ರಾಜ್ಯಮಟ್ಟದ ಕಿರುಚಿತ್ರ ಫೆಸ್ಟ್ 'ಕ್ಲಿಕ್' ಕಿರುಚಿತ್ರಕ್ಕೆ ಬಹುಮಾನ

Update: 2019-10-21 18:45 GMT

ಮೂಡುಬಿದಿರೆ : ಆರದಿರಲಿ ಬದುಕು ಆರಾಧನ ಸೇವಾ ಸಂಸ್ಥೆ ಪ್ರಸ್ತುತ ಪಡಿಸಿದ ರಾಜ್ಯಮಟ್ಟದ ಕಿರುಚಿತ್ರ ಫೆಸ್ಟ್-2019ರಲ್ಲಿ ಕ್ಲಿಕ್ ಕಿರುಚಿತ್ರವು ಪ್ರಥಮ ಬಹುಮಾನವನ್ನು ಗೆದ್ದುಕೊಂಡಿದೆ.

 ಒಟ್ಟು 32 ಕಿರುಚಿತ್ರಗಳು ಫೆಸ್ಟ್‍ನಲ್ಲಿ ಭಾಗವಹಿಸಿದ್ದು ಉತ್ತಮ ನಿರ್ದೇಶನಕ್ಕಾಗಿ (ಪರಾಗಸ್ಪರ್ಶ), ಉತ್ತಮ ನಟನೆಗಾಗಿ (ಬಣ್ಣ ಮತ್ತು ಬೇಬಿ ಗರ್ಲ್ ಮತ್ತು ಮಗಳೇ) ಉತ್ತಮ ಸಂಭಾಷಣೆ (ಅಕ್ಷರ), ಉತ್ತಮ ಸಾಹಿತ್ಯ (ಆ ಒಂದು ಕರೆ), ಉತ್ತಮ ಕಥೆ (ಬಣ್ಣ), ಉತ್ತಮ ಚಿತ್ರಕಥೆ (ಕ್ಲಿಕ್), ಉತ್ತಮ ಖಳನಾಯಕ (ಅಕ್ಷರ), ಉತ್ತಮ ಸಂಕಲನ (ಆ ಸ್ಟಿಲ್ ಲೈಫ್), ಉತ್ತಮ ಹಿನ್ನಲೆ ಸಂಗೀತ (ಜನನಿ), ಉತ್ತಮ ಛಾಯಾಗ್ರಹಣ (ಅಕ್ಷಮ್ಯ), ಉತ್ತಮ ಬಾಲನಟಿ (ಬಾಂಧವ್ಯ), ಉತ್ತಮ ಸಂದೇಶ(ಫೇಸ್ಬುಕ್ ಗೆಳತಿ), ಭರವಸೆಯ ನಟರು (ಯಾವ ಮೋಹನ ಮುರಳಿ ಕರೆಯಿತು,ಪರಂ, ಆತ್ಮಹತ್ಯೆ, ಕನ್ನಡ್ ನಹಿ ಕನ್ನಡ ಹೇ, ತಿರುವು, ಕಾರ್ಪೋರೇಟ್ ಕಪಲ್ಸ್, ಸಬಲೆ, ಭಾರತೀ ಹಾಗೂ ಕಂದಮ್ಮದಲ್ಲಿ ಮೂಡಿ ಬಂದಿದ್ದಾರೆ.    

ವಿಜೇತ ಕಿರುಚಿತ್ರದ  ನಿರ್ದೇಶಕ, ನಟ ಶರವಣ ಡಿ.ಬೆಂಗಳೂರು ಅವರು ತನ್ನ ಕಿರುಚಿತ್ರಕ್ಕೆ ಬಹುಮಾನವಾಗಿ ಸಿಕ್ಕಿರುವ ರೂ. 10,000 ನಗದನ್ನು ಆರದಿರಲಿ ಬದುಕು ಆರಾಧನ ಸೇವಾ ಸಂಸ್ಥೆಗೆ ನೀಡಿದ್ದಾರೆ. 

ಮೂಡುಬಿದಿರೆ ವೃತ್ತ ನಿರೀಕ್ಷಕ ದಿನೇಶ್ ಕುಮಾರ್ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಮೂಡುಬಿದಿರೆಯು ಜೈನ ಕಾಶಿ, ವಿದ್ಯಾಕಾಶಿ ಮಾತ್ರವಲ್ಲ ಇದು ಸಾಂಸ್ಕೃತಿಕ ಕಾಶಿಯೂ ಹೌದು. ಮಕ್ಕಳು ಸಾಂಸ್ಕೃತಿಕವಾಗಿ ಬೆಳೆಯಲು ಇಂತಹ ಕಾರ್ಯಕ್ರಮಗಳು ಸ್ಪೂರ್ತಿದಾಯಕ. ಒಂದು ನಾಗರಿಕವಾಗಿ ಎಲ್ಲರಿಗೂ ಸ್ಪೂರ್ತಿಯಾಗಿ ಆರದಿರಲಿ ಬದುಕು ಆರಾಧನ ತಂಡವು ಸಮಾಜಮುಖಿಯಾಗಿ ಕೆಲಸವನ್ನು ಮಾಡುತ್ತಾ ಬರುತ್ತಿರುವುದು ಶ್ಲಾಘನೀಯ. ಸಮಾಜ ಮಂದಿರವೆಂದು ಗುರುತಿಸಿಕೊಂಡಿರುವ ಈ ಸಮಾಜಮುಖಿ ಮಂದಿರದಲ್ಲಿ ಕಾರ್ಯಕ್ರಮಗಳು ನಡೆಯುತ್ತಾ ಬರುತ್ತಿರುವುದು ಸಂತಸದ ವಿಷಯ ಎಂದರು. 

ಯುವ ವಾಗ್ಮಿ ಭಕ್ತಿಶ್ರೀ ಆಚಾರ್ಯ ಪ್ರಧಾನ ಭಾಷಣಗೈದರು. 

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಎಂ, ಮೂಡುಬಿದಿರೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವೇಣುಗೋಪಾಲ, ಪತ್ರಕರ್ತ ಧನಂಜಯ ಮೂಡುಬಿದಿರೆ, ಬೆದ್ರ ತುಳು ಕೂಟದ ಅಧ್ಯಕ್ಷ ಚಂದ್ರಹಾಸ ದೇವಾಡಿಗ, ಜವನೆರ್ ಬೆದ್ರದ ಸ್ಥಾಪಕಾಧ್ಯಕ್ಷ ಅಮರ್ ಕೋಟೆ, ಸಂಸ್ಥೆಯ ಅಭಿಷೇಕ್ ಶೆಟ್ಟಿ, ಚಿತ್ರನಟಿ ಆರಾಧನ ಭಟ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. 

ಕಿರುಚಿತ್ರ ಸ್ಪರ್ಧೆಯಲ್ಲಿ ಪತ್ರಕರ್ತ ಶೇಖರ ಅಜೆಕಾರು, ದೇವಿ ಪ್ರಸಾದ್ ಮಂಗಳೂರು, ಪ್ರಗತಿಪರ ಕೃಷಿಕ ಆಲ್ವೀನ್ ಮಿನೇಜಸ್ ಉಪಸ್ಥಿತರಿದ್ದರು. 

ಪತ್ರಕರ್ತ ಹರೀಶ್ ಕೆ.ಆದೂರು ಸ್ವಾಗತಿಸಿದರು. ಕಾರ್ಯಕ್ರಮದ ಸಂಯೋಜಕಿ ಪದ್ಮಶ್ರೀ ಭಟ್ ನಿಡ್ಡೋಡಿ ಪ್ರಾಸ್ತಾವಿಕವಾಗಿ ಮಾತನಾಡಿ ಸೇವಾ ಮನೋಭಾವವನ್ನು ಹೊಂದಿರುವ ಆರದಿರಲಿ ಬದುಕು ಆರಾಧನಾ ಸೇವಾ ಸಂಸ್ಥೆಯು ಈಗಾಗಲೇ ಸಮಾಜದ ಹಲವು ದೀನ ಬಡವರಿಗೆ ಆನಾರೋಗ್ಯ ಪೀಡಿತರಿಗೆ ತಿಂಗಳಿಗೊಬ್ಬರಂತೆ ಸಹಾಯಹಸ್ತವನ್ನು ನೀಡುತ್ತಾ ಬಂದಿದ್ದು ಒಂದು ವರ್ಷದಲ್ಲಿ 3ಲಕ್ಷ ರೂವನ್ನು ಸಹಾಯ ನೀಡಿದೆ ಎಂದರು. ವಿಜಯ ಕುಮಾರ್ ಜೈನ್ ಕಾರ್ಯಕ್ರಮ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News