ಕರ್ನಾಪೆಕ್ಸ್ ಯಶಸ್ವಿ : 4 ದಿನಗಳಲ್ಲಿ 10 ಲಕ್ಷ ರೂ. ಮೌಲ್ಯದ ಅಂಚೆಚೀಟಿ, ಕವರ್‌ಗಳ ಮಾರಾಟ

Update: 2019-10-22 14:02 GMT

ಮಂಗಳೂರು, ಅ.22: ರಾಜ್ಯ ಮಟ್ಟದ ಅಂಚೆ ಚೀಟಿ ಪ್ರದರ್ಶನ ಕರ್ನಾಪೆಕ್ಸ್ 2019 ಪ್ರಥಮ ಬಾರಿಗೆ ಮಂಗಳೂರಿನಲ್ಲಿ ನಡೆದಿದ್ದು ಯಶಸ್ವಿ ಕಂಡಿದೆ. ನಾಲ್ಕು ದಿನಗಳ ಈ ಪ್ರದರ್ಶನದಲ್ಲಿ ಸುಮಾರು 10 ಲಕ್ಷ ರೂ. ವೌಲ್ಯದ ಅಂಚೆ ಚೀಟಿಗಳು ಹಾಗೂ ಕವರ್‌ಗಳು ಮಾರಾಟವಾಗಿವೆ ಎಂದು ಮಂಗಳೂರು ವಿಭಾಗೀಯ ಅಂಚೆ ಕಚೇರಿಯ ಹಿರಿಯ ಅಧೀಕ್ಷಕ ಶ್ರೀಹರ್ಷ ತಿಳಿಸಿದ್ದಾರೆ.

ಬಲ್ಮಠದ ಅಂಚೆ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಪ್ರದರ್ಶನವು ಸಾರ್ವಜನಿಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಪ್ರದರ್ಶನದಲ್ಲಿ ಜಾರ್ಜ್ ಫೆರ್ನಾಂಡಿಸ್, ಅನಂತ ಪೈ, ಗಿರೀಶ್ ಕಾರ್ನಾಡ್, ಮಟ್ಟುಗುಳ್ಳ, ಶಂಕರ ಪುರ ಮಲ್ಲಿಗೆ, ಯುಫ್ಲಿಕ್ಟಿಸ್ ಅಲೋಸಿ, ರಾಷ್ಟ್ರಧ್ವಜ, ಸಿದ್ದಿ ಜನಾಂಗ, ತುಳು ಸಿನೆಮಾ, ಶ್ರೀಮಂತಿ ಬಾಯಿ ಮ್ಯೂಸಿಯಂಗಳ ಬಗ್ಗೆ ವಿಶೇಷ ಅಂಚೆ ಲಕೋಟೆಯು ಬಿಡುಗಡೆಗೊಂಡಿದ್ದವು. ತಲಾ 2000 ಕವರ್‌ಗಳನ್ನು ಮುದ್ರಿಸಲಾಗಿದ್ದು, ತಲಾ 1000 ದಂತೆ ಕವರ್‌ಗಳನ್ನು ಮಾರಾಟಕ್ಕೆ ಪ್ರದರ್ಶನದಲ್ಲಿ ಇರಿಸಲಾಗಿದ್ದು, ಬಹುತೇಕ ಕವರ್‌ಗಳು ಮಾರಾಟವಾಗಿವೆ. ಅಂಚೆ ಇಲಾಖೆಯ ಜತೆಗೆ ಅಂಚೆ ಚೀಟಿಗಳ ಮಹತ್ವವನ್ನು ಸಾರುವಲ್ಲಿ ಪ್ರದರ್ಶನ ಯಶಸ್ವಿಯಾಗಿದೆ ಎಂದು ಅವರು ಹೇಳಿದರು.

ಮಂಗಳೂರಿನ ಸಂತ ಅಲೋಶಿಯಸ್, ಎಂಆರ್‌ಪಿಎಲ್‌ನ ಶಾಲೆಗಳಲ್ಲಿ ಈಗಾಗಲೇ ಅಂಚೆಚೀಟಿ ಕ್ಲಬ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಶಾರಾದಾ ವಿದ್ಯಾಲಯವು ಕೂಡಾ ಕ್ಲಬ್ ಆರಂಭಿಸಲು ಮುಂದಾಗಿದೆ. ಈ ಮೂಲಕ ಮಕ್ಕಳಲ್ಲಿ ಅಂಚೆ ಚೀಟಿಗಳ ಮಹತ್ವವನ್ನು ತಿಳಿಸುವ ಉದ್ದೇಶವನ್ನು ಹೊಂದಲಾಗಿದೆ ಎಂದು ಅವರು ಹೇಳಿದರು.

ಮೈಸ್ಟಾಂಪ್‌ಗೆ ಉತ್ತಮ ಬೇಡಿಕೆ ಇದ್ದು, ನಗರದ ಪಾಂಡೇಶ್ವರದಲ್ಲಿರುವ ಮುಖ್ಯ ಅಂಚೆ ಕಚೇರಿಯಲ್ಲಿ ಹುಟ್ಟುಹಬ್ಬ, ವಾರ್ಷಿಕೋತ್ಸವ, ಮದುವೆ, ನಿವೃತ್ತಿ ಕಾರ್ಯಕ್ರಮ ಸೇರಿದಂತೆ ವಿವಿಧ ಸಂದರ್ಭಗಳಿಗೆ ಅನುಗುಣವಾಗಿ 300 ರೂ.ಗಳನ್ನು ನೀಡಿ ಅಂಚೆ ಚೀಟಿಗಳನ್ನು ಮುದ್ರಿಸಿಕೊಳ್ಳಬಹು ದಾಗಿದೆ. ಅಂಚೆ ಚೀಟಿಗಳು ಪ್ರಸ್ತುತ ಪತ್ರ ವ್ಯವಹಾರಕ್ಕೆ ಸಂಬಂಧಿಸಿ ಕಡಿಮೆ ಬಳಕೆಯಾಗುತ್ತಿದೆಯಾದರೂ ಸ್ಮರಣಿಕೆಯಾಗಿ, ಹವ್ಯಾಸಿ ಸಂಗ್ರಹವಾಗಿ ಹೆಚ್ಚು ಪ್ರಚಲಿದಲ್ಲಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News