲ್ಕನೇ ದಿನದಾಟದಲ್ಲಿ ಕೊನೆಯ ವಿಕೆಟ್‌ಗಳನ್ನು ಉರುಳಿಸಿ ಗೆಲುವಿನ ಔಪಚಾರಿಕತೆ ಕೊನೆಗೊಳಿಸಲು ಎದುರು ನೋಡುತ್ತಿದೆ.

►ದಕ್ಷಿಣ ಆಫ್ರಿಕಾ 162 ರನ್‌ಗೆ ಆಲೌಟ್, ಭಾರತಕ್ಕೆ ಇನಿಂಗ್ಸ್ ಮುನ್ನಡೆ

 ಭಾರತದ ಮೊದಲ ಇನಿಂಗ್ಸ್ ಮೊತ್ತ 497ಕ್ಕೆ ಉತ್ತರವಾಗಿ ದಕ್ಷಿಣ ಆಫ್ರಿಕಾ ಸೋಮವಾರ 2 ವಿಕೆಟ್ ನಷ್ಟಕ್ಕೆ 9 ರನ್‌ನಿಂದ ಮೊದಲ ಇನಿಂಗ್ಸ್ ಆರಂಭಿಸಿತು. ಆದರೆ, 56.2 ಓವರ್‌ಗಳಲ್ಲಿ 162 ರನ್ ಗಳಿಸಿ ಗಂಟುಮೂಟೆ ಕಟ್ಟಿತು.

ಮೊದಲ ಇನಿಂಗ್ಸ್‌ನಲ್ಲಿ 335 ರನ್ ಮುನ್ನಡೆ ಪಡೆದ ಭಾರತದ ನಾಯಕ ವಿರಾಟ್ ಕೊಹ್ಲಿ ಎದುರಾಳಿ ಆಫ್ರಿಕಾ ತಂಡಕ್ಕೆ ಫಾಲೋ-ಆನ್ ವಿಧಿಸಿ ಮತ್ತೊಮ್ಮೆ ಬ್ಯಾಟಿಂಗ್ ಗೆ ಇಳಿಸಿದರು.

3ನೇ ದಿನದಾಟದ ಬೆಳಗ್ಗಿನ ಅವಧಿಯಲ್ಲಿ ದ.ಆಫ್ರಿಕಾದ ನಾಯಕ ಎಫ್‌ಡು ಪ್ಲೆಸಿಸ್(1)ರನ್ನು ಕ್ಲೀನ್‌ಬೌಲ್ಡ್ ಮಾಡಿದ ಉಮೇಶ್ ಯಾದವ್(3-40)ಭಾರತದ ವಿಕೆಟ್ ಬೇಟೆಗೆ ಚಾಲನೆ ನೀಡಿದರು. ತಲಾ 2 ವಿಕೆಟ್ ಪಡೆದ ಮುಹಮ್ಮದ್ ಶಮಿ(2-22), ಎಸ್.ನದೀಂ(2-22) ಹಾಗೂ ರವೀಂದ್ರ ಜಡೇಜ(2-19) ಯಾದವ್‌ಗೆ ಸಮರ್ಥ ಸಾಥ್ ನೀಡಿದರು.

ಚೊಚ್ಚಲ ಪಂದ್ಯದಲ್ಲಿ ಬವುಮಾ ಹಾಗೂ ನೊರ್ಟ್ಜೆ ವಿಕೆಟನ್ನು ಕಬಳಿಸಿದ ಸ್ಥಳೀಯ ಬೌಲರ್ ನದೀಂ ತನಗೆ ಲಭಿಸಿದ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡರು. 11.2 ಓವರ್‌ಗಳಲ್ಲಿ 4 ಮೇಡನ್ ಸಹಿತ 22 ರನ್ ನೀಡಿ 2 ವಿಕೆಟ್ ಪಡೆದರು. ಬವುಮಾ ವಿಕೆಟ್ ಪಡೆಯುವ ಮೂಲಕ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತನ್ನ ವಿಕೆಟ್ ಖಾತೆ ತೆರೆದರು.

ಮೊದಲ ಇನಿಂಗ್ಸ್‌ನಲ್ಲಿ ಆಫ್ರಿಕಾದ ಪರ ಝುಬೆರ್ ಹಂಝಾ (62, 79 ಎಸೆತ, 10 ಬೌಂಡರಿ, 1 ಸಿಕ್ಸರ್)ಅಗ್ರ ಸ್ಕೋರರ್ ಎನಿಸಿಕೊಂಡರು. 24ರ ಹರೆಯದ ಹಂಝಾ ಗಾಯಗೊಂಡಿರುವ ಮರ್ಕರಮ್ ಬದಲಿಗೆ ಆಡಿದ್ದು, ಚೊಚ್ಚಲ ಅರ್ಧಶತಕ ಸಿಡಿಸಿ ಗಮನ ಸೆಳೆದರು. ಲಿಂಡೆ(37) ಹಾಗೂ ಬವುಮಾ(32)ಎರಡಂಕೆಯ ಸ್ಕೋರ್ ಗಳಿಸಿದರು. ಹಂಝಾ ಹಾಗೂ ಬವುಮಾ 3ನೇ ವಿಕೆಟ್‌ಗೆ 91 ರನ್ ಜೊತೆಯಾಟ ನಡೆಸಿದರು.

►ದ್ವಿತೀಯ ಇನಿಂಗ್ಸ್‌ನಲ್ಲೂ ಮುಗ್ಗರಿಸಿದ ಆಫ್ರಿಕಾ: ಮೊದಲ ಇನಿಂಗ್ಸ್‌ನಂತೆಯೇ 2ನೇ ಇನಿಂಗ್ಸ್‌ನಲ್ಲಿ ದ.ಆಫ್ರಿಕಾದ ಆರಂಭಿಕ ಬ್ಯಾಟ್ಸ್ ಮನ್ ಕ್ವಿಂಟನ್‌ಡಿಕಾಕ್(5)ವಿಕೆಟ್ ಉರುಳಿಸಿ ಭಾರತಕ್ಕೆ ಮೇಲುಗೈ ಒದಗಿಸಿದರು. ಆನಂತರ ಮಧ್ಯಮ ಕ್ರಮಾಂಕಕ್ಕೆ ಮಾರಕವಾದ ಶಮಿ ಅವರು ಹಂಝಾ(0), ನಾಯಕ ಎಫ್‌ಡು ಪ್ಲೆಸಿಸ್(4) ಹಾಗೂ ಟೆಂಬಾ ಬವುಮಾ(00)ಸತತ ಓವರ್‌ಗಳಲ್ಲಿ ಪೆವಿಲಿಯನ್‌ಗೆ ಕಳುಹಿಸಿದರು. ಆಗ ದಕ್ಷಿಣ ಆಫ್ರಿಕಾದ ಸ್ಕೋರ್ 4 ವಿಕೆಟ್‌ಗೆ 22 ರನ್.

ಯಾದವ್ ಗಂಟೆಗೆ 145 ಕಿ.ಮೀ.ವೇಗದಲ್ಲಿ ಎಸೆದ ಚೆಂಡು ಆರಂಭಿಕ ಆಟಗಾರ ಡಿಯನ್ ಎಲ್ಗರ್ ಹೆಲ್ಮೆಟ್‌ಗೆ ಅಪ್ಪಳಿಸಿದಾಗ ಉಭಯ ತಂಡಗಳ ಆಟಗಾರರಿಗೆ ಶಾಕ್ ಆಯಿತು. ಟೀ ವಿರಾಮವನ್ನು ಬೇಗನೆ ಪಡೆಯಲಾಯಿತು. ಎಲ್ಗರ್ ಗಾಯಗೊಂಡು ನಿವೃತ್ತಿಯಾದರು.

ಲಿಂಡೆ ಅವರು ನದೀಂಗೆ ರನೌಟಾಗುವ ಮೊದಲು 27 ರನ್ ಗಳಿಸಿದರು. ಪೀಟ್(23)ಒಂದಷ್ಟು ಪ್ರತಿರೋಧ ತೋರಿದರು. ದಿನದಾಟದಂತ್ಯಕ್ಕೆ ಬ್ರೂನ್(ಔಟಾಗದೆ 30)ಹಾಗೂ ನೊರ್ಟ್ಜೆ(5)ಕ್ರೀಸ್ ಕಾಯ್ದುಕೊಂಡಿದ್ದಾರೆ.

ಎರಡನೇ ಇನಿಂಗ್ಸ್‌ನಲ್ಲಿ ಶಮಿ(3-10) ಹಾಗೂ ಯಾದವ್(2-35)ಐದು ವಿಕೆಟ್ ಹಂಚಿಕೊಂಡರು. ಸ್ಪಿನ್ನರ್‌ಗಳಾದ ಜಡೇಜ ಹಾಗೂ ಅಶ್ವಿನ್ ತಲಾ 1 ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News