ಬೇಗನೆ ಸೋಲುವ ಚಾಳಿಯಿಂದ ಹೊರಬರಲು ಪಿ.ವಿ. ಸಿಂಧುಗೆ ಮತ್ತೊಂದು ಅವಕಾಶ

Update: 2019-10-21 18:27 GMT

ಪ್ಯಾರಿಸ್,ಅ.21: ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ ಟೂರ್ನಿ ಮಂಗಳವಾರ ಇಲ್ಲಿ ಆರಂಭವಾಗಲಿದ್ದು, ಇತ್ತೀಚೆಗಿನ ದಿನಗಳಲ್ಲಿ ಟೂರ್ನಿಯಲ್ಲಿ ಬೇಗನೆ ಸೋತು ನಿರ್ಗಮಿಸುತ್ತಿರುವ ತನ್ನ ಚಾಳಿಯನ್ನು ಸರಿಪಡಿಸಿಕೊಳ್ಳಲು ವಿಶ್ವ ಚಾಂಪಿಯನ್ ಪಿ.ವಿ.ಸಿಂಧುಗೆ ಮತ್ತೊಂದು ಅವಕಾಶ ಲಭಿಸಿದ್ದು,ಇದನ್ನು ಬಳಸಿಕೊಳ್ಳಲು ಅವರು ಎದುರು ನೋಡುತ್ತಿದ್ದಾರೆ.

ಆಗಸ್ಟ್‌ನಲ್ಲಿ ಚೊಚ್ಚಲ ವಿಶ್ವ ಚಾಂಪಿಯನ್‌ಶಿಪ್ ಪ್ರಶಸ್ತಿ ಜಯಿಸಿದ ಬಳಿಕ ಸಿಂಧು ಕಳಪೆ ಫಾರ್ಮ್ ನಲ್ಲಿದ್ದು, ಕಳೆದ 3 ಟೂರ್ನಿಗಳಲ್ಲಿ ಎರಡನೇ ಸುತ್ತು ದಾಟಲು ವಿಫಲರಾಗಿದ್ದಾರೆ.

 ಸಿಂಧು ಕಳೆದ ತಿಂಗಳು ನಡೆದ ಚೀನಾ ಓಪನ್ ಹಾಗೂ ಕೊರಿಯಾ ಓಪನ್‌ನಲ್ಲಿ ಕ್ರಮವಾಗಿ ಎರಡನೇ ಹಾಗೂ ಮೊದಲನೇ ಸುತ್ತಿನಲ್ಲಿ ಎಡವಿದ್ದರು. ಕಳೆದ ವಾರ ನಡೆದ ಡೆನ್ಮಾರ್ಕ್ ಓಪನ್‌ನಲ್ಲಿ ಎರಡನೇ ಸುತ್ತಿನಲ್ಲಿ ಕೊರಿಯಾದ ಆ್ಯನ್ ಸೆ ಯಂಗ್ ವಿರುದ್ಧ ನೇರ ಗೇಮ್‌ಗಳಿಂದ ಸೋತು ಮತ್ತೊಮ್ಮೆ ಸೋತಿದ್ದರು.

ಟೂರ್ನಿಯಲ್ಲಿ 5ನೇ ರ್ಯಾಂಕಿನಲ್ಲಿರುವ 2017ರ ಸೆಮಿ ಫೈನಲಿಸ್ಟ್ ಸಿಂಧು ಮೊದಲ ಸುತ್ತಿನಲ್ಲಿ ಕೆನಡಾದ ವಿಶ್ವದ ನಂ.9ನೇ ಆಟಗಾರ್ತಿ ಮಿಚೆಲ್ ಲೀ ಅವರನ್ನು ಎದುರಿಸಲಿದ್ದಾರೆ. ಲೀ ಈ ತನಕ ಸಿಂಧು ವಿರುದ್ಧ ಆಡಿದ್ದ ಎರಡೂ ಪಂದ್ಯ ಜಯಿಸಿ ಅಜೇಯ ಜಯದ ದಾಖಲೆ ಕಾಯ್ದುಕೊಂಡಿದ್ದರು.

ವಿಶ್ವದ ನಂ.8ನೇ ಆಟಗಾರ್ತಿ ಸೈನಾ ನೆಹ್ವಾಲ್ ಟೂರ್ನಿಯಲ್ಲಿ ಆಡಲಿದ್ದಾರೆ. ಫಿಟ್ನೆಸ್ ಸಮಸ್ಯೆಯನ್ನು ಎದುರಿಸುತ್ತಿರುವ ಸೈನಾ ಕಳೆದ 3 ಟೂರ್ನಿಗಳಲ್ಲಿ ಬೇಗನೆ ನಿರ್ಗಮಿಸಿದ್ದರು. 2012ರ ಆವೃತ್ತಿಯಲ್ಲಿ ರನ್ನರ್ಸ್ ಅಪ್ ಆಗಿದ್ದ ಸೈನಾ ಮೊದಲ ಸುತ್ತಿನಲ್ಲಿ ಹಾಂಕಾಂಗ್‌ನ ಚೆವುಂಗ್ ನಗನ್‌ರನ್ನು ಎದುರಿಸಲಿದ್ದಾರೆ.

2017ರ ಚಾಂಪಿಯನ್ ಕೆ.ಶ್ರೀಕಾಂತ್, ಮಾಜಿ ಕಾಮನ್‌ವೆಲ್ತ್ ಚಾಂಪಿಯನ್ ಪಿ.ಕಶ್ಯಪ್, ಸಮೀರ್ ವರ್ಮಾ, ಬಿ.ಸಾಯಿ ಪ್ರಣೀತ್ ಪುರುಷರ ಸಿಂಗಲ್ಸ್‌ನಲ್ಲಿ ಸ್ಪರ್ಧಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News