ಬ್ಯಾಂಕ್‌ಗಳನ್ನು ಮುಚ್ಚುವ ಹುನ್ನಾರ: ರಘುರಾಮಕೃಷ್ಣ ಬಲ್ಲಾಳ್

Update: 2019-10-22 13:47 GMT

ಉಡುಪಿ, ಅ.22: ದೇಶ ಎದುರಿಸುತ್ತಿರುವ ಆರ್ಥಿಕ ಸಂಕಷ್ಟವನ್ನು ಮರೆ ಮಾಚಿ ಜನರ ಗಮನ ಬೇರೆ ಕಡೆ ಸೆಳೆಯಲು ಕೇಂದ್ರ ಸರಕಾರ ಬ್ಯಾಂಕ್‌ಗಳ ವಿಲೀನೀಕರಣಗೊಳಿಸುವ ಸಂಚು ನಡೆಸಿದೆ. ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಬ್ಯಾಂಕ್‌ಗಳನ್ನು ವಿಲೀನ ಮಾಡುವ ಮೂಲಕ ಬ್ಯಾಂಕ್‌ಗಳನ್ನು ಮುಚ್ಚುವ ಹುನ್ನಾರ ನಡೆಸಲಾಗುತ್ತಿದೆ ಎಂದು ಉಡುಪಿ ಕಾರ್ಪೊರೇಶನ್ ಬ್ಯಾಂಕ್ ನೌಕರರ ಸಂಘದ ಉಪಾಧ್ಯಕ್ಷ ರಘುರಾಮಕೃಷ್ಣ ಬಲ್ಲಾಳ್ ಆರೋಪಿಸಿದ್ದಾರೆ.

ಬ್ಯಾಂಕ್‌ಗಳ ವಿಲೀನೀಕರಣಗೊಳಿಸಿರುವ ಕೇಂದ್ರ ಸರಕಾರದ ನಿರ್ಧಾರವನ್ನು ವಿರೋಧಿಸಿ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ ಮತ್ತು ಬ್ಯಾಂಕ್ ಎಂಪ್ಲಾಯಿಸ್ ಫೆಡರೇಶನ್ ಆಫ್ ಇಂಡಿಯಾ ಉಡುಪಿ ಜಿಲ್ಲಾ ಘಟಕಗಳ ನೇತೃತ್ವದಲ್ಲಿ ಮಂಗಳವಾರ ಕಾರ್ಪೊರೇಶನ್ ಬ್ಯಾಂಕ್ ಉಡುಪಿ ವಲಯ ಕಚೇರಿ ಎದುರು ಹಮ್ಮಿಕೊಳ್ಳಲಾದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.

ಬ್ಯಾಂಕ್ ವಿಲೀನದಿಂದ ಯಾವುದೇ ಸಾಧನೆ ಮಾಡಲು ಸಾಧ್ಯವಿಲ್ಲ. ಸ್ಟೇಟ್ ಬ್ಯಾಂಕ್‌ಗಳ ವಿಲೀನದಿಂದ ಈಗಾಗಲೇ 6950 ಶಾಖೆಗಳು ಮುಚ್ಚಲ್ಪಟ್ಟಿವೆ. ನಿರುದ್ಯೋಗ ಸಮಸ್ಯೆ ದೊಡ್ಡ ಮಟ್ಟದಲ್ಲಿ ಇರುವ ಇಂತಹ ಸಂದರ್ಭದಲ್ಲಿ ವಿಲೀನದಿಂದ 50ಸಾವಿರ ಬ್ಯಾಂಕ್ ಉದ್ಯೋಗಗಳು ನಷ್ಟವಾಗಿವೆ. ಬ್ಯಾಂಕ್ ಗಳಲ್ಲಿ ಸಾರ್ವಜನಿಕರಿಗೆ ಶುಲ್ಕ ಜಾಸ್ತಿ ಮಾಡಲಾಗಿದೆ ಎಂದವರು ದೂರಿದರು.

ಸಿಂಡಿಕೇಟ್ ಬ್ಯಾಂಕ್ ನೌಕರರ ಸಂಘದ ರಾಜ್ಯ ಜೊತೆ ಕಾರ್ಯದರ್ಶಿ ಪ್ರೇಮನಾಥ ಪೂಜಾರಿ ಮಾತನಾಡಿ, ಈಗಾಗಲೇ ವಿಲೀನ ಆಗಿರುವ ಬ್ಯಾಂಕ್ ಗಳ ಸಿಬ್ಬಂದಿಗಳು ಶೋಚನೀಯ ಪರಿಸ್ಥಿತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಗ್ರಾಹಕರು ಕೂಡ ತಮ್ಮ ಸೇವೆಯನ್ನು ಪಡೆದುಕೊಳ್ಳಲು ಪರದಾಡುತ್ತಿದ್ದಾರೆ. ಈ ಸಮಸ್ಯೆಗಳನ್ನು ಕೇಂದ್ರ ಸರಕಾರ ಕೇಳಿಯೂ ಕೇಳದಂತೆ ಮಾಡುತ್ತಿದೆ. ದೊಡ್ಡ ಕಾರ್ಪೊರೇಟ್ ಕಂಪೆನಿಗಳಿಗೆ ನೀಡಿದ ಸಾಲಗಳನ್ನು ಮನ್ನಾ ಮಾಡಿ, ಸಣ್ಣ ಪುಟ್ಟ ಸಾಲಗಳನ್ನು ಒತ್ತಡ ಹಾಕಿ ವಸೂಲಿ ಮಾಡಲಾಗುತ್ತಿದೆ. ಮೊದಲು ಕಾರ್ಪೊರೇಟರ್‌ಗಳಿಗೆ ನೀಡಿರುವ ಸಾಲವನ್ನು ವಸೂಲಿ ಮಾಡಿ ಬ್ಯಾಂಕ್ ಗಳನ್ನು ಉಳಿುವ ಕಾರ್ಯ ಮಾಡಬೇಕು ಎಂದರು.

ಕರ್ಣಾಟಕ ಬ್ಯಾಂಕಿನ ನಿತ್ಯಾನಂದ, ಫೆಡರೇಶನ್‌ನ ರವೀಂದ್ರ, ಜಿಲ್ಲಾ ಸಂಘಟನೆ ಅಧ್ಯಕ್ಷ ರಾಮಮೋಹನ್, ನೌಕರರ ಸಂಘಟನೆಯ ರಮೇಶ್ ಮಾತ ನಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಹೆರಾಲ್ಡ್ ಡಿಸೋಜ, ವಿವಿಧ ಬ್ಯಾಂಕ್‌ಗಳ ಪರವಾಗಿ ನಾಗೇಶ್ ನಾಯಕ್, ಮನೋಜ್ ಕುಮಾರ್, ಜಯನ್ ಮಲ್ಪೆ, ಗುರುದತ್, ಸೂರಜ್ ಮೊದಾದವರು ಉಪಸ್ಥಿತರಿದ್ದರು.

ಮೋದಿ, ನಿರ್ಮಲಾ ವಿರುದ್ಧ ತುಳುವಿನಲ್ಲಿ ಘೋಷಣೆ !

ಮೋದಿ ಮೋದಿ ಪಂಡೆರ್, ಮೋದಿ ಮೋಡಿ ಮಲ್ತೇರ್, ಬ್ಯಾಂಕ್ ಪೂರಾ ಕೆರಿಯೆರ್. ಓ ಅಪ್ಪೆ ನಿರ್ಮಲಾ, ಉಂದು ಈರ್‌ನ ನ್ಯಾಯನಾ, ಸಿಂಡಿಕೇಟ್ ಬ್ಯಾಂಕ್, ಕಾರ್ಪೊರೇಶನ್ ಬ್ಯಾಂಕ್ ಎಂಕಲ್ನಾ(ಮೋದಿ ಮೋದಿ ಹೇಳಿದರು, ಮೋದಿ ಮೋಡಿ ಮಾಡಿದರೂ, ಎಲ್ಲ ಬ್ಯಾಂಕ್‌ಗಳನ್ನು ಸಾಯಿಸಿದರು. ಓ ಅಮ್ಮ ನಿರ್ಮಲಾ, ನೀವು ಮಾಡಿರುವುದು ನ್ಯಾಯವೇ, ಸಿಂಡಿಕೇಟ್ ಬ್ಯಾಂಕ್, ಕಾರ್ಪೊರೇಶನ್ ಬ್ಯಾಂಕ್ ನಮ್ಮದು) ಎಂಬ ಘೋಷಣೆಗಳನ್ನು ಪ್ರತಿಭಟನ ಕಾರರು ಕೂಗಿದರು. ಅಲ್ಲದೆ ಕನ್ನಡ, ಇಂಗ್ಲಿಷ್, ಭಾಷೆಗಳಲ್ಲೂ ಕೇಂದ್ರ ಸರಕಾರದ ನೀತಿ ವಿರುದ್ಧ ಘೋಷಣೆಯ ಮೂಲಕ ಆಕ್ರೋಶ ವ್ಯಕ್ತಪಡಿಸ ಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News