ಯಕ್ಷಸೌರಭ ಮೇಳದ ಯಕ್ಷ ಸಪ್ತಾಹ ಉದ್ಘಾಟನೆ

Update: 2019-10-22 13:51 GMT

ಕುಂದಾಪುರ, ಅ.22: ಕಾವ್ರಾಡಿ ಮಹಮ್ಮದ್ ಗೌಸ್ ನೇತೃತ್ವದ ಯಕ್ಷ ಸೌರಭ ಮೇಳದ ಯಕ್ಷ ಸಪ್ತಾಹವು ಕುಂದಾಪುರ ಜ್ಯೂನಿಯರ್ ಕಾಲೇಜಿನ ಲಕ್ಷ್ಮೀ ನರಸಿಂಹ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಲಾಗಿತ್ತು.

ಸಪ್ತಾಹವನ್ನು ಉದ್ಘಾಟಿಸಿದ ಹಿರಿಯ ನ್ಯಾಯವಾದಿ ಎ.ಎಸ್.ಎನ್.ಹೆಬ್ಬಾರ್ ಮಾತನಾಡಿ, ಶುದ್ಧ ಕನ್ನಡ ಉಳಿದಿರುವುದು ಕೇವಲ ಯಕ್ಷಗಾನ ದಲ್ಲಿ ಮಾತ್ರ. ಯಾವುದೇ ಕಾರಣಕ್ಕೂ ಕಲಾವಿದರ ವಾಕ್‌ಚಾತುರ್ಯದ ಮಧ್ಯೆ ಇಂಗ್ಲೀಷ್ ಶಬ್ಧ ಬಳಕೆಯಾಗದಿರುವುದು ನಮ್ಮ ಹೆಮ್ಮೆಯ ಯಕ್ಷಗಾನ ಮಾಧ್ಯಮದಲ್ಲಿ ಅಲ್ಲದೇ ಇಂತಹ ಸಮೃದ್ಧ ಕಲೆಯನ್ನು ಉಳಿಸಿ ಬೆಳೆಸಬೇಕಾದ್ದು ಕಲಾಭಿಮಾನಿಗಳಾದ ನಮ್ಮ ನಿಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ನ್ಯಾಯವಾದಿ ಗೋಪಾಲಕೃಷ್ಣ ಶೆಟ್ಟಿ, ಪ್ರಸಂಗಕರ್ತ ಡಾ.ಬಸವರಾಜ್ ಶೆಟ್ಟಿಗಾರ್, ಉದ್ಯಮಿ ರಘುರಾಮ್ ರಾವ್, ಭಾಗವತ ಸುರೇಶ್ ಶೆಟ್ಟಿ, ಪ್ರಧಾನ ಕಲಾವಿದ ಸುರೇಶ್ ಬಂಗೇರ, ಯಕ್ಷ ಪ್ರೋತ್ಸಾಹಕ ಸುಧಾಕರ ಶೆಟ್ಟಿ ಕಂಡ್ಲೂರು ಶುಭ ಹಾರೈಸಿದರು.

ಯಕ್ಷಾಭಿಮಾನಿ ಬಸ್ರೂರು ದಿವಾಕರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಮಹಮ್ಮದ್ ಗೌಸ್ ವಂದಿಸಿದರು. ಪ್ರಸಂಗಕರ್ತ ಮಹಾಬಲ ಹೇರಿಕುದ್ರು ಕಾರ್ಯಕ್ರಮ ನಿರೂಪಿಸಿದರು. ಬಳಿಕ ದಿವಂಗತ ಕಾಳಿಂಗ ನಾವಡರ ನಾಗಶ್ರೀ ಯಕ್ಷಗಾನ ಪ್ರದರ್ಶನ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News