ಬೆಲ್ಜಿಯಂ ಟೆನಿಸ್ ಓಪನ್: ಮರ್ರೆ ಚಾಂಪಿಯನ್

Update: 2019-10-21 18:29 GMT

ಪ್ಯಾರಿಸ್,ಅ.21: ವಿಶ್ವದ ಮಾಜಿ ನಂ.1 ಆಟಗಾರ ಆ್ಯಂಡಿ ಮರ್ರೆ ವಾರಾಂತ್ಯದಲ್ಲಿ ಆ್ಯಂಟ್‌ವರ್ಪ್ ನಲ್ಲಿ ಪುರುಷರ ಸಿಂಗಲ್ಸ್ ಪ್ರಶಸ್ತಿ ಜಯಿಸುವುದರೊಂದಿಗೆ ಸೋಮವಾರ ಬಿಡುಗಡೆಯಾದ ಎಟಿಪಿ ರ್ಯಾಂಕಿಂಗ್‌ನಲ್ಲಿ ನಾಟಕೀಯ ಏರಿಕೆ ಕಂಡಿದ್ದಾರೆ.

ಸ್ಕಾಟ್ಲೆಂಡ್‌ನ ಮರ್ರೆ ರವಿವಾರ ನಡೆದ ಫೈನಲ್ ಪಂದ್ಯದಲ್ಲಿ ಸ್ವಿಸ್‌ನ ಸ್ಟಾನ್ ವಾವ್ರಿಂಕ ವಿರುದ್ಧ 3-6, 6-4, 6-4 ನೇರ ಸೆಟ್‌ಗಳಿಂದ ಜಯ ಸಾಧಿಸಿದರು. ಎರಡು ವರ್ಷಗಳ ಬಳಿಕ ಮೊದಲ ಬಾರಿ ಪ್ರಶಸ್ತಿಗೆ ಮುತ್ತಿಟ್ಟರು. ಈ ಸಾಧನೆಯ ಮೂಲಕ 116 ಸ್ಥಾನ ಭಡ್ತಿ ಪಡೆದ ಮರ್ರೆ 127ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ.

ಮೂರು ಗ್ರಾನ್‌ಸ್ಲಾಮ್ ಒಡೆಯನಾಗಿರುವ ಮರ್ರೆ 2016ರ ನವೆಂಬರ್‌ನಿಂದ 2017ರ ಆಗಸ್ಟ್ ತನಕ 41 ವಾರಗಳ ಕಾಲ ನಂ.1 ಸ್ಥಾನದಲ್ಲಿದ್ದರು. 2018ರ ಜುಲೈನಲ್ಲಿ 839ನೇ ರ್ಯಾಂಕಿಗೆ ಕುಸಿದಿದ್ದರು. ಗಂಭೀರ ಗಾಯದ ಸಮಸ್ಯೆ ಅವರ ವೃತ್ತಿಜೀವನಕ್ಕೆ ಮಾರಕವಾಗಿ ಪರಿಣಮಿಸಿತ್ತು. ಸೆಪ್ಟಂಬರ್ ಅಂತ್ಯಕ್ಕೆ 503ನೇ ರ್ಯಾಂಕಿನಲ್ಲಿದ್ದ ಮರ್ರೆ ಮೂರು ವಾರಗಳಲ್ಲಿ 376 ಸ್ಥಾನ ಏರಿಕೆ ಕಂಡಿದ್ದಾರೆ.

ನೊವಾಕ್ ಜೊಕೊವಿಕ್ 273ನೇ ವಾರದಲ್ಲಿ ನಂ.1 ಸ್ಥಾನ ಉಳಿಸಿಕೊಂಡಿದ್ದಾರೆ. ರಫೆಲ್ ನಡಾಲ್ ಎರಡನೇ ಸ್ಥಾನದಲ್ಲಿದ್ದಾರೆ. ಅಗ್ರ-10 ರ್ಯಾಂಕಿಂಗ್‌ನಲ್ಲಿ ಕೇವಲ ಒಂದು ಬದಲಾವಣೆಯಾಗಿದೆ. ಜಪಾನ್‌ನ ಕೀ ನಿಶಿಕೊರಿ ಒಂದು ಸ್ಥಾನ ಮೇಲಕ್ಕೇರಿ 8ನೇ ಸ್ಥಾನ ತಲುಪಿದರು. ರಶ್ಯದ ಕರೆನ್ ಖಚನೊವ್ ಒಂದು ಸ್ಥಾನ ಕೆಳ ಜಾರಿದರು.

ಎಟಿಪಿ ರ್ಯಾಂಕಿಂಗ್

1.ನೊವಾಕ್ ಜೊಕೊವಿಕ್(ಸರ್ಬಿಯ), 2.ರಫೆಲ್ ನಡಾಲ್(ಸ್ಪೇನ್), 3. ರೋಜರ್ ಫೆಡರರ್(ಸ್ವಿಸ್), 4. ಡಾನಿಲ್ ಮೆಡ್ವೆಡೆವ್(ರಶ್ಯ), 5. ಡೊಮಿನಿಕ್ ಥೀಮ್(ಆಸ್ಟ್ರೀಯ), 6. ಅಲೆಕ್ಸಾಂಡರ್ ಝ್ವೆರೆವ್(ಜರ್ಮನಿ), 7. ಸ್ಟೆಫನೊಸ್ ಸಿಟ್ಸಿಪಾಸ್(ಗ್ರೀಸ್), 8. ಕೀ ನಿಶಿಕೊರಿ(ಜಪಾನ್), 9. ಕರೆನ್ ಖಚನೊವ್(ರಶ್ಯ), 10. ರೊಬರ್ಟೊ ಬೌಟಿಸ್ಟಾ(ಸ್ಪೇನ್).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News